ಒಂದು ಕಡೆ ಜೆಡಿಎಸ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಖಾಡಕ್ಕಿಳಿಯುತ್ತಿದೆ. ಕಳೆದ ಬಾರಿ ಒಂದು ಸೀಟು ಮಾತ್ರವೇ ಗೆದ್ದಿದ್ದ ಜೆಡಿಎಸ್, ಈ ಬಾರಿ ಮೈತ್ರಿ ಮಾಡಿಕೊಂಡು ಮೂರು ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿದೆ. ಕಳೆದ ಬಾರಿಯೂ 3 ಕ್ಷೇತ್ರಗಳಲ್ಲಿ ಮಾತ್ರವೇ ಸ್ಪರ್ಧಿಸಿತ್ತು. (ಇನ್ನೊಂದು ಕ್ಷೇತ್ರ ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಸ್ಪರ್ಧಿಸಿತ್ತಾದರೂ.. ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ಅವರನ್ನು ಜೆಡಿಎಸ್ʻಗೆ ಕರೆತಂದು ಟಿಕೆಟ್ ಕೊಟ್ಟಿತ್ತು ) ಇನ್ನೊಂದು ಕಡೆ ತುಮಕೂರಿನಲ್ಲಿ ದೇವೇಗೌಡರೇ ಸೋತಿದ್ದರು. ಮಂಡ್ಯದಲ್ಲಿ ನಿಖಿಲ್ ಕೂಡಾ ಸೋತಿದ್ದರು. ಹೆಜ್ಜೆ ಹೆಜ್ಜೆಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಲಾಭ ಪಡೆದವರು ಬಿಜೆಪಿಯವರು.
ಮೈತ್ರಿಯ ಎಡವಟ್ಟುಗಳ ಜೊತೆ ಮೋದಿಯ ಅಲೆಯೂ ಸೇರಿ ಬಿಜೆಪಿ 25+01 ಸೀಟುಗಳನ್ನು ಗೆದ್ದಿತ್ತು. ಹೀಗಾಗಿಯೇ.. ಈ ಬಾರಿ ಮೈತ್ರಿಯಲ್ಲಿ ಗೊಂದಲಗಳಾಗದಂತೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ ಜೆಡಿಎಸ್. ಕಳೆದ ಬಾರಿಯ ಗೊಂದಲ ಆಗಬಾರದೆಂದೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಕುಮಾರಸ್ವಾಮಿ ಅಷ್ಟ ಸೂತ್ರಗಳನ್ನು ಮುಂದಿಟ್ಟಿದ್ದರೆ, ರೇವಣ್ಣ ಯಡಿಯೂರಪ್ಪ ಮತ್ತು ದೇವೇಗೌಡರಿಗೆ ಒಂದು ಪಾತ್ರ ಕೊಟ್ಟಿದ್ಧಾರೆ.
ಕುಮಾರಸ್ವಾಮಿ ಅಷ್ಟ ಸೂತ್ರ : ಮೈತ್ರಿ ಧರ್ಮಪಾಲನೆ ಮಾಡುವ ಉದ್ದೇಶದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಎಲ್ಲ ಹಂತದ ಮುಖಂಡರಿಗೆ 8 ಪ್ರಮುಖ ಅಂಶಗಳನ್ನು ಒಳಗೊಂಡ ನಿರ್ದೇಶನಗಳನ್ನು ರವಾನಿಸಿದ್ದಾರೆ. ರಾಜ್ಯದಲ್ಲಿನ 28 ಲೋಕಸಭಾ ಕ್ಷೇತ್ರ ಗಳ ಪೈಕಿ ಮಂಡ್ಯ, ಹಾಸನ ಮತ್ತು ಕೋಲಾರ (ಮೀಸಲು) ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಉಳಿದ 25 ಲೋಕಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈ ಎಲ್ಲಾ ಕ್ಷೇತ್ರಗಳಲ್ಲೂ ಮೈತ್ರಿಕೂಟದ ಎರಡೂ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಬೆಂಬಲಿಸುತ್ತ ಮತ್ರಿ ಧರ್ಮ ಪಾಲನೆ ಮಾಡಬೇಕಾಗುತ್ತದೆ. ಈ ಸಂಬಂಧ ಜೆಡಿಎಸ್‌ನ ತತ್ವ, ಸಿದ್ಧಾಂತ ಮತ್ತು ಬದ್ದತೆಗೆ ಧಕ್ಕೆಯಾಗದ ರೀತಿಯಲ್ಲಿ ಚುನಾವಣೆ ಪ್ರಚಾರವನ್ನು ಕೈಗೊಳ್ಳಬೇಕಾಗಿದೆ ಎಂದು ಅವರು ಪತ್ರದ ಮೂಲಕ ತಿಳಿಸಿದ್ದಾರೆ.
ಕುಮಾರಸ್ವಾಮಿ ಅಷ್ಟ ಸೂತ್ರಗಳೇನು..?
