ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಎ. ಪಿ ಅರ್ಜುನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಒಟ್ಟು 13 ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಮಾರ್ಟಿನ್ ಚಿತ್ರದ ಟ್ರೇಲರ್, ಟೀಸರ್ನ ಮುಂದುವರಿದ ಭಾಗದಂತಿದೆ. ಮೇಕಿಂಗ್ ಬೊಂಬಾಟ್. ಆಕ್ಷನ್ ಉಸಿರುಗಟ್ಟಿಸುವಂತಿದೆ. ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಜಪಾನ್, ಚೀನೀ, ಬೆಂಗಾಲಿ, ಕೊರಿಯನ್, ಸ್ಪಾನಿಷ್, ಅರೇಬಿಕ್ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಮಾರ್ಟಿನ್ ಟ್ರೇಲರ್ ರಿಲೀಸ್ ಆಗಿದೆ. 130ಭಾಷೆಗಳಲ್ಲಿಯೂ ಧ್ರುವ ಸರ್ಜಾ ಅವರೇ ಡಬ್ ಮಾಡಿದ್ದಾರಂತೆ.
‘ಮಾರ್ಟಿನ್’ ಚಿತ್ರದಲ್ಲಿರೋದು ಪ್ರೀತಿ ಹಾಗೂ ದೇಶಪ್ರೇಮದ ಕಥೆ. ಸತ್ಯ ಹೆಗಡೆ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಟ್ರೇಲರ್ನ್ನು ಇನ್ನಷ್ಟು ಎತ್ತರಕ್ಕೇರಿಸಿವೆ. ಇದು ಕನ್ನಡ ಸಿನಿಮಾನಾ ಅಥವ ಹಾಲಿವುಡ್ ಸಿನಿಮಾನ ಎನ್ನುವ ಮಟ್ಟದಲ್ಲಿ ಮೇಕಿಂಗ್ ವೈಭವ ಎದ್ದು ಕಾಣುತ್ತಿದೆ. ನಿರ್ದೇಶಕ ಎಪಿ ಅರ್ಜುನ್, ಕಥೆಯ ಬಗ್ಗೆ ಹೆಚ್ಚು ಸುಳಿವು ಬಿಟ್ಟುಕೊಟ್ಟಿಲ್ಲ.
ಪಾಕಿಸ್ತಾನದ ಸೇನಾ ಅಧಿಕಾರಿ ‘ಮಾರ್ಟಿನ್’ನನ್ನು ಕೊಂದುಬಿಡಿ ಎಂದು ತನ್ನ ಸೇನೆಗೆ ಆಜ್ಞೆ ಮಾಡುವುದರೊಂದಿಗೆ ಟ್ರೇಲರ್ ಶುರುವಾಗುತ್ತೆ. ಅದಕ್ಕೆ ಕಾರಣ ಆತ ಪಾಕಿಸ್ತಾನಕ್ಕೆ ಹೋಗಿ ಕ್ರೈಂ ಮಾಡಿದ್ದಾನೆ ಎನ್ನುವುದು. ಅವನು ಪಾಕಿಸ್ತಾನಕ್ಕೆ ಬಂದಿರುವುದೇ ದೊಡ್ಡ ಕ್ರೈಂ ಎನ್ನುತ್ತಾನೆ. ಅವನ ಕೈಯಲ್ಲಿರುವ ಇಂಡಿಯನ್ ಟ್ಯಾಟೂ ಹಾಗೂ ಆತನನ್ನು ಮುಗಿಸಿಬಿಡಿ. ಇಲ್ಲೇ ಊತು ಹಾಕಿ ಎಂದು ಹೇಳುತ್ತಾನೆ. ಅಷ್ಟೊತ್ತಿಗೆ ಧ್ರುವ ಸರ್ಜಾ ಎಂಟ್ರಿಯಾಗುತ್ತೆ.
