ಕಾಂತಾರದ್ದು ಅಭೂತಪೂರ್ವ ಯಶಸ್ಸು. ಕನ್ನಡ ಚಿತ್ರರಂಗದಲ್ಲೇ ಅತೀ ಹೆಚ್ಚು ಜನ ನೋಡಿದ, ಮೆಚ್ಚಿದ ಹಾಗೂ ಹೆಚ್ಚು ದುಡ್ಡು ಗಳಿಸಿದ ಸಿನಿಮಾ ಕಾಂತಾರ. ಎಲ್ಲ ಭಾಷೆಗಳಲ್ಲೂ ಸೇರಿ 400 ಕೋಟಿಗೂ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಕಾಂತಾರ. ಆದರೆ ಕೆಜಿಎಫ್‍ಗಿಂತಲೂ ಒಂದು ಹೆಜ್ಜೆ ಗ್ರೇಟ್ ಎಂದೇ ಹೇಳಬಹುದು. ಏಕಂದ್ರೆ ಕಾಂತಾರ 16 ಕೋಟಿಯ ಬಜೆಟ್ ಸಿನಿಮಾ. ಥಿಯೇಟರಿನಲ್ಲಿ ಗಳಿಸಿದ್ದು 400 ಕೋಟಿಗೂ ಹೆಚ್ಚು. ಜಸ್ಟ್ 16 ಕೋಟಿ, 400 ಕೋಟಿಗೂ ಹೆಚ್ಚು ಎಂದರೆ ಹಾಕಿದ್ದ ಬಂಡವಾಳಕ್ಕಿಂತ 25 ಪಟ್ಟು ಹೆಚ್ಚು.

ಹೊಂಬಾಳೆಯವರದ್ದೇ ಆದ ಕೆಜಿಎಫ್ ಸಿನಿಮಾ ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತಾದರೂ, ಹಾಕಿದ ಬಂಡವಾಳಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚು. ಹೀಗಿರುವಾಗ ಚಿತ್ರತಂಡಕ್ಕೆ ಸಿಕ್ಕಿರುವ ಸಂಭಾವನೆ ಎಷ್ಟು?
ನಿರ್ಮಾಪಕರಾದ ವಿಜಯ್ ಕಿರಗಂದೂರು ಬಂದ ಲಾಭವನ್ನೆಲ್ಲ ತಮಗೊಬ್ಬರಿಗೇ ಇಟ್ಟುಕೊಳ್ಳುವವರೂ ಅಲ್ಲ. ಲಾಭವನ್ನು ಹಂಚುವ ಗುಣದವರು. ಕೆಜಿಎಫ್‍ನಲ್ಲಿಯೂ ಮಾಡಿದ್ದು ಅದನ್ನೇ. ಮೂಲಗಳ ಪ್ರಕಾರ ಚಿತ್ರದಲ್ಲಿ ನಟಿಸಿದ್ದ ಕಲಾವಿದರು ಹಾಗೂ ತಂತ್ರಜ್ಞರಿಗೆ ಒಳ್ಳೆಯ ಸಂಭಾವನೆಯೇ ಸಿಕ್ಕಿದೆ.
ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದ ಕಿಶೋರ್ ಅವರಿಗೆ 60 ಲಕ್ಷ ರೂ. ವಿಲನ್ ಪಾತ್ರಧಾರಿ ಅಚ್ಯುತ್ ಕುಮಾರ್ ಅವರಿಗೆ 40 ಲಕ್ಷ ರೂ. ಸಂಭಾವನೆ ನೀಡಲಾಗಿದೆ. ಪ್ರಮೋದ್ ಶೆಟ್ಟಿಯವರಿಗೂ 40 ಲಕ್ಷ ರೂ. ಸಂಭಾವನೆ ನೀಡಲಾಗಿದೆಯಂತೆ. ನಾಯಕಿ ಸಪ್ತಮಿ ಗೌಡ ಅವರಿಗೆ 1 ಕೋಟಿ ರೂ. ಸಂಭಾವನೆ ನೀಡಲಾಗಿದೆ. ನಟನೆ ಹಾಗೂ ನಿರ್ದೇಶನ ಎರಡನ್ನೂ ನಿಭಾಯಿಸಿದ ರಿಷಬ್ ಶೆಟ್ಟಿಯವರಿಗೆ 4 ಕೋಟಿ ರೂ. ಸಂಭಾವನೆ ನೀಡಲಾಗಿದೆ.

ಆದರೆ ಚಿತ್ರದಲ್ಲಿ ರಾಂಪ ಪಾತ್ರಧಾರಿ ಪ್ರಕಾಶ್ ತುಮ್ಮಿನಾಡು ಫಸ್ಟ್ ನ್ಯೂಸ್ ಚಾನೆಲ್ಲಿನಲ್ಲಿ ಮಾತನಾಡುತ್ತಾ, ಚಿತ್ರದ ಸಕ್ಸಸ್ ನಂತರ ಇಡೀ ಚಿತ್ರತಂಡದ ಎಲ್ಲ ಕಲಾವಿದರು ಹಾಗೂ ತಂತ್ರಜ್ಞರಿಗೆ ಮತ್ತೊಮ್ಮೆ ಸಂಭಾವನೆ ನೀಡಲಾಯಿತು. ಗೌರವಿಸಲಾಯಿತು ಎಂಬ ಮಾಹಿತಿ ಹಂಚಿಕೊಂಡಿದ್ದರು. ಅಧಿಕೃತವಾಗಿ ನಿರ್ಮಾಪಕ ವಿಜಯ್ ಕಿರಗಂದೂರು ಅವರಾಗಲೀ, ಕಾರ್ತಿಕ್ ಗೌಡ ಅವರಾಗಲೀ, ರಿಷಬ್ ಶೆಟ್ಟಿಯವರಾಗಲೀ ಅಧಿಕೃತವಾಗಿ ಹೇಳಿಲ್ಲ. ಆದರೆ ವಿಜಯ್ ಕಿರಗಂದೂರು ಕೊಟ್ಟಿದ್ದರೂ ಕೊಟ್ಟಿರಬಹುದು ಎಂಬುದು ಅವರ ಬಗ್ಗೆ ಗೊತ್ತಿರುವವರ ನಂಬಿಕೆ.



