ಒಂದಲ್ಲ.. ಎರಡಲ್ಲ.. ಸತತ 10 ವರ್ಷ. ಕನ್ನಡದಲ್ಲಿ ಬಿಗ್ ಬಾಸ್ ಶೋ ಎಂದರೆ ಅದು ಸುದೀಪ್ ಎಂಬಷ್ಟರಮಟ್ಟಿಗೆ ಜನಪ್ರಿಯವಾಗಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗುನಲ್ಲಿ ಜೂ.ಎನ್‌ಟಿಆರ್, ನಾಗಾರ್ಜುನ, ತಮಿಳಿನಲ್ಲಿ ಕಮಲ್ ಹಾಸನ್ ಮೊದಲಾದವರು ಆಗಾಗ್ಗೆ ಬದಲಾಗಿದ್ದಾರೆ. ಆದರೆ ಕನ್ನಡದಲ್ಲಿ ಮಾತ್ರ ಒನ್ & ಓನ್ಲಿ ಕಿಚ್ಚ ಸುದೀಪ್.
ಅಂತಹ ಕಿಚ್ಚ ಸುದೀಪ್ ಬಿಗ್ ಬಾಸ್ ಶೋ ನಿರೂಪಪಕನ ಸ್ಥಾನದಿಂದ ಹಿಂದೆ ಸರಿಯುತ್ತಿದ್ದಾರೆ. ಹಾಗಂತ ಈಗಲೇ ಅಲ್ಲ. ಈ ವರ್ಷದ ಶೋಗೆ ನೋ ಪ್ರಾಬ್ಲಂ. ಆದರೆ ಮುಂದಿನ ವರ್ಷದಿಂದ ಸುದೀಪ್, ಬಿಗ್ ಬಾಸ್ ಶೋನಲ್ಲಿ ನಿರೂಪಕರಾಗಿ ಇರಲ್ಲ. 10 ವರ್ಷಗಳ ನಂತರ ನಿರೂಪಕನ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಾರೆ ಕಿಚ್ಚ ಸುದೀಪ್.
ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾಗಳು. ಸಿಕ್ಕಿರುವ ಟಿಆರ್ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿ ಪ್ರೀತಿ ಏನೆಂಬುದು ತಿಳಿಯುತ್ತದೆ. ಈ 10 ಪ್ಲಸ್ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಚೆನ್ನಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನ ಹರಿಸುವ ಸಮಯ ಬಂದಿದೆ. ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್ ಬಾಸ್.
ಇಷ್ಟು ವರ್ಷಗಳ ಕಾಲ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಿ ನೀವು ಮತ್ತು ಕಲರ್ಸ್ನವರು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ನಂಬಿದ್ದೇನೆ. ಈ ನಿರ್ಧಾರ ಅತ್ಯುತ್ತಮ ಆಗುವಂತೆ ಮಾಡೋಣ. ನಿಮ್ಮೆಲ್ಲರನ್ನೂ ನಿಮ್ಮನ್ನು ಮನರಂಜಿಸುತ್ತೇನೆ ಎಂದು ʻಎಕ್ಸ್ʼ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಕಿಚ್ಚ ಸುದೀಪ್.
ವಿಚಿತ್ರವೆಂದರೆ ಕಿಚ್ಚ ಸುದೀಪ್ ಅಭಿಮಾನಿಗಳು ಖುಷಿಯಾಗಿರೋದು. ಏಕೆಂದರೆ ಸುದೀಪ್ ಕಿರುತೆರೆ ರಿಯಾಲಿಟಿ ಶೋ ಬಿಟ್ಟರೆ, ಹೆಚ್ಚು ಹೆಚ್ಚು ಸಿನಿಮಾ ಮಾಡ್ತಾರೆ ಅನ್ನೋ ಕಾರಣ. ಅಭಿಮಾನಿಗಳ ಪ್ರಕಾರ ಸುದೀಪ್ ಶೋ ನಿರೂಪಣೆಯನ್ನೇನೋ ಚೆನ್ನಾಗಿ ಮಾಡ್ತಾರೆ. ಅದು ಇಷ್ಟವಾಗುತ್ತೆ. ಆದರೆ ಪ್ರತೀ ವರ್ಷ 3 ರಿಂದ 4 ತಿಂಗಳು ಅದರಲ್ಲೇ ಕಳೆದುಹೋಗ್ತಾರೆ. ಇನ್ ಮುಂದೆ ಹಂಗಾಗಲ್ಲ ಎಂದು ಖುಷಿಯಾಗಿದ್ದಾರೆ.
