ಬಂಗಾರಪ್ಪ ಕುಟುಂಬದವರು ಒಟ್ಟಿಗಿಲ್ಲ. ಒಗ್ಗಟ್ಟಾಗಿಲ್ಲ. ಇದು ರಾಜ್ಯಕ್ಕೇ ಗೊತ್ತಿರುವ ವಿಷಯ. ಅವರ ಜಗಳ ಹಾದಿರಂಪ ಬೀದಿರಂಪವಾಗಿದೆ. ಅಣ್ಣ ಕುಮಾರ್ ಮತ್ತು ತಮ್ಮ ಮಧು ಇಬ್ಬರೂ ಟಿವಿ ಸ್ಟುಡಿಯೋಗಳಲ್ಲಿ ಬಾಯಿಗೆ ಬಂದಂತೆ ಬೈದಾಡಿಕೊಂಡಿದ್ದನ್ನು ನೋಡಿದೆ ಕರ್ನಾಟಕ. ಯಾರು ತಪ್ಪು.. ಯಾರು ಸರಿ.. ಅದು ಇವತ್ತಿಗೂ ಅರ್ಥವಾಗಿಲ್ಲ. ಆದರೆ, ಕುಮಾರ್ ಬಂಗಾರಪ್ಪ ಅವರ ತಂಗಿಯೂ ಆಗಿರುವ ಪತ್ನಿ ಗೀತಾ ಹಾಗೂ ಮಧು ಪರ ನಿಂತಿದ್ಧಾರೆ. ಆದರೆ, ಯಾವತ್ತಿಗೂ ಕುಮಾರ್ ವಿರುದ್ಧ ಸೊಲ್ಲೆತ್ತಿಲ್ಲ. ಯಾವ ಮಾತನ್ನೂ ಆಡಿಲ್ಲ. ಆದರೆ, ಈಗ ಶಿವಣ್ಣ ಕೂಡಾ ಟಾರ್ಗೆಟ್ ಆಗುವಂತೆ ಮಾಡಿರುವುದು ಪಾಲಿಟಿಕ್ಸ್.
ಲೋಕಸಭೆ ಚುನಾವಣೆ ರಿಸಲ್ಟ್ ಬಂದಾಗಿದೆ. ಕಾಂಗ್ರೆಸ್ಸಿಂದ ನಿಂತಿದ್ದ ಗೀತಾ ಶಿವ ರಾಜ್ ಕುಮಾರ್ ಸೋತಿದ್ಧಾರೆ. ಗೆದ್ದಿದ್ದು ಬಿಜೆಪಿಯ ಬಿ.ವೈ.ರಾಘವೇಂದ್ರ. ಗೀತಾ, ಬಂಗಾರಪ್ಪನವರ ಮಗಳು. ಶಿವಣ್ಣನ ಪತ್ನಿ ಹಾಗೂ ದೊಡ್ಮನೆಯ ಸೊಸೆ. ಇತ್ತ ರಾಘವೇಂದ್ರ, ಯಡಿಯೂರಪ್ಪನವರ ಪುತ್ರ. ಈ ಮೊದಲೂ ಎರಡು ಬಾರಿ ಸಂಸದರಾಗಿದ್ದವರು. ಈಗ ಹ್ಯಾಟ್ರಿಕ್ ಸಾಧಿಸಿದ್ಧಾರೆ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಅಣ್ಣ. ಇನ್ನು ಕುಮಾರ್ ಬಂಗಾರಪ್ಪ ಕೂಡಾ ಬಿಜೆಪಿಯಲ್ಲಿರುವ ಮಾಜಿ ಶಾಸಕ. ಹೀಗಿರುವಾಗ ಕುಮಾರ್ ಬಂಗಾರಪ್ಪ ಮತ್ತು ಗೀತಾ ಹಾಗೂ ಮಧು ಬಂಗಾರಪ್ಪನವರ ಮಾತುಗಳ ಗುಂಡು ಸಿಡಿಗುಂಡು ನಿಂತಿಲ್ಲ.
ಬಿಜೆಪಿ ಗೆದ್ದ ನಂತರ ಸೋಷಿಯಲ್ ಮೀಡಿಯಾದಲ್ಲೊಂದು ಪೋಸ್ಟ್ ಹಾಕಿರುವ ಕುಮಾರ್ ಬಂಗಾರಪ್ಪ ಮಾತಿನ ಸಾರಾಂಶ ಇಷ್ಟು.
ಗೀತಾ ಶಿವ ರಾಜ್ ಕುಮಾರ್ ವಿರುದ್ಧ :
ಸ್ವಂತ ಸಹೋದರನ ಭವಿಷ್ಯಕ್ಕೆ ತೊಡರುಗಾಲು ಹಾಕಲೆಂದೇ ಬೆಂಗಳೂರಿನಿಂದ ಧಾವಿಸಿಬಂದು ವಾತಾವರಣ ಕಲುಷಿತಗೊಳಿಸಿದ್ದು ಗೀತಾ. ಈಗ ದಿಕ್ಕು ದೆಸೆ ಇಲ್ಲದಂತಾಗಿ ಬೆಂಗಳೂರು ಸೇರಿದ್ಧಾರೆ. ಅವರ ಕ್ಷೇತ್ರ, ಸಿನಿಮಾ ಅದನ್ನು ನಿಭಾಯಿಸಿಕೊಂಡಿರುವುದು ಆರೋಗ್ಯಕರ. ನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ. ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ, ಬೇರೆಯವರಿಗೆ ಅವಕಾಶ ಸಿಗಲಾರದು.ಹೆದರಿಸುವ, ಬೆದರಿಸುವ, ಹುಷಾರ್ ಅನ್ನುವ ಮಾತುಗಳೇನಿದ್ದರೂ ಗಂಟಲೋಳಗೇ, ನಾಲ್ಕು ಗೋಡೆಗಳೊಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು.
