ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಸುದ್ದಿ ಸುದ್ದಿ ಡಾಲಿ ಧನಂಜಯ ರಾಜಕೀಯಕ್ಕೆ ಬರ್ತಾರಂತೆ ಅನ್ನೋ ಸುದ್ದಿ. ಇಂತಹ ಸುದ್ದಿಗಳು ಚಿತ್ರರಂಗಕ್ಕೂ ಹೊಸದಲ್ಲ. ರಾಜಕೀಯದವರಿಗೂ ಹೊಸದಲ್ಲ. ಆದರೆ, ಡಾಲಿ ಧನಂಜಯ ರಾಜಕೀಯ ಎಂಟ್ರಿ ಸುದ್ದಿಯ ಹಿಂದಿನ ಮುಂದಿನ ಬೆಳವಣಿಗೆಗಳನ್ನೆಲ್ಲ ಲೆಕ್ಕ ಹಾಕಿ, ಇದ್ರೂ ಇರಬಹುದು ಅನ್ನೋ ಅಭಿಪ್ರಾಯಕ್ಕೆ ಬರಲಾಗಿತ್ತು. ಮೈಸೂರಿನಿಂದ ಕಾಂಗ್ರೆಸ್ ಕ್ಯಾಂಡಿಡೇಟ್ ಆಗಿ ಕಂಟೆಸ್ಟ್ ಮಾಡ್ತಾರಂತೆ ಅಂತಾ ಸುದ್ದಿಯಾಗಿತ್ತು. ಧನಂಜಯ ಅವರ ಜಾತಿ ಲೆಕ್ಕಾಚಾರವನ್ನೂ ಹಾಕಿ, ಪ್ರತಾಪ್ ಸಿಂಹ ವಿರುದ್ಧ ಕರೆಕ್ಟ್ ಕ್ಯಾಂಡಿಡೇಟ್ ಅಂತೆಲ್ಲ ಸುದ್ದಿಯಾಗಿತ್ತು. ಇದಕ್ಕೆಲ್ಲ ಡಾಲಿ ಧನಂಜಯ ಫುಲ್ ಸ್ಟಾಪ್ ಇಟ್ಟಿದ್ದಾರೆ.
ನಾನು ಕೆಲಸದ ಮೇಲೆ ಹೈದರಾಬಾದ್ʻಗೆ ಹೋಗಿದ್ದೆ. ಅಲ್ಲಿಂದ ಬರುವಷ್ಟರಲ್ಲಿ ನನ್ನನ್ನು ಎಲೆಕ್ಷನ್‌ಗೆ ನಿಲ್ಲಿಸಿ, ನನಗೆ ಟಿಕೆಟ್ ಕೊಡಿಸಿ ಎಲ್ಲ ಮಾಡಿಬಿಟ್ಟಿದ್ದೀರ.
ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾರಾದ್ರೂ ಹೇಳಿದ್ದಾರಾ? ಇವನನ್ನು ಸಿನಿಮಾದಿಂದ ಆಚೆ ಕಳಿಸಿ ಅಂತ. ನಾನು ಸಿನಿಮಾ ಮಾಡ್ತೀನಿ.. ನಾನು ಸಿನಿಮಾ ಮಾಡಬೇಕು. ನಟನಾಗಿ ತುಂಬಾ ಕನಸು ಕಟ್ಟಿಕೊಂಡು ಬಂದಿದ್ದೇನೆ ಎಂದಿರುವ ಧನಂಜಯ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಆಲೋಚನೆ ಇಲ್ಲ. ನಾನೊಬ್ಬ ಕಾಮನ್ ಮ್ಯಾನ್. ಕಾಮನ್ ಮ್ಯಾನ್ ಆಗಿಯೇ ಇರುತ್ತೇನೆ ಎಂದು ಹೇಳಿದ್ದಾರೆ.
ಲಿಡ್ಕರ್ ಅನ್ನೋ ಸಂಸ್ಥೆಯಲ್ಲಿ ಸಾವಿರಾರು ಬಡ ಕುಟುಂಬಗಳಿವೆ. ಅದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಅಂತ ಕೇಳಿದಾಗ, ತುಂಬಾ ಖುಷಿಯಾಗಿ ಒಪ್ಪಿಕೊಂಡೆ ಅಷ್ಟು ಬಿಟ್ರೆ ಬೇರೆ ರಾಜಕೀಯ ಲಾಭದ ಉದ್ದೇಶ ಇಲ್ಲ. ನಾನು ನಟನಾಗಿ, ನಿರ್ಮಾಪಕನಾಗಿ ಚಿತ್ರರಂದಲ್ಲಿಯೇ ಇರ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಗೊತ್ತಿಲ್ಲ ಅಂತಲ್ಲ. ಆದರೆ ಅದನ್ನು ನಿಭಾಯಿಸುವ ಛಾತಿ ನನಗಿಲ್ಲ. ಅದಕ್ಕೆ ಅದರದ್ದೇ ಆದ ಕ್ವಾಲಿಟೀಸ್ ಇರುತ್ತೆ. ನನಗೆ ಎಲ್ಲ ಪಕ್ಷಗಳಲ್ಲೂ ಗೆಳೆಯರಿದ್ಧಾರೆ. ಪ್ರಚಾರಕ್ಕೆ ಕರೀತಾರೆ. ಆದರೆ, ನಾನು ಪ್ರಚಾರಕ್ಕೇ ಹೋಗಲ್ಲ. ನನಗೆ ಆ ರೀತಿಯ ರಾಜಕೀಯ ಇಷ್ಟ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಡಾಲಿ ಧನಂಜಯ.
ಒಟ್ನಲ್ಲಿ ಡಾಲಿ ಧನಂಜಯ ಅವರ ಒಟ್ಟಾರೆ ಮಾತಿನ ಸಾರಾಂಶ ಇಷ್ಟೆ. ಡಾಲಿ ಧನಂಜಯ ರಾಜಕೀಯಕ್ಕೆ ಬರಲ್ಲ. ಚುನಾವಣೆಗೆ ನಿಲ್ಲಲ್ಲ. ರಾಜಕೀಯಕ್ಕೂ ಅವರಿಗೂ ಅಡ್ಜಸ್ಟ್ ಆಗಲ್ಲ. ಫುಲ್ ಟೈಂ ಸಿನಿಮಾದಲ್ಲೇ ಇರ್ತಾರೆ. ಈಗ ಏನ್ ಮಾಡ್ತಿದ್ದಾರೋ.. ಹಾಗೆಯೇ ಆಕ್ಟಿಂಗ್ ಮಾಡ್ತಾರೆ. ಖುಷಿಯಾದ್ರೆ ಹಾಡು ಬರೀತಾರೆ. ದುಡ್ಡೂ ಇದ್ದು, ಕಥೆ ಇಷ್ಟವಾದ್ರೆ ಪ್ರೊಡ್ಯೂಸ್ ಮಾಡ್ತಾರೆ. ತಮಗೇ ಸೂಟ್ ಆದ್ರೆ ತಮಗೇ ಅಥವಾ ಬೇರೆಯವರು ಮಾಡೋ ಸಬ್ಜೆಕ್ಟ್ ಇದ್ರೆ ಬೇರೆಯವರಿಗೆ ಸಿನಿಮಾ ಮಾಡ್ತಾರೆ. ನೋ ಪಾಲಿಟಿಕ್ಸ್.



