ಎಲೆಕ್ಷನ್ ರಂಗೇರುತ್ತಿದೆ. 26ಕ್ಕೇ ಮೊದಲ ಹಂತದ ಚುನಾವಣೆ. ಮಂಡ್ಯದಲ್ಲಿ ಆವತ್ತೇ ಎಲೆಕ್ಷನ್. ಮಂಡ್ಯದ ಎಲ್ಲರಿಗೂ ಗೊತ್ತಿದ್ದ ಗುಟ್ಟೊಂದು ಈಗ ಬಹಿರಂಗವಾಗಿದೆ. ಏಕೆಂದರೆ.. ಈ ಮಾತನ್ನು ಕುಮಾರಸ್ವಾಮಿ ಹೇಳುತ್ತಿದ್ದರು. ಮಂಡ್ಯದ ರಾಜಕೀಯ ಬಲ್ಲವರಿಗೂ ಇದು ಗೊತ್ತಿತ್ತು. ಆದರೆ.. ಬಹಿರಂಗವಾಗಿ ಹೇಳುತ್ತಿರಲಿಲ್ಲ. ಈಗ ಅದು ಬಹಿರಂಗವಾಗಿದೆ. ನಟ ದರ್ಶನ್ ಅವರಿಂದ.
2019ರ ಚುನಾವಣೆಯಲ್ಲಿ ಚಲುವಣ್ಣ ನಮಗೆ ಸಹಾಯ ಮಾಡಿದ್ದರು. ಆ ಋಣವನ್ನು ನಾನು ಸಾಯುವವರೆಗೂ ಮರೆಯಲ್ಲ. ಚಲುವಣ್ಣ ಮಾಡಿದ ಸಹಾಯ 7 ಜನ್ಮವಾದರೂ ತೀರಿಸಲು ಆಗಲ್ಲ. ಇದೇ ನಾನು ಇಂದು ಕಾಂಗ್ರೆಸ್ ಪರ ಬಂದಿರುವುದಕ್ಕೆ ಒಂದೇ ಕಾರಣ.
ಇದು ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡ್ತಿರೋ ದರ್ಶನ್ ಅವರು ಹೇಳಿರೋ ಮಾತು. 2019ರ ಎಲೆಕ್ಷನ್ನಿನಲ್ಲಿ ಚೆಲುವರಾಯ ಸ್ವಾಮಿ ಸಹಾಯ ಮಾಡಿದ್ದು ಸುಮಲತಾ ಅಂಬರೀಷ್ ಅವರ ಗೆಲುವಿಗಾಗಿ ಅನ್ನೋದು ಈ ಮೂಲಕ ಬಹಿರಂಗವಾಗಿದೆ.
2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಇತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಪುತ್ರ ನಿಖಿಲ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ನಿಖಿಲ ಕುಮಾರಸ್ವಾಮಿ ವಿರುದ್ಧ ಪಕ್ಷೇತರವಾಗಿ ಸುಮಲತಾ ಅಂಬರೀಶ್ ಸ್ಪರ್ಧಿಸಿದ್ದರು. ಸುಮಲತಾ ಅಂಬರೀಶ್ ಅವರ ಪರ ದರ್ಶನ್ ಪ್ರಚಾರ ಮಾಡಿದ್ದರು. ಅಂತಿಮವಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗೆದ್ದರು.
