ಕನ್ನಡದ ಕುಳ್ಳ ಎಂದೇ ಖ್ಯಾತರಾಗಿದ್ದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ವಿಧಿವಶರಾಗಿದ್ಧಾರೆ. 81 ವರ್ಷ ವಯಸ್ಸಿನ ದ್ವಾರಕೀಶ್ ಅವರು ವಯೋಸಹಜ ಕಾಯಿಲೆಗಳಿಂದ ನಿಧನರಾಗಿದ್ದಾರೆ. ಬಂಗ್ಲೇ ಶಾಮರಾವ್ ದ್ವಾರಕೀಶ್ ಚಿತ್ರರಂಗಕ್ಕೆ ಬಂದ ನಂತರ ದ್ವಾರಕೀಶ್ ಎಂದೇ ಪ್ರಖ್ಯಾತರಾಗಿದ್ದರು. ರಾತ್ರಿ ಲೂಸ್ ಮೋಷನ್ ಆಗಿತ್ತು. ಬೆಳಗ್ಗೆ ಎದ್ದು ಕಾಫಿ ಕುಡಿದು ಮಲಗಿದ ದ್ವಾರಕೀಶ್ ನಿದ್ರೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ.
ಭಾರತ್ ಆಟೋ ಸ್ಪೇರ್ಸ್ ಅಂಗಡಿ ನಡೆಸುತ್ತಿದ್ದ ದ್ವಾರಕೀಶ್, ಸಂಬಂಧಿಕರಾದ ಹುಣಸೂರು ಕೃಷ್ಣಮೂರ್ತಿಯವರ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮಮತೆಯ ಬಂಧನ ಚಿತ್ರದ ಮೂಲಕ ನಿರ್ಮಾಪಕರಾದ ದ್ವಾರಕೀಶ್ ಅವರು, ನಂತರ ಮೇಯರ್ ಮುತ್ತಣ್ಣ ಚಿತ್ರದ ಮೂಲಕ ಪರಿಪೂರ್ಣ ನಿರ್ಮಾಪಕರಾದರು. ದ್ವಾರಕೀಶ್ ಚಿತ್ರ ಬ್ಯಾನರ್ ಮೂಲಕ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದರು.
ಕನ್ನಡದಲ್ಲಿ ಹಲವು ಇತಿಹಾಸಗಳನ್ನು ಸೃಷ್ಟಿಸಿದ ಖ್ಯಾತಿ ದ್ವಾರಕೀಶ್ ಅವರದ್ದು. ವಿದೇಶದಲ್ಲಿ ಚಿತ್ರೀಕರಣ ಮಾಡಿದ ಮೊದಲ ನಿರ್ಮಾಪಕ ದ್ವಾರಕೀಶ್. ಸಿಂಗಾಪೂರ್ನಲ್ಲಿ ರಾಜಾಕುಳ್ಳ, ಆಫ್ರಿಕಾದಲ್ಲಿ ಶೀಲಾ ಚಿತ್ರಗಳು ಇತಿಹಾಸ ಬರೆದವು. ಡಾ.ರಾಜ್ ಅವರೊಂದಿಗೆ ಮೇಯರ್ ಮುತ್ತಣ್ಣ, ಭಾಗ್ಯವಂತರು, ವಿಷ್ಣುವರ್ಧನ್ ಅವರೊಂದಿಗೆ ಕಳ್ಳಕುಳ್ಳ, ಸಿಂಗಾಪುರ್ನಲ್ಲಿ ರಾಜಾಕುಳ್ಳ, ಕಿಟ್ಟುಪುಟ್ಟು, ಗುರು ಶಿಷ್ಯರು, ಇಂದಿನ ರಾಮಾಯಣ, ರಾಯರು ಬಂದರು ಮಾವನ ಮನೆಗೆ, ಆಪ್ತಮಿತ್ರ, ಶಿವ ರಾಜ್ ಕುಮಾರ್ ಅವರೊಂದಿಗೆ ಆಯುಷ್ಮಾನ್ ಭವ, ಅಂಬರೀಷ್, ರಜನಿಕಾಂತ್, ಚಿರಂಜೀವಿ ಸರ್ಜಾ, ಶಶಿಕುಮಾರ್, ವಿನೋದ್ ರಾಜ್, ದರ್ಶನ್, ಸುದೀಪ್ ಸೇರಿದಂತೆ ಸ್ಟಾರ್ ನಟರಿಗೆ ಚಿತ್ರ ನಿರ್ಮಾಣ ಮಾಡಿದ್ಧಾರೆ.
ಸ್ವತಃ ಹೀರೋ ಆಗಿ ಕುಳ್ಳ ಏಜೆಂಟ್ 000, ಪೆದ್ದ ಗೆದ್ದ, ಪ್ರಚಂಡ ಕುಳ್ಳ ಸೇರಿದಂತೆ ಹಲವು ಚಿತ್ರಗಳಲ್ಲಿ ಗೆದ್ದಿದ್ದಾರೆ. ಆಯುಷ್ಮಾನ್ ಭವ ಅವರ ನಿರ್ಮಿಸಿದ ಕೊನೆಯ ಸಿನಿಮಾ. ಹಾಸ್ಯನಟರಾಗಿಯೂ ಗೆದ್ದಿದ್ದ ದ್ವಾರಕೀಶ್, ನರಸಿಂಹರಾಜು, ಬಾಲಕೃಷ್ಣ, ದೊಡ್ಡಣ್ಣ ಅವರೊಂದಿಗೆ ನಟಿಸಿದ್ದಾರೆ.
ದ್ವಾರಕೀಶ್ ಅವರ ನಿಧನದೊಂದಿಗೆ ಕನ್ನಡ ಚಿತ್ರರಂಗದ ದೊಡ್ಡ ಅಧ್ಯಾಯವೊಂದು ಅಂತ್ಯ ಕಂಡಿದೆ.



