ಧರ್ಮಸ್ಥಳ ತಲೆಬುರುಡೆ ಕೇಸ್ ತನಿಖೆ ಕುರಿತಂತೆ ರಚನೆಯಾಗಿದ್ದ ಎಸ್‌ಐಟಿ ಈಗ ತನಿಖೆಯನ್ನೇನೋ ಮಾಡುತ್ತಿದೆ. ತಲೆಬುರುಡೆ ಸಿಕ್ಕದೆ, ಸಾವಿರಾರು ಶವ ಹೂತುಹಾಕಿದ್ದೇನೆ ಎಂದಿದ್ದ ಚಿನ್ನಯ್ಯ, ಈಗ ಕೋರ್ಟಿನ ಎದುರು ಕಣ್ಣೀರಿಟ್ಟು ತಪ್ಪು ಮಾಡಿದೆ ಎನ್ನುತ್ತಿದ್ದಾನೆ. ಈ ನಡುವೆ ಸೌಜನ್ಯ ಕೇಸಿನಲ್ಲಿ ಆರೋಪ ಎದುರಿಸುತ್ತಿರುವ ಉದಯ್ ಜೈನ್, ಧೀರಜ್ ಕೆಲ್ಲ ಹಾಗೂ ಮಲ್ಲಿಕ್ ಜೈನ್ ಮತ್ತು ನಿಶ್ಚಲ್ ಜೈನ್ ( ಪೊಲೀಸ್ ತನಿಖೆ, ಪ್ರಕರಣದಲ್ಲಿ ಆರೋಪಿಗಳಲ್ಲ. ತಿಮರೋಡಿ, ಮಟ್ಟಣ್ಣವರ್ ಹಾಗೂ ಸಮೀರ್ ಭಾಷಣಗಳಲ್ಲಿ ಮಾತ್ರ ಆರೋಪಿಗಳು) ಅವರಲ್ಲಿ ಇಬ್ಬರನ್ನು ಎಸ್‌ಐಟಿಯವರು ವಿಚಾರಣೆಗೆ ಕರೆಸಿಕೊಂಡಿದ್ದಾರೆ. ಇಷ್ಟೂ ಜನರಲ್ಲಿ ಉದಯ್ ಜೈನ್ ಮಾತ್ರ ಎಸ್‌ಐಟಿ ಎದುರು ವಿಚಾರಣೆಗೆ ಹಾಜರ್ ಆಗಿ, ವಿಚಾರಣೆ ಎದುರಿಸಿ ಬಂದಿದ್ದಾರೆ. ಆದರೆ.. ಇಲ್ಲಿ ಉದಯ್ ಜೈನ್ ಅವರಿಗೆ ಯಾವುದೇ ಅಧಿಕೃತ ನೋಟಿಸ್ ಕೊಟ್ಟಿಲ್ಲ. ಕೇವಲ ಫೋನ್ ಮಾಡಿ ಕರೆಸಿಕೊಂಡು ವಿಚಾರಣೆ ಮಾಡಿ ಕಳಿಸಿದ್ದಾರೆ.
ಏಕೆಂದರೆ..
ಅಧಿಕೃತವಾಗಿ ಕಾನೂನು ಪ್ರಕಾರ ಎಸ್‌ಐಟಿಗೆ ಸೌಜನ್ಯ ಕೇಸ್ ತನಿಖೆ ಮಾಡುವಂತೆಯೇ ಇಲ್ಲ. ಎಸ್‌ಐಟಿ ವ್ಯಾಪ್ತಿಗೂ ಬರುವುದಿಲ್ಲ. ಎಸ್‌ಐಟಿ ರಚನೆಯಾದಾಗಿನ ಆದೇಶ ಪತ್ರದಲ್ಲೂ ಸೌಜನ್ಯ ಕೇಸ್ ಹೊರತುಪಡಿಸಿ ಎಂದೇ ಇದೆ. ಹೀಗಾಗಿಯೇ ಉದಯ್ ಜೈನ್ ಹಾಗೂ ಮಲ್ಲಿಕ್ ಜೈನ್ ಇಬ್ಬರನ್ನೂ ಫೋನ್ ಮಾಡಿ ಕರೆಸಿಕೊಳ್ಳಲಾಗಿದೆಯೇ ಹೊರತು, ನೋಟಿಸ್ ಕೊಟ್ಟಿಲ್ಲ. ಅಕಸ್ಮಾತ್.. ಅವರಿಬ್ಬರೂ ಬರುವುದಿಲ್ಲ ಎಂದರೆ ಸಮೀರ್, ಮಟ್ಟಣ್ಣ, ಜಯಂತ್, ಸಮೀರ್.. ಇತರರನ್ನು ಕೋರ್ಟ್ ಮೂಲಕ ಕರೆಸಿಕೊಂಡಂತೆ ಕರೆಸಿಕೊಳ್ಳಲು ಸಾಧ್ಯವಿಲ್ಲ. ಎಸ್‌ಐಟಿಗೆ ಸೌಜನ್ಯ ಕೇಸ್ ತನಿಖೆ ಮಾಡುವ ಅಧಿಕಾರವೇ ಇಲ್ಲ.
