ಜುಲೈ 3ಕ್ಕೆ ಅಧಿವೇಶನ ಶುರುವಾಗಲಿದೆ. ಅದಕ್ಕೆ ಮುಂಚೆ ನಾಯಕನ ಆಯ್ಕೆ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಅಬ್ಬರಿಸಿ ಬೊಬ್ಬಿರಿದಿದ್ದರು. ಆದರೆ, ಅಬ್ಬರ ಮಾತುಗಳಿಗಷ್ಟೇ ಸೀಮಿತವಾಗಿದೆ. ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Shaw) ಅವರನ್ನು ಭೇಟಿ ಮಾಡಿ ಕರ್ನಾಟಕ ರಾಜ್ಯದ ವಿಪಕ್ಷ ನಾಯಕರನ್ನು ಆಯ್ಕೆ ಮಾಡುವ ಕುರಿತು ಚರ್ಚೆ ಮಾಡಿ ಬಂದ ಮಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ (BS Yeddyurappa), ವಿಪಕ್ಷ ನಾಯಕರ ಆಯ್ಕೆ ಆಗಿಲ್ಲ. ಸದನದ ಆರಂಭದಲ್ಲಿ ನಿರ್ಧಾರವಾಗಿಲ್ಲ ಎಂದು ಮಾಹಿತಿ ಕೊಟ್ಟಿದ್ದಾರೆ. ಇಂದು ಕೇಂದ್ರದಿಂದ ಇಬ್ಬರು ವೀಕ್ಷಕರು ರಾಜ್ಯಕ್ಕೆ ಆಗಮಿಸಲಿದ್ದಾರೆ. ವಿನೋದ್ ತಾವಡೆ ಮತ್ತು ಮನ್ಸೂಕ್ ಮಂಡವಿಯಾ ಇಬ್ಬರು ವೀಕ್ಷಕರು ಆಗಮಿಸಲಿದ್ದು, ಅವರೇ ಸ್ವತಃ ರಾಜ್ಯ ಬಿಜೆಪಿ ಶಾಸಕರಿಂದ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ.
ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆಯೂ ವೀಕ್ಷಕರಿಂದ ಮಾಹಿತಿ ಸಂಗ್ರಹ ಆಗಲಿದೆ. ನಂತರ ವೀಕ್ಷಕರು ಕೇಂದ್ರ ನಾಯಕರಿಗೆ ವರದಿ ನೀಡಲಿದ್ದಾರೆ. ನಂತರ ವಿಪಕ್ಷ ನಾಯಕ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ. ಈ ಮೂಲಕ ನಾಳೆ ಅಧಿವೇಶನಕ್ಕೆ ಮುನ್ನ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಇಲ್ಲ ಎಂದು ಸ್ಪಷ್ಟ ಮಾಹಿತಿ ನೀಡಿದ್ದಾರೆ ಮಾಜಿ ಸಿಎಂ ಯಡಿಯೂರಪ್ಪ.
ವಿರೋಧ ಪಕ್ಷದ ನಾಯಕನ (Opposition Party leader) ಆಯ್ಕೆಗೆ ದೆಹಲಿಗೆ ಹೋಗಿದ್ದ ಯಡಿಯೂರಪ್ಪ ಅವರ ಜೊತೆ ಮೀಟಿಂಗ್ ಎರಡು ಬಾರಿ ಮುಂದೂಡಿಕೆಯಾಯಿತು. ಮಹಾರಾಷ್ಟ್ರದಲ್ಲಿ(Maharashtra) ಆದ ದಿಢೀರ್ ಬೆಳವಣಿಗೆ ಹಿನ್ನೆಲೆಯಲ್ಲಿ ಅಮಿತ್ ಶಾ ಅತ್ತ ಬ್ಯುಸಿಯಾಗಿ ಹೋದರು. ಹೀಗಾಗಿ ಯಡಿಯೂರಪ್ಪ ಕಾಯಬೇಕಾಗಿ ಬಂತು. 4 ಗಂಟೆಯ ಸಭೆ ಹಾಗೂ 8 ಗಂಟೆಯ ಸಭೆಗಳೆರಡೂ ಮುಂದಕ್ಕೆ ಹೋಗಿ, ರಾತ್ರಿ 9 ಗಂಟೆಗೆ ಸಭೆ ನಿಗದಿಯಾಯ್ತು. ಕೊನೆಗೆ ಅರ್ಧ ಗಂಟೆಗಳಷ್ಟು ಹೊತ್ತು ಮೀಟಿಂಗ್ ನಡೆದರೂ ಯಾರು ಲೀಡರ್ ಎಂಬ ನಿರ್ಧಾರಕ್ಕೆ ಬರಲಾಗಲಿಲ್ಲ. ಹೀಗಾಗಿ ದೆಹಲಿಯ ನಂತರ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬೆಂಗಳೂರಿಗೇ ಶಿಫ್ಟ್ ಆಗಿದೆ.



