ರಾಜಕೀಯ ಬಿಡಿ.. ಜಸ್ಟ್ ಒಂದು ವರ್ಷದ ಹಿಂದೆ ಜಗಳವಾಡುತ್ತಿದ್ದವರು ಈಗ ಮಿತ್ರರಾಗಿದ್ಧಾರೆ. ಹೊಡೆದಾಡಿಕೊಳ್ತಿದ್ದವರು.. ಅಪ್ಪಿಕೊಂಡಿದ್ಧಾರೆ. ಅದು ರಾಜಕೀಯ. ಅಲ್ಲಿ ಯಾರು ಯಾರಿಗೂ ಶತ್ರುವೂ ಅಲ್ಲ. ಮಿತ್ರರೂ ಅಲ್ಲ. ಆದರೆ.. ಆ ರಾಜಕೀಯ ಸಿನಿಮಾ ರಂಗಕ್ಕೆ ಬಂದರೆ.. ಅದು ಬೇರೆಯದೇ ಜಗಳ ಆರಂಭ ಮಾಡುತ್ತೆ. ವಿಚಿತ್ರ ಅಂದ್ರೆ.. ಇಲ್ಲಿ ರಾಜಕೀಯದ ಹಾಗಲ್ಲ. ಶತ್ರುತ್ವ ಹಾಗೂ ಸ್ನೇಹ ಎರಡೂ ಶಾಶ್ವತ ಅಲ್ಲ ಅನ್ನೋದೇನೋ ಸತ್ಯ. ಆದರೆ.. ಕೆಲವು ಕಾಲವಂತೂ ಇರುತ್ತೆ.
ಕೆಲವು ನಟರು ಸಿನಿಮಾಗಳಲ್ಲಷ್ಟೇ ಅಲ್ಲ.. ರಾಜಕೀಯದಲ್ಲಿಯೂ ಆಕ್ಟಿವ್ ಇರುತ್ತಾರೆ. ಹಾಗಂತ ಅವರು ಕಂಪ್ಲೀಟ್ ರಾಜಕೀಯ ಮಾಡಲ್ಲ. ಅಂತಹವರ ಸಾಲಿನಲ್ಲಿ ಪ್ರಕಾಶ್ ರೈ, ಕಿಶೋರ್, ಅಹಿಂಸಾ ಚೇತನ್ ಮೊದಲಾದವರಿರುತ್ತಾರೆ. ಚೇತನ್ ಅವರಂತೂ ಬಿಡಿ.. ಅತ್ತ ಸಿದ್ದರಾಮಯ್ಯ ಅವರನ್ನೂ ಟೀಕೆ ಮಾಡ್ತಾರೆ.
ಶಿವ ರಾಜಕುಮಾರ್, ದುನಿಯಾ ವಿಜಯ್ ಮೊದಲಾದವರು ಕಾಂಗ್ರೆಸ್ ಪಕ್ಷದ ಅಧಿಕೃತ ಕಾರ್ಯಕರ್ತರಲ್ಲ. ಆದರೆ.. ಮೋದಿ ವಿರೋಧಿಗಳ ಸಾಲಿನಲ್ಲಿ ನಿಲ್ಲುತ್ತಾರೆ.
ಇನ್ನು ಮೋದಿ ಪರ ಎಂದರೆ.. ಅಲ್ಲಿ ಅನಂತನಾಗ್, ಪ್ರಕಾಶ್ ಬೆಳವಾಡಿ, ಪ್ರಣಿತಾ ಸುಭಾಷ್.. ಮೊದಲಾದವರು ಬರುತ್ತಾರೆ.
ಅಂದಹಾಗೆ ಈ ಪಟ್ಟಿಯಲ್ಲಿ ಆಕ್ಟಿವ್ ರಾಜಕಾರಣದಲ್ಲಿರುವವರನ್ನು ಹೇಳ್ತಿಲ್ಲ. ಏಕೆಂದರೆ.. ಬಿಜೆಪಿಯಲ್ಲಿರುವ ಜಗ್ಗೇಶ್, ಸುಮಲತಾ, ಶಶಿ ಕುಮಾರ್, ತಾರಾ, ಶೃತಿ, ಕುಮಾರ್ ಬಂಗಾರಪ್ಪ.. ಅಂತಹವರನ್ನೆಲ್ಲ ಇಲ್ಲಿ ಸೇರಿಸಿಲ್ಲ. ಕಾಂಗ್ರೆಸ್ಸಿನಲ್ಲಿರುವ ಜಯಮಾಲಾ, ಮಾಲಾಶ್ರೀ, ಗೀತಾ ಶಿವರಾಜಕುಮಾರ್, ಮಧು ಬಂಗಾರಪ್ಪ, ಟೆನ್ನಿಸ್ ಕೃಷ್ಣ, ಸಾಧು ಕೋಕಿಲ, ಎಸ್.ನಾರಾಯಣ್.. ಅಂತಹವರನ್ನೂ ಇಲ್ಲಿ ಸೇರಿಸಿಲ್ಲ. ಜೆಡಿಎಸ್ಸಿನಲ್ಲಿ ಕುಮಾರಸ್ವಾಮಿ, ನಿಖಿಲ್ ಅವರೇ ಸಿನಿಮಾ ರಂಗದ ನಂಟು ಇರುವವರು.
