ಕೋಲಾರದಲ್ಲಿಯೇ ಚುನಾವಣೆಗೆ ನಿಲ್ಲುತ್ತೇನೆ ಎಂದು ಸಿದ್ದರಾಮಯ್ಯ ಘೋಷಣೆ ನಂತರ ರಾಜ್ಯ ರಾಜಕೀಯದಲ್ಲಿ ಸಂಚಲನವಂತೂ ಸೃಷ್ಟಿಯಾಗಿದೆ. ಇವುಗಳ ನಡುವೆಯೇ ಒಂದು ಆಡಿಯೋ ಲೀಕ್ ಆಗಿದ್ದು ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ (ಪಕ್ಷದಿಂದ ಉಚ್ಛಾಟನೆಗೊಂಡಿದ್ದರೂ ಅಧಿಕೃತವಾಗಿ ಈಗಲೂ ಅವರು ಜೆಡಿಎಸ್ ಶಾಸಕರೇ) 17 ಕೋಟಿ, ಎಂಎಲ್‍ಸಿ ಮತ್ತು ಮಂತ್ರಿಗಿರಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟರು ಎಂಬ ಆರೋಪ ಕೇಳಿ ಬಂದಿದೆ.


ಆಡಿಯೋದಲ್ಲೇನಿದೆ?
ಲೀಕ್ ಆಗಿರುವ ಆಡಿಯೋದಲ್ಲಿ ಕಾರ್ಯಕರ್ತರೊಬ್ಬರೊಂದಿಗೆ ಮಾತುಕತೆ ನಡೆಸುತ್ತಾರೆ ಶ್ರೀನಿವಾಸ ಗೌಡ. ಕ್ಷೇತ್ರ ಬಿಟ್ಟು ಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರವಾಗಿ ಮಾತನಾಡುತ್ತಾ ಕಳೆದ ಚುನಾವಣೆಯ 17 ಕೋಟಿ ಸಾಲವೇ ಇನ್ನೂ ತೀರಿಲ್ಲ. ಅದನ್ನು ನಿಭಾಯಿಸಬೇಡವೇ. ಇಷ್ಟಕ್ಕೂ ಗೆದ್ದ ಸಿದ್ದರಾಮಯ್ಯ ಸಿಎಂ ಆಗಿ ಹೋಗುತ್ತಾರೆ. ಕ್ಷೇತ್ರದಲ್ಲಿ ನಾನೇ ಇರುತ್ತೇನೆ. ನನ್ನದೇ ದರ್ಬಾರ್. ನನ್ನನ್ನು ಎಂಎಲ್‍ಸಿ ಮಾಡಿ ಮಂತ್ರಿ ಮಾಡ್ತಾರೆ ಎಂದು ಹೇಳುತ್ತಾರೆ.


ಹಾಗಾದರೆ ಸಿದ್ದರಾಮಯ್ಯ ಶ್ರೀನಿವಾಸ ಗೌಡರ 17 ಕೋಟಿ ಸಾಲ ತೀರಿಸಿದ್ದಾರಾ? ಅಥವಾ ಮುಂದೆ ತೀರಿಸುತ್ತಾರಾ? ಹಣಕ್ಕಾಗಿ ಶ್ರೀನಿವಾಸ ಗೌಡ ಕ್ಷೇತ್ರವನ್ನು ಮಾರಾಟ ಮಾಡಿಕೊಂಡರಾ ಎಂಬ ಪ್ರಶ್ನೆ ಎದ್ದಿದೆ.
ಶ್ರೀನಿವಾಸ ಗೌಡ ಹೇಳಿದ್ದೇನು?
ಹಣದ ಬಗ್ಗೆ ಮಾತನಾಡಿಲ್ಲ. ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಷರತ್ತು ವಿಧಿಸಿಲ್ಲ. ಎಂಎಲ್‍ಸಿ ಮಾಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ಮಂತ್ರಿ ಮಾಡುವುದೂ ಪಕ್ಷಕ್ಕೇ ಬಿಟ್ಟ ವಿಚಾರ. ಅವಕಾಶ ಇದ್ದರೆ ಪಕ್ಷದವರು ತೀರ್ಮಾನ ಮಾಡ್ತಾರೆ. ಜಿಲ್ಲಾ ಪಂಚಾಯ್ತಿ ಎಲೆಕ್ಷನ್ನಿನಲ್ಲಿ ನನ್ನ ಮಗ ಮಂಜುನಾಥ್‍ಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದೇನೆ. ಆ ಬಗ್ಗೆ ಭರವಸೆ ಸಿಕ್ಕಿದೆ ಎಂದಿದ್ದಾರೆ ಶ್ರೀನಿವಾಸ ಗೌಡ.


ಸಿದ್ದರಾಮಯ್ಯ ಏನು ಹೇಳಿದರು?
ಮೊದಲಿಗೆ ಮಾಧ್ಯಮಗಳಿಗೆ ಯಾವುದೇ ಉತ್ತರ ನೀಡದೇ ಇದ್ದ ಸಿದ್ದರಾಮಯ್ಯ ನಂತರ ಅಂತಹ ಕರಾರು, ಷರತ್ತುಗಳೇನೂ ಇಲ್ಲ. ಆಡಿಯೋ ವಿಷಯ ಗೊತ್ತಿಲ್ಲ ಎಂದರು.



