ಜನುಮದ ಜೋಡಿ ಚಿತ್ರವನ್ನು ಕನ್ನಡ ಚಿತ್ರ ರಸಿಕರು ಮರೆಯುವಂತೆಯೇ ಇಲ್ಲ. ಆ ಸಿನಿಮಾ ಸೃಷ್ಟಿಸಿದ್ದ ದಾಖಲೆಗಳು, ಜನಪ್ರಿಯತೆ ಇಂದಿಗೂ ಸಿಹಿ ಸಿಹಿ ನೆನಪು. ಶಿವರಾಜ್ ಕುಮಾರ್-ಶಿಲ್ಪಾ ಜೋಡಿ (ಕನಕ ಪಾತ್ರವನ್ನು ಮೊದಲು ಸುಧಾರಾಣಿ ಮಾಡಬೇಕಿತ್ತು. ಅನಾರೋಗ್ಯದ ಕಾರಣ ಆಗಲಿಲ್ಲ)ಯ ಮೋಡಿ, ಏಣಗಿ ಬಾಳಪ್ಪ, ಅಶೋಕ್, ಮುಖ್ಯಮಂತ್ರಿ ಚಂದ್ರು, ಮಂಡ್ಯ ರಮೇಶ್, ಪವಿತ್ರಾ ಲೋಕೇಶ್.. ಚಿತ್ರದಲ್ಲಿ ನಟಿಸಿದ್ದವರೆಲ್ಲ ಇವತ್ತಿಗೂ ನೆನಪಿನಲ್ಲಿದ್ದಾರೆ. ಜನುಮದ ಜೋಡಿ ಚಿತ್ರವನ್ನು ನೆನಪಾಗುವಂತೆ ಮಾಡಿರುವುದು ಭೈರತಿ ರಣಗಲ್.
ಏಕೆಂದರೆ ಭೈರತಿ ರಣಗಲ್ ರಿಲೀಸ್ ಆಗುತ್ತಿರುವುದು ನವೆಂಬರ್ 15ಕ್ಕೆ. ಸರಿಯಾಗಿ 28 ವರ್ಷಗಳ ಹಿಂದೆ 1996ರ ನವೆಂಬರ್ 15ರಂದು ಜನುಮದ ಜೋಡಿ ರಿಲೀಸ್ ಆಗಿತ್ತು. ಆರಂಭದಲ್ಲಿ ಥಿಯೇಟುರಗಳಲ್ಲಿ ಪ್ರೇಕ್ಷಕರ ಕೊರತೆ ಇತ್ತು. ಆದರೆ.. ಅದು ಒಂದೇ ದಿನ. ಆನಂತರ ಥಿಯೇಟರುಗಳಲ್ಲಿ ಜಾಗವೇ ಇಲ್ಲದಂತೆ ಪ್ರೇಕ್ಷಕರಿಂದ ತುಂಬಿ ಹೋಗಿತ್ತು. ಸತತ ಒಂದು ವರ್ಷ ಪ್ರದರ್ಶನ ಕಂಡಿದ್ದ ಸಿನಿಮಾ ಅದು.