ನ್ಯಾಷನಲ್ ಲೆವೆಲ್ಲಿಗೆ ಬಂದರೆ.. ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ರಸ್ತೆಯನ್ನು, ಅಭಿವೃದ್ಧಿಯನ್ನು ಹೊಗಳಿದ್ದಕ್ಕೆ ಬಿಜೆಪಿ ಬೆಂಬಲಿಗರಾಗಿದ್ದರು. ಕಂಗನಾ ರಣಾವತ್, ಹೇಮಮಾಲಿನಿ, ಧರ್ಮೇಂದ್ರ, ಮಿಥುನ್ ಚಕ್ರವರ್ತಿ, ತೆಲುಗಿನ ಪವನ್ ಕಲ್ಯಾಣ್, ರೋಜಾ, ತಮಿಳಿನ ಕಮಲ್ ಹಾಸನ್, ಖುಷ್ ಬೂ, ವಿಜಯ್.. ಇವರೆಲ್ಲ ಒಂದಲ್ಲ ಒಂದು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವವರೇ.
ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ನಟ ಕಿಶೋರ್ ಮತ್ತು ಪ್ರಕಾಶ್ ರೈ ಆಕ್ಟಿವ್ ಆಗಿರುತ್ತಾರೆ. ಎಲೆಕ್ಷನ್ ಸಮಯದಲ್ಲಿ ಸ್ವಲ್ಪ ಹೆಚ್ಚೇ ಆಕ್ಟಿವ್ ಇರುತ್ತಾರೆ. ಆದರೆ.. ಇವರಿಗೆ ಹೋಲಿಸಿದರೆ.. ಬಿಜೆಪಿ ಪರ ಇರುವ, ಆದರೆ.. ಪಕ್ಷದಿಂದ ದೂರ ಇರುವವರು ಅಕ್ಟಿವ್ ಆಗಿರುವುದು ಕಡಿಮೆ.
ಕಿಶೋರ್ ಮತ್ತು ಪ್ರಕಾಶ್ ರೈ ಮೋದಿ ಅವರನ್ನು ಏಕವಚನದಲ್ಲಿಯೇ ಟೀಕೆ ಮಾಡುವುದು ಕಾಮನ್ ಆಗಿಬಿಟ್ಟಿದೆ. ನಟ ಚೇತನ್ ಅವರಂತೂ ಅತ್ತ ಮೋದಿಯನ್ನು, ಇತ್ತ ಸಿದ್ದರಾಮಯ್ಯ ಅವರನ್ನೂ ಟೀಕೆ ಮಾಡ್ತಾನೇ ಇರ್ತಾರೆ.
ನಟ ಉಪೇಂದ್ರ ಅವರು ಈ ವಿಷಯದಲ್ಲಿ ಭಿನ್ನ. ಅವರದ್ದೇ ಆದ ಪ್ರಜಾಕೀಯ ಪಕ್ಷ ಇದೆ. ಅತ್ತ ಬಿಜೆಪಿಯೂ ಅಲ್ಲ. ಇತ್ತ ಕಾಂಗ್ರೆಸ್ಸೂ ಅಲ್ಲ. ಅವರದ್ದೊಂಥರಾ ಸೋಷಿಯಲ್ ಮೀಡಿಯಾ ರಾಜಕೀಯ. ವೋಟುಗಳನ್ನೂ ಲೈಕುಗಳ ಲೆಕ್ಕದಲ್ಲಿ ನೋಡದಾಗಿದ್ರೆ.. ಪ್ರಜಾಕೀಯದವರೂ ಶಾಸಕರೋ.. ಸಂಸದರೋ ಆಗಿರುತ್ತಿದ್ದರು. ಆದರೆ.. ಕುತೂಹಲ ಹುಟ್ಟಿಸಿರುವುದು ರಾಜಕೀಯ ಪಕ್ಷಗಳಲ್ಲಿ ಅಧಿಕೃತ ಸದಸ್ಯರಲ್ಲದ.. ತಾವು ಎಲ್ಲ ರಾಜಕೀಯ ಪಕ್ಷಗಳ ಟೀಕಾಕಾರರು ಎನ್ನುವ ನಟರು, ಕಲಾವಿದರ ನಡೆ. ಅಷ್ಟೆ.



