ಟಾಕ್ಸಿಕ್. ಸೌಂಡ್ ಸಖತ್ತಾಗಿದೆ. ಯಶ್ ಅವರ ಈ ಚಿತ್ರದ ಒಂದೇ ಒಂದು ಅಧಿಕೃತ ಸುದ್ದಿ ಇಲ್ಲದೇ ಇದ್ರೂ.. ಸುದ್ದಿ ಆಗ್ತಾನೇ ಇದೆ. ಅವರು ನಟಿಸ್ತಾರಂತೆ.. ಇವರು ಓಕೆ ಅಂದ್ರಂತೆ.. ಶೂಟಿಂಗಿಗೆ ಸೆಟ್ ರೆಡಿ ಆಗಿದ್ಯಂತೆ. ಕನ್ನಡದವರಿಗೇ ಕೆಲಸ ಕೊಡ್ತಿದ್ದಾರಂತೆ. ಶ್ರೀಲಂಕಾದಲ್ಲಿ ಶೂಟಿಂಗ್ ಅಂತೆ. ಹೀಗೆ.. ಸುದ್ದಿಗಳೋ ಸುದ್ದಿಗಳು. ಯಶ್ ಅವರ ಟಾಕ್ಸಿಕ್ ಸೌಂಡು ಜೋರಾಗಿದೆ.
ಕರೀನಾ ಕಪೂರ್ ಚಿತ್ರದಿಂದ ಹೊರ ನಡೆದಿದ್ದಾರೆ. ನಾಯಕಿಯಾಗಿ ಕಿಯಾರಾ ಅಡ್ವಾಣಿ ಫೈನಲ್ ಆಗಿದೆ. ಈ ಮಧ್ಯೆ ಕರೀನಾ ಕಪೂರ್ ಅವರ ಪಾತ್ರಕ್ಕೆ ನಯನತಾರಾ ಅವರ ಹೆಸರು ಕೇಳಿ ಬರುತ್ತಿದೆ. ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ ಟಾಕ್ಸಿಕ್. 2025ರ ಏಪ್ರಿಲ್ 10 ರಂದು ರಿಲೀಸ್ ಡೇಟ್ ಕೂಡಾ ಘೋಷಿಸಿರುವ ಚಿತ್ರದ ಚಿತ್ರೀಕರಣ ಇನ್ನೂ ಶುರುವಾಗಿಲ್ಲ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಪ್ಯಾನ್ ಇಂಡಿಯಾ ಚಿತ್ರಕ್ಕೆ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಯನತಾರ ಜೊತೆಯಾಗಿರುವುದು ಈಗ ಸೆನ್ಸೇಷನ್ ಆಗಿದೆ.
ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಬಹುಭಾಷಾ ನಟಿ ನಯನತಾರಾ ಅವರನ್ನು ಸಂಪರ್ಕಿಸಿದ್ದು, ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಮೂಲಗಳು ಹೇಳುತ್ತಿವೆ. ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಯಶ್ ಕ್ರೇಜ್ ಹೇಗಿದೆಯೋ.. ಹಾಗೆಯೇ.. ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಯನತಾರ ಕ್ರೇಜ್ ಹಾಗಿದೆ. ಹಾಗೆ ನೋಡಿದರೆ.. ಕನ್ನಡದಲ್ಲಿಯೇ ನಯನತಾರ ಅವರ ಕ್ರೇಜ್ ಕಡಿಮೆ ಎಂದು ಹೇಳಬಹುದು.
ಸೂಪರ್ ಚಿತ್ರದಲ್ಲಿ ಉಪೇಂದ್ರ ಅವರ ಜೊತೆ ನಟಿಸಿದ್ದ ನಯನತಾರ, ಅದಾದ ಮೇಲೆ ಕನ್ನಡದಲ್ಲಿ ನಟಿಸಿಲ್ಲ. ಸೂಪರ್ ಚಿತ್ರ ಮಾಡುವಾಗ ಖ್ಯಾತ ನಟಿಯಾಗಿದ್ದ ನಯನತಾರ, ಈಗ ಲೇಡಿ ಸೂಪರ್ ಸ್ಟಾರ್ ಎಂಬ ಹಿರಿಮೆ ಗಳಿಸಿದ್ಧಾರೆ. ಅವರೀಗ ಯಶ್ ಅವರ ಚಿತ್ರದಲ್ಲಿ ಜೊತೆಯಾಗುತ್ತಿರುವುದು ಸಂಚಲನ ಸೃಷ್ಟಿಸಿದೆ. ಆದರೆ.. ಇದೂ ಕೂಡಾ ಅಧಿಕೃತ ಸುದ್ದಿಯಲ್ಲ.
ವಿಚಿತ್ರವೆಂದರೆ.. ಚಿತ್ರತಂಡದವರು ಒಂದೇ ಒಂದು ಸುದ್ದಿಯನ್ನು ಹೇಳುತ್ತಿಲ್ಲ. ಸುಳ್ಳುಗಳನ್ನೂ ಬಿಟ್ಟಿದ್ದಾರೆ. ಸತ್ಯಗಳನ್ನೂ ಬಿಟ್ಟಿದ್ಧಾರೆ. ಯಾವುದಕ್ಕೂ ಯೆಸ್ ಅಥವಾ ನೋ ಎಂದು ಹೇಳಿಲ್ಲ.