ಆ ಚಿತ್ರಕ್ಕೆ ಹಂಸಲೇಖ ಅವರಿಂದ ಸಂಗೀತ ನಿರ್ದೇಶನ ಮಾಡುವ ಮನಸಿದ್ದರೂ, ಹಂಸಲೇಖ ಅವರಿಗೆ ಸಮಯ ಸಿಗಲಿಲ್ಲವಂತೆ. ಕೊನೆಗೆ ವಿ.ಮನೋಹರ್ ಅವರಿಂದ ಹಾಡುಗಳು ಸಿದ್ಧವಾದವು. ಹೊಸ ಇತಿಹಾಸವೊಂದು ರಚನೆಯಾಯ್ತು. ಕೋಲುಮಂಡೆ ಜಂಗಮ ಹಾಡಿನಲ್ಲಿ ಜಂಗಮರ ಕ್ವಾರುಣ್ಯ ಭಿಕ್ಷೆಯ ಹಾಡಿನಲ್ಲಿ ಪ್ರೀತಿ ಬಂತು. ದೇಹವೆಂದರೆ ಓ ಮನುಜ.. ಹಾಗೂ ಜನುಮ ಜೋಡಿ ಆದರೂ.. ಹಾಡುಗಳು ಡಾ.ರಾಜ್ ಧ್ವನಿಯಲ್ಲಿ ಮೂಡಿದ್ದವು. ಮಣಿ ಮಣಿ ಹಾಡನ್ನು ಸ್ವತಃ ಶಿವಣ್ಣ ಅವರಿಂದಲೇ ಹಾಡಿಸಲಾಗಿತ್ತು. ಸೀರೆ ಸೀರೆ ಹಾಡು.. ತುಂಟತನದಿಂದ ಕೂಡಿದ್ದರೆ, ಜನುಮದ ಜೋಡಿ ನೀನು ಹಾಗೂ ಇವನ್ಯಾರ ಮಗನೋ ಹಿಂಗವ್ನಲ್ಲ.. ಹಾಡು ಪ್ರೇಮಗೀತೆಗೆ ಹೊಸ ದಿಕ್ಕು ತೋರಿಸಿದ್ದವು. ಊರ ದ್ಯಾವ್ರೇ.. ನೀ ಎಕ್ಕುಟ್ಟೋಗ.. ಹಾಡಿನಲ್ಲಿ ದೇವರನ್ನೇ ಬೈದಿದ್ದರೆ, ಆರತಿ ಅಣ್ಣಮ್ಮಂಗೆ.. ಹಾಡಿನಲ್ಲಿ ದೇವರ ಉತ್ಸವವೂ ಇತ್ತು.
ಟಿಎಸ್ ನಾಗಾಭರಣ ಈ ಚಿತ್ರಕ್ಕೆ ಗುಜರಾತಿನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಚಿತ್ರದ ಕಥೆ, ಚಿತ್ರಕಥೆಯಲ್ಲಿ ಡಾ.ರಾಜ್ ಅವರ ತಮ್ಮ ವರದಪ್ಪನವರು ಮುತುವರ್ಜಿ ವಹಿಸಿದ್ದರು. ಆ ಚಿತ್ರಕ್ಕೆ ಪಾರ್ವತಮ್ಮನವರೇ ಪ್ರೊಡ್ಯೂಸರ್. ಈಗ ಭೈರತಿ ರಣಗಲ್ ಚಿತ್ರಕ್ಕೆ ಗೀತಾ ಅವರೇ ನಿರ್ಮಾಪಕಿ.
1996ರಲ್ಲಿ ‘ಜನುಮದ ಜೋಡಿ’ ಕೂಡಾ ನವೆಂಬರ್ 15 ರಂದು ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗಿತ್ತು. ಇದೀಗ ಭೈರತಿ ರಣಗಲ್ ಚಿತ್ರ ಕೂಡ ಅದೇ ದಿನ ಅದೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿರುವುದು ವಿಶೇಷ. ಭೈರತಿ ರಣಗಲ್ ಪ್ರೀ ರಿಲೀಸ್ ಈವೆಂಟ್ನಲ್ಲಿ ಕೂಡಾ ಜನುಮದ ಜೋಡಿಯ ಪ್ರಸ್ತಾಪ ಬಂದಿದೆ.
28 ವರ್ಷಗಳ ಹಿಂದೆ ನವೆಂಬರ್ 15ರಂದೇ ನನ್ನ ಜನುಮದ ಜೋಡಿ ಚಿತ್ರ ನರ್ತಕಿ ಥಿಯೇಟರ್ನಲ್ಲಿ ಬಿಡುಗಡೆಯಾಗಿತ್ತು. ಸಿನಿಮಾಗೆ ನಾಗಾಭರಣ ಆ್ಯಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಕೂಡಾ ನವೆಂಬರ್ 15ರಂದು ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗುತ್ತಿದೆ. ಆ ಚಿತ್ರದ ನಿರ್ಮಾಪಕರು ನನ್ನ ಅಮ್ಮ. ಈ ಚಿತ್ರದ ನಿರ್ಮಾಪಕರು ನನ್ನ ಹೆಂಡತಿ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಶಿವರಾಜ್ ಕುಮಾರ್.