ಆದರೆ ಇದರ ಜೊತೆಯಲ್ಲೇ ಸುದೀಪ್ ಅವರಿಗೆ ಅವಮಾನ ಆಯ್ತಾ ಅನ್ನೋ ಪ್ರಶ್ನೆಗಳೂ ಎದ್ದಿವೆ. ಅಂತಹ ಅನುಮಾನ ಹುಟ್ಟಿಸಿರುವುದು ಕನ್ನಡ ಹೋರಾಟಗಾರ ಎಂದು ಬಿಂಬಿಸಲ್ಪಟ್ಟಿರುವ ರೂಪೇಶ್ ರಾಜಣ್ಣ ಅವರ ಸೋಷಿಯಲ್ ಮೀಡಿಯಾ ಬರಹ. “ಬಿಗ್ ಬಾಸ್ ಎನ್ನುವ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ಕಿತ್ತೋದ್ ಆಟಕ್ಕೆ ಕಿಚ್ಚ ಸುದೀಪ್, ಬಿಗ್ ಬಾಸ್ ನಿರೂಪಣೆಯನ್ನು ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ ಇಲ್ಲ ಬಿಗ್ ಬಾಸ್ ನಿಲ್ಲಬೇಕು, ಅಸಲಿ ವಿಷಯ ನಾಳೆ ಮಾತಾಡ್ತೀನಿ.” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ರೂಪೇಶ್ ರಾಜಣ್ಣ.
ರೂಪೇಶ್ ರಾಜಣ್ಣ ಅವರ ಪೋಸ್ಟ್ ಸರಿಯಾಗಿ ಅರ್ಥವಾಗುವುದಿಲ್ಲ. ಆದರೆ ಸುದೀಪ್ ಅವರಿಗೆ ಏನೋ ಅವಮಾನ ಆಗಿದೆ ಎಂಬ ಅನುಮಾನ ಹುಟ್ಟಿಸೋದಂತೂ ನಿಜ. ಇನ್ನು ಸುದೀಪ್ ಹೊರಬರಲು ಅಸಲಿ ಕಾರಣವೇನು ಎನ್ನುವುದನ್ನು ರೂಪೇಶ್ ರಾಜಣ್ಣ ಇಂದು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಅವರು ಹೇಳಿದಂತೆ ನಿರ್ದೇಶಕರಿಂದ ಏನಾದರೂ ಸುದೀಪ್‌ಗೆ ಅವಮಾನವಾಗಿದ್ದರೆ, ಕಾರ್ಯಕ್ರಮದ ಮೇಲೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ.
ಆದರೆ ಸುದೀಪ್ ಅವರಂತಹ ಸ್ಟಾರ್ ನಟನಿಗೆ ಅವಮಾನ ಆಗುತ್ತೆ ಅನ್ನೋದನ್ನು ನಂಬೋಕೆ ಸಿದ್ಧರಿಲ್ಲ. ಏಕೆಂದರೆ ಸುದೀಪ್ ಜನಪ್ರಿಯತೆ ಎಂಥದ್ದು ಅನ್ನೋದು ಕಾರ್ಯಕ್ರಮ ಮಾಡುವವರಿಗೂ ಗೊತ್ತಿರುತ್ತದೆ. ಗೊತ್ತಿದ್ದೂ ಗೊತ್ತಿದ್ದೂ ಕೆಣಕಿ ಹುಳ ಬಿಟ್ಕೊಳ್ಳೋಕೆ ಅವರೇನು ಬುದ್ದಿ ಇಲ್ಲದವರಾ.. ಅನ್ನೋ ವಾದವೂ ಇದೆ.