ಹಾಗಾದರೆ..
ಸೌಜನ್ಯ ತಾಯಿ ಕುಸುಮಾವತಿ ದೂರು ಕೊಟ್ಟಿದ್ದಾರಲ್ಲ ಎನ್ನಬಹುದು. ಆ ಪತ್ರ ಸ್ವೀಕಾರ ಮಾಡುವುದಕ್ಕೇನೂ ಸಮಸ್ಯೆ ಇಲ್ಲ. ಆದರೆ ತನಿಖೆ ಸಾಧ್ಯವಿಲ್ಲ. ಸೌಜನ್ಯ ಕೇಸಿನ ಕುರಿತಂತೆ ಮರುತನಿಖೆಗೆ ಕುಸುಮಾವತಿಯವರೇ ಕೋರ್ಟಿಗೆ ಹೋಗಬೇಕು. ಲೋವರ್ ಕೋರ್ಟಿನಲ್ಲೂ ಸಾಧ್ಯವಿಲ್ಲ. ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಮಾತ್ರ ಮರುತನಿಖೆಗೆ ಆದೇಶ ಕೊಡಬಹುದು. ಹೋಗಬೇಕಾಗಿರುವುದು ಸೌಜನ್ಯ ಅವರ ಕುಟುಂಬದವರು ಮಾತ್ರ. ತಾಯಿ ಅಥವಾ ತಂಗಿಯರಲ್ಲಿ ಯಾರಾದರೂ ತನಿಖೆ ಮಾಡಲು ಕೋರಿ ಅರ್ಜಿ ಸಲ್ಲಿಸಬಹುದು. ಕಾರಣ.. ಪ್ರಕರಣದಲ್ಲಿ ಈಗಾಗಲೇ ತೀರ್ಪು ಬಂದಾಗಿದೆ. ತೀರ್ಪು ಬಂದಿರುವ ಕೇಸ್ʻನ್ನು ಮರುತನಿಖೆ ಮಾಡಬೇಕು ಎಂದರೆ ಉನ್ನತ ನ್ಯಾಯಾಲಯಗಳ ಅನುಮತಿ ಬೇಕೇ ಬೇಕು.
ಉದಯ್ ಜೈನ್ ಏನು ಮಾಡಬಹುದು..?
ಸದ್ಯಕ್ಕೆ ಪೊಲೀಸರ ಎದುರು ಹಾಜರಾಗಿರುವ ಉದಯ್ ಜೈನ್, ನನಗೇನೂ ಭಯ ಇಲ್ಲ ಎಂದಿದ್ದಾರೆ. ತಿಮರೋಡಿ ಗ್ಯಾಂಗ್ ಆರೋಪ ಹೊರಿಸುತ್ತಿರುವ ಈ ಮೂರೂ ಜನ ಈ ಹಿಂದೆ ʻಸ್ವಯಂ ಬ್ರೈನ್ ಮ್ಯಾಪಿಂಗ್ʼಗೆ ಒಳಗಾಗಿದ್ದರು. ತಮ್ಮ ಮೇಲಿರುವ ಆರೋಪ ಸತ್ಯವೋ.. ಸುಳ್ಳೋ. ನಿರ್ಧಾರ ಮಾಡಿ. ನಮ್ಮನ್ನು ಈ ಕಳಂಕದಿಂದ ಮುಕ್ತಿ ಮಾಡಿ ಎಂದು ಕೋರ್ಟ್ ಎದುರು ಹೋಗಿದ್ದರು. ಬ್ರೈನ್ ಮ್ಯಾಪಿಂಗ್ʻನಲ್ಲಿ ಈ ಮೂವರಿಗೂ, ಸೌಜನ್ಯ ಅತ್ಯಾಚಾರ ಮತ್ತು ಕೊಲೆಗೂ ಯಾವುದೇ ಸಂಬಂಧ ಇಲ್ಲ ಎಂದು ಸಾಬೀತಾಗಿತ್ತು. ಈಗ ಈ ಮೂರೂ ಜನ ಎಸ್‌ಐಟಿಯವರ ಮೇಲೆ ಕೋರ್ಟ್ ಮೊರೆ ಹೋದರೆ.. ಆಗ ಎಸ್‌ಐಟಿ ಪೊಲೀಸರು ಮತ್ತು ಸರ್ಕಾರ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಕಾಗಬಹುದು. ಆದರೆ, ಈ ಮೂವರೂ ಆ ಕೆಲಸ ಮಾಡುತ್ತಿಲ್ಲ. ಹಾಗೇನಾದರೂ ಆದರೆ.. ಎಸ್‌ಐಟಿಗೆ ಸಂಕಷ್ಟ ತಪ್ಪಿದ್ದಲ್ಲ.