ಸಚಿವ ಮಧು ಬಂಗಾರಪ್ಪ ವಿರುದ್ಧ :
ಇನ್ನು ನನ್ನ ತಮ್ಮ ಮಧು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಇಲ್ಲದಿದ್ದರೆ, ಮುಖ್ಯಮಂತ್ರಿಗಳೇ ಅವನನ್ನು ಸಂಪುಟ ದಿಂದ ವಜಾ ಮಾಡಬೇಕು. ಕನ್ನಡಕ್ಕೆ, ಕನ್ನಡನಾಡಿಗೆ ಅವಮಾನಪಡಿಸಿದ, ಟ್ರೊಲ್ ಮಾಡಿದವರಿಗೆ, ಮಾಧ್ಯಮದವರಿಗೆ ಶಾಪ ಹಾಕಿ ತಾನೇ ಶಾಪಗ್ರಸ್ತನಾದ.
ಶಿವಣ್ಣ ವಿರುದ್ಧ :
ಇನ್ನು ಅವನ ಭಾವ, ನನ್ನ ತಂಗಿಯ ಗಂಡ (ಶಿವಣ್ಣ ಕುಮಾರ್ ಬಂಗಾರಪ್ಪ ಅವರಿಗೂ ಭಾವನೇ ಆಗಬೇಕು. ಆದರೆ, ಪೋಸ್ಟ್ʻನಲ್ಲಿ ಅವನ ಭಾವ ಎಂದೇ ಬರೆಯುತ್ತಾರೆ) ಡಾ. ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು.
ದಿಕ್ಕು ಗೆಟ್ಟು ದಿಕ್ಕಾಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ, ನೀವು ಹಿಂತಿರುಗಿ ಬರುವುದು ಕನಸಿನ ಮಾತು.
ಇಂಥಾದ್ದೊಂದು ಸುದೀರ್ಘ ಪೋಸ್ಟ್ ಹಾಕಿರುವ ಕುಮಾರ್ ಬಂಗಾರಪ್ಪನವರಿಗೆ ರಿಯಾಕ್ಷನ್ ಕೂಡಾ ಬಂದಿದೆ. ಅದಕ್ಕೆ ಉತ್ತರವನ್ನೂ ನೀಡಿರುವ ಕುಮಾರ್ ʻʻಅಭಿಮಾನಿ ದೇವರುಗಳ ಮುಂದೆ ಯಾರು ಇಲ್ಲ. ಡಾ . ರಾಜಕುಮಾರ್ ಅಭಿಮಾನಿಗಳನ್ನು ದೇವರು ಎಂದರು , ನಾವು ರಾಜಕುಮಾರರನ್ನೇ ದೇವರು ಎಂದೆವು. ಡಾ ರಾಜಕುಮಾರ್ ಹೆಸರಿಗೆ ಕಳಂಕ ತರುವವರಾರನ್ನು ಒಬ್ಬ ಅಭಿಮಾನಿಯಾಗಿ ಎಂದು ಬಿಡೋದಿಲ್ಲ. ಜೈ ರಾಜಣ್ಣ … ಎಂದು ಉತ್ತರ ಕೊಟ್ಟಿದ್ಧಾರೆ.
ಚುನಾವಣೆ ಪ್ರಚಾರದ ವೇಳೆ ಶಿವರಾಜ್ ಕುಮಾರ್ ಅಧಿಕೃತ ಕಾಂಗ್ರೆಸ್ಸಿಗರಲ್ಲ. ಅವರು ಯಾವೊಬ್ಬ ರಾಜಕೀಯ ವ್ಯಕ್ತಿಯ ಪರವಾಗಿ ಅಥವಾ ವಿರೋಧವಾಗಿ ಮಾತನಾಡಿರಲಿಲ್ಲ. ಕೇವಲ ಗೀತಾ ಅವರಿಗೆ ಅವಕಾಶ ನೀಡಬೇಕೆಂದಷ್ಟೆ ಮನವಿ ಮಾಡಿದ್ದರು. ಸಾಧ್ಯವಾದಷ್ಟು ಸೌಹಾರ್ದ ರೀತಿಯ ಚುನಾವಣೆ ಪ್ರಚಾರವನ್ನೇ ಮಾಡಿದ್ದರು. ಇದೀಗ ಕುಮಾರ್ ಬಂಗಾರಪ್ಪ ಶಿವಣ್ಣ ಅವರನ್ನೂ ಸೇರಿಸಿ ಲೇವಡಿ ಮಾಡಿರುವುದು ಅಭಿಮಾನಿಗಳನ್ನು ಕೆರಳಿಸಿದೆ.
ಆದರೆ.. ಅಲ್ಲಿಯೂ ಎರಡು ಗುಂಪುಗಳಿವೆ. ಶಿವಣ್ಣ ರಾಜಕೀಯಕ್ಕೆ ಹೋಗದೆ ಇದ್ದಿದ್ದರೆ, ನಾವು ಖಂಡಿತಾ ಶಿವಣ್ಣ ಪರ ಇರುತ್ತಿದ್ದೆವು. ಈಗ ಇಲ್ಲ ಎನ್ನುವುದು ಒಂದು ಗುಂಪಾದರೆ, ಇನ್ನೊಂದು ಗುಂಪು ಕುಮಾರ್ ಬಂಗಾರಪ್ಪ ವಿರುದ್ಧ ಮುಗಿಬಿದ್ದಿದೆ.