ಸುಮಲತಾ ಅಂಬರೀಶ್ ಅವರ ಗೆಲವಿಗೆ ಕೇವಲ ಅನುಕಂಪದ ಅಲೆ, ಜೆಡಿಎಸ್ ನಾಯಕರ ಲಂಗು ಲಗಾಮಿಲ್ಲದ ಹೇಳಿಕೆಗಳು, ಬಿಜೆಪಿ ಬೆಂಬಲ, ಸ್ಟಾರ್ ನಟರ ಪ್ರಚಾರ ಮಾತ್ರ ಅಲ್ಲದೆ, ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಕೈಜೋಡಿಸಿದ್ದು ಕಾರಣ ಎನ್ನುವುದೂ ರಹಸ್ಯವೇನೂ ಆಗಿರಲಿಲ್ಲ. ಏಕೆಂದರೆ ಪಕ್ಷದ ನಾಯಕರ ಮಟ್ಟದಲ್ಲಿ ಆಗಿದ್ದ ಮೈತ್ರಿ ಸ್ಥಳೀಯ ಮಟ್ಟದಲ್ಲಿ ಆಗಿರಲಿಲ್ಲ. ಹೀಗಾಗಿಯೇ ನಿಖಿಲ್ ಕುಮಾರಸ್ವಾಮಿ ಸೋತು, ಸುಮಲತಾ ಗೆದ್ದಿದ್ದರು.
ಅಂದಹಾಗೆ ನಿಖಿಲ್ ಅವರನ್ನು ಗೆಲ್ಲಿಸಲು ನಾವು ಇನ್ನಿಲ್ಲದ ಹೋರಾಟ ನಡೆಸಿದೆವು ಎಂದು ಹೇಳಿಕೊಳ್ಳುವ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಸುಳ್ಳು ಹೇಳ್ತಿದ್ದಾರಾ.. ಅನ್ನೋದು ಎಲ್ಲರಿಗೂ ಕಾಡುವ ಪ್ರಶ್ನೆ.
ಏಕೆಂದರೆ.. ಇವತ್ತಿಗೂ ನಾವು ಮೈತ್ರಿಗೆ ಬದ್ಧರಾಗಿದ್ದೆವು. ಕುಮಾರಸ್ವಾಮಿ ಸಹಕರಿಸಲಿಲ್ಲ ಎನ್ನುವ ಡಿಕೆ ಮತ್ತು ಸಿದ್ದು ಅದನ್ನೇ ಹೇಳಿಕೊಂಡು ಬರುತ್ತಿದ್ಧಾರೆ. ಇತ್ತ ಕುಮಾರಸ್ವಾಮಿ ತಮ್ಮ ಬೆನ್ನ ಹಿಂದೆ ಕಾಂಗ್ರೆಸ್ಸಿಗರು ಚೂರಿ ಹಾಕಿದರು ಎನ್ನುವುದನ್ನೂ ಹೇಳಿಕೊಂಡು ಬರುತ್ತಿದ್ಧಾರೆ. ಹಾಗೆ ನೋಡಿದರೆ.. ಕಾಂಗ್ರೆಸ್ಸಿಗರಷ್ಟೇ ಅಲ್ಲ.. ನಿಖಿಲ್ ಅವರನ್ನು ನಿಲ್ಲಿಸಿದ್ದು ಮಂಡ್ಯದ ಸ್ಥಳೀಯ ಜೆಡಿಎಸ್ ಕಾರ್ಯಕರ್ತರಿಗೂ ಬೇಸರ ಮೂಡಿಸಿತ್ತು ಅನ್ನೋದು ಬೇರೆ ವಿಷಯ.
ಈಗ ನಡೆಯುತ್ತಿರುವ ಚುನಾವಣೆಯಲ್ಲಿಯೂ ಅಷ್ಟೆ, ಬಿಜೆಪಿ ಸದಸ್ಯೆಯಾಗಿರುವ ಸುಮಲತಾ ಅಂಬರೀಷ್ ಅಪ್ಪಿ ತಪ್ಪಿಯೂ ಕುಮಾರಸ್ವಾಮಿ ಪರ ಪ್ರಚಾರ ಮಾಡಿಲ್ಲ. ಬದಲಿಗೆ.. ಸುಮಲತಾ ತಮ್ಮ ಮಗ ಎಂದೇ ಹೇಳಿಕೊಳ್ಳುವ ದರ್ಶನ್ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡ್ತಿದ್ದಾರೆ. ಒಟ್ಟಿನಲ್ಲಿ ಋಣ ಸಂದಾಯ ನಡೆಯುತ್ತಿದೆ.