ಒಂದಷ್ಟು ಆಕ್ಷನ್ ಸನ್ನಿವೇಶಗಳು, ಆತನ ಮೇಲೆ ಅಟ್ಯಾಕ್, ಅದಕ್ಕೆ ಆತನ ತಿರುಗೇಟು ಆರ್ಭಟ ಎಲ್ಲವನ್ನೂ ತೋರಿಸುತ್ತಲೇ.. ಭಾರೀ ವಿಧ್ವಂಸ ಮಾಡುತ್ತಾನೆ ಮಾರ್ಟಿನ್. ಗನ್ ಹಿಡಿದು ಸಣ್ಣ ಡೈಲಾಗ್ ಹೇಳಿ ‘ಮಾರ್ಟಿನ್’ ಗಹಗಹಿಸಿ ನಗುತ್ತಾನೆ. ಇದಿಷ್ಟೂ ಟ್ರೇಲರ್.
ಧ್ರುವ ಸರ್ಜಾ ಜೊತೆಗೆ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಜಾರ್ಜಿಯಾ ಆಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ನಿಕಿತಿನ್ ಧೀರ್ ಸೇರಿದ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅಕ್ಟೋಬರ್ 11ಕ್ಕೆ ಸಿನಿಮಾ ವಿಶ್ವದಾದ್ಯಂತ ಏಕಕಾಲಕ್ಕೆ ತೆರೆಗಪ್ಪಳಿಸಲಿದೆ. ಮುಂಬೈನಲ್ಲಿ 2೩ ದೇಶಗಳ ಪತ್ರಕರ್ತರ ಸಮ್ಮುಖದಲ್ಲಿ ‘ಮಾರ್ಟಿನ್’ ಟ್ರೇಲರ್ ಅನಾವರಣ ಆಗಿದೆ.
2012ರಲ್ಲಿ ‘ಅದ್ಧೂರಿ’ ಸಿನಿಮಾ ಮೂಲಕ ಧ್ರುವ ಸರ್ಜಾ ಚಿತ್ರರಂಗಕ್ಕೆ ಬಂದರು. ಕಳೆದ ಈ 11 ವರ್ಷದಲ್ಲಿ ಧ್ರುವ ನಟಿಸಿದ 4 ಸಿನಿಮಾಗಳು ಮಾತ್ರ ಬಿಡುಗಡೆ ಆಗಿದೆ. ಮಾರ್ಟಿನ್ ಕೂಡಾ ಬರೋಬ್ಬರಿ ಮೂರೂವರೆ ವರ್ಷಗಳ ಬಳಿಕ ರಿಲೀಸ್ ಆಗುತ್ತಿದೆ. ಅಂದಹಾಗೆ ಮಾರ್ಟಿನ್ ಕೂಡಾ ಎರಡು ಭಾಗಗಳಲ್ಲಿ ಬರುತ್ತಿದ್ದು, ಮಾರ್ಟಿನ್ ಭಾಗ 2, ಆರು ತಿಂಗಳ ನಂತರ ಬರಲಿದೆಯಂತೆ.
ಸುಮಾರು 100 ಕೋಟಿ ರೂ.ಗಳಿಗೂ ಅಧಿಕ ಬಂಡವಾಳದಲ್ಲಿ ಮೂಡಿಬಂದಿರುವ ‘ಮಾರ್ಟಿನ್’ ಅನ್ನು ಪ್ಯಾನ್ ವರ್ಲ್ಡ್ ರೇಂಜ್‌ನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಸದ್ಯ ಮುಂಬೈನಲ್ಲಿ ನಡೆದ ಇವೆಂಟ್‌ನಲ್ಲಿ ಧ್ರುವ ಸರ್ಜಾ, ನಾಯಕಿ ವೈಭವಿ ಶಾಂಡಿಲ್ಯಾ, ನಟಿ ಅನ್ವೇಷಿ ಜೈನ್, ನಿರ್ದೇಶಕ ಎ ಪಿ ಅರ್ಜುನ್, ನಿರ್ಮಾಪಕ ಉದಯ್ ಕೆ ಮೆಹ್ತಾ ಜೊತೆಗೆ ನಟ ಅರ್ಜುನ್ ಸರ್ಜಾ ಕೂಡ ಭಾಗಿಯಾಗಿದ್ದರು.