1 ಎರಡೂ ಪಕ್ಷಗಳು ಎರಡೂ ಪಕ್ಷದ ಚಿಹ್ನೆಗಳನ್ನು ಸಮ ಮಾಡಬೇಕು ಅಳತೆಯಲ್ಲಿ ಬಳಕೆ
2 ಸಾರ್ವಜನಿಕ ಸಭೆ ಮತ್ತು ಚುನಾ ವಣಾ । ಪ್ರಚಾರ: ಸಭೆಗಳಲ್ಲಿ ಎರಡೂ ಪಕ್ಷಗಳ ಬಾವುಟ ಪ್ರದರ್ಶಿಸಬೇಕು
3 ಜೆಡಿಎಸ್ ಮತ್ತು ಬಿಜೆಪಿ ನಾಯಕರ ಫೋಟೋಗಳನ್ನು ಭೇದವಿಲ್ಲದೇ ಉಪಯೋಗಿಸಿಕೊಳ್ಳಬೇಕು
4 ಸಭೆಗಳಲ್ಲಿ ಕಡ್ಡಾಯವಾಗಿ ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ಪಕ್ಷದ ಶಾಲುಗಳನ್ನು ಬಳಸಬೇಕು
5 ರಾಷ್ಟ್ರ ಮತ್ತು ರಾಜ್ಯಮಟ್ಟದ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಸಾಧನೆಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು
6 ಕ್ಷೇತ್ರ/ಜಿಲ್ಲಾ/ವಿಧಾನಸಭಾವಾರು ಮುಖಂಡರ ಫೋಟೋಗಳನ್ನು ಕ್ಷೇತ್ರವಾರು ಸಮನ್ವಯ ಸಮಿತಿ ಯಲ್ಲಿ ಚರ್ಚಿಸಿ ಬಳಸಬೇಕು
7 ಮೈತ್ರಿ ಪಕ್ಷದೊಂದಿಗೆ ಚರ್ಚಿಸಿ, ಮತ ಗಟ್ಟೆ ಸಮಿತಿಗಳನ್ನು ರಚಿಸಿ, ಮತದಾ ರರನ್ನು ಮತಗಟ್ಟೆಗೆ ಕರೆತಂದು ಮೈತ್ರಿ ಅಭ್ಯರ್ಥಿಗಳ ಪರವಾಗಿ ಮತದಾನ ಮಾಡುವಂತೆ ಕ್ರಮ ವಹಿಸುವುದು
8 ಗೊಂದಲ ಉಂಟು ಮಾಡಿಕೊಳ್ಳಬಾ ರದು. ಕಠಿಣ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಪಕ್ಷದ ಕೇಂದ್ರ ಕಚೇರಿಯ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು
ದೇವೇಗೌಡ & ಯಡಿಯೂರಪ್ಪ ಅವರಿಗೆ ರೇವಣ್ಣ ಕೊಟ್ಟ ಪಾತ್ರ : ಇದೇ ವೇಳೆ ಹೆಚ್.ಡಿ.ರೇವಣ್ಣ ಅವರು ಯಡಿಯೂರಪ್ಪ ಅವರ ಮನೆಗೆ ಭೇಟಿ ಕೊಟ್ಟಿರುವುದು ವಿಶೇಷವಾಗಿದೆ. ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಈ ಬಾರಿಯೂ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ. ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸುವ ವೇಳೆ ದೇವೇಗೌಡ ಮತ್ತು ಯಡಿಯೂರಪ್ಪ ಹಾಜರಿರಬೇಕು ಎನ್ನುವುದು ರೇವಣ್ಣ ಮುಂದಿಟ್ಟಿರುವ ಸೂತ್ರ.
ಹಾಸನದಲ್ಲಿ ಲಿಂಗಾಯತರ ಸಂಖ್ಯೆಯೂ ದೊಡ್ಡ ಸಂಖ್ಯೆಯಲ್ಲಿದೆ. ಅರಸೀಕೆರೆ, ಬೇಲೂರು ಹಾಗೂ ಸಕಲೇಶಪುರ ಕ್ಷೇತ್ರಗಳಲ್ಲಿ ಲಿಂಗಾತರು ಪ್ರಬಲರಾಗಿಯೇ ಇದ್ದಾರೆ. ಜೊತೆಗೆ ಯಡಿಯೂರಪ್ಪ ಬಂದರೆ ಈಗ ಅಡ್ಡಗಾಲು ಹಾಕಿಕೊಂಡೇ ಓಡಾಡುತ್ತಿರುವ ಪ್ರೀತಂ ಗೌಡ ಅವರನ್ನು ಸೈಲೆಂಟ್ ಮಾಡಬಹುದು. ಅಷ್ಟೇ ಅಲ್ಲ, ಯಡಿಯೂರಪ್ಪ ಮತ್ತು ದೇವೇಗೌಡ ಒಟ್ಟಿಗೇ ಬಂದರೆ ಇಡೀ ರಾಜ್ಯಕ್ಕೆ ಒಂದೊಳ್ಳೆ ಸಂದೇಶ ರವಾನೆಯಾಗಲಿದೆ ಎನ್ನುವುದು ರೇವಣ್ಣ ಅವರು ಕೊಟ್ಟಿರುವ ಪ್ರಪೋಸಲ್ಲು. ಯಡಿಯೂರಪ್ಪ ಈ ಪ್ರಪೋಸಲ್ಲಿಗೆ ಒಪ್ಪಿದ್ಧಾರೆ ಎಂಬ ಸುದ್ದಿ ಇದೆ.



