ಪಿಆರ್`ಕೆ ಬ್ಯಾನರ್ (PRK) ಪುನೀತ್ ರಾಜ್`ಕುಮಾರ್ (Puneeth Rajkumar) ಅವರದ್ದೇ ಆದರೂ, ಅದರ ಹೊಣೆಗಾರಿ ಅಶ್ವಿನಿಯವರದ್ದಾಗಿತ್ತು. ಅಶ್ವಿನಿ (Ashwini Puneeth Rajkumar) ಅವರ ಹೆಸರಲ್ಲಿ ನಡೆಯುತ್ತಿದ್ದ ಬ್ಯಾನರಿನಲ್ಲಿ, ಪುನೀತ್ ಅವರೇ ಕಥೆ, ತಂತ್ರಜ್ಞರು ಇತ್ಯಾದಿಗಳನ್ನೆಲ್ಲ ನೋಡಿಕೊಳ್ಳುತ್ತಿದ್ದರು. ಪುನೀತ್ ನಿಧನದ ನಂತರವೂ ಹಲವು ಚಿತ್ರಗಳು ರಿಲೀಸ್ ಆಗಿವೆ. ಆದರೆ, ಹಾಗೆ ರಿಲೀಸ್ ಆದ ಚಿತ್ರಗಳೆಲ್ಲ ಒಂದೋ ಪುನೀತ್ ಅವರಿದ್ದಾಗಲೇ ಫೈನಲ್ ಆದ ಚಿತ್ರಗಳು ಅಥವಾ ನಿರ್ಮಾಣವಾದ ಚಿತ್ರಗಳು. ಇದೇ ಮೊದಲ ಬಾರಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ಎಲ್ಲ ಜವಾಬ್ದಾರಿ ಹೊತ್ತುಕೊಂಡು ನಿರ್ಮಾಣ ಮಾಡಿದ್ದ ಸಿನಿಮಾ ರಿಲೀಸ್ ಆಗುತ್ತಿದೆ. Achar & Co ಇದೇ ಜುಲೈ 28ಕ್ಕೆ ರಿಲೀಸ್ ಆಗುತ್ತಿದೆ.
ಆಚಾರ್ & ಕೋ ಸಿನಿಮಾದ ಹೆಸರು. ಸಿಂಧು ಶ್ರೀನಿವಾಸ ಮೂರ್ತಿ (Sindhu Srinivasa Murthy) ನಿರ್ದೇಶಕರು. 1960 ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಈ ಕಥೆ. ಮಹತ್ವಾಕಾಂಕ್ಷೆಯ ಸಹೋದರಿಯರು ಒಂದು ಕಡೆ ಆಧುನಿಕತೆಯ ಸವಾಲುಗಳನ್ನು ಎದುರಿಸುತ್ತಾ, ಇನ್ನೊಂದು ಕಡೆ ತಮ್ಮ ಬೇರುಗಳನ್ನೂ ಬಿಡದೇ ಹೇಗೆ ಯಶಸ್ವಿಯಾಗುತ್ತಾರೆ ಎಂಬ ಸುಂದರ ಕಥೆಯನ್ನು ಆಚಾರ್ & ಕೋ ಹೊಂದಿದೆ.
ಆಚಾರ್ & ಕೋ ಚಿತ್ರದ ಮತ್ತೊಂದು ಹೆಮ್ಮೆಯೆಂದರೆ ಹೆಚ್ಚಿನ ವಿಭಾಗಗಳಲ್ಲಿ ಮಹಿಳೆಯರೇ ಕೆಲಸ ಮಾಡಿರುವುದು. ಈ ಚಿತ್ರಕ್ಕೆ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಮುಖ್ಯ ಪಾತ್ರಧಾರಿ, ಸೌಂಡ್ ಇಂಜಿನಿಯರ್, ವಸ್ತ್ರ ವಿನ್ಯಾಸಕರು, ಕ್ರಿಯಾಶೀಲ ನಿರ್ಮಾಪಕರು ಮತ್ತು ಇನ್ನೂ ಹಲವು ವಿಭಾಗಗಳನ್ನು ಮಹಿಳೆಯರೇ ನಿಭಾಯಿಸಿರುವುದು ವಿಶೇಷ. ಸಿಂಧು ಶ್ರೀನಿವಾಸಮೂರ್ತಿ ಅವರು ಈ ಚಿತ್ರದ ಬರೆವಣಿಗೆ, ನಿರ್ದೇಶನದ ಜವಾಬ್ದಾರಿಯ ಜೊತೆಗೆ ತಾವೇ ಮುಖ್ಯ ಪಾತ್ರವನ್ನೂ ನಿರ್ವಹಿಸಿದ್ದಾರೆ.
ಬಿಂದುಮಾಲಿನಿ ನಾರಾಯಣಸ್ವಾಮಿ ಸಂಗೀತ ನಿರ್ದೇಶನ, ಇಂಚರಾ ಸುರೇಶ್ ವಸ್ತ್ರ ವಿನ್ಯಾಸ, ಸೌಂಡ್ ಇಂಜಿನಿಯರ್ ಆಗಿ ಹೇಮಾ ಸುವರ್ಣ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣ ‘ಆಚಾರ್ & ಕೋ’ ಚಿತ್ರಕ್ಕಿದೆ.
ನಿರ್ಮಾಪಕಿಯಿಂದ ಹಿಡಿದು, ನಿರ್ದೇಶಕರು, ಸಂಗೀತ, ಕಾಸ್ಟ್ಯೂಮ್, ಸೌಂಡ್.. ಹೀಗೆ ಎಲ್ಲವನ್ನೂ ಹೆಣ್ಣು ಮಕ್ಕಳೇ ನಿಭಾಯಿಸಿರುವುದೇ ಚಿತ್ರದ ವಿಶೇಷ.



