ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕದಲ್ಲಿ ಸುದ್ದಿ ಮಾಧ್ಯಮಗಳು ಬ್ಯುಸಿಯೋ ಬ್ಯುಸಿ. ಯಾವ ಮಟ್ಟಿಗೆಂದರೆ.. ಒಂದರ ಹಿಂದೊಂದು ಪ್ರಕರಣ, ಹಗರಣಗಳು ನಡೆಯುತ್ತಲೇ ಇವೆ. ಮೊದಲಿಗೆ ಪ್ರಜ್ವಲ್ ರೇವಣ್ಣ, ಆಮೇಲೆ ದರ್ಶನ್ ಪ್ರಕರಣ, ಬೆನ್ನಲ್ಲೇ ಸೂರಜ್ ರೇವಣ್ಣ ಕೇಸ್, ರಾಜಕೀಯದ ವಿಷಯಕ್ಕೆ ಬಂದರೆ ವಾಲ್ಮೀಕಿ ನಿಗಮದ ಹಗರಣ, ಮುಡಾ ಸೈಟು ಹಂಚಿಕೆ ಹಗರಣ, ಸಿಎಂ ಬದಲಾಗ್ತಾರೆ ಎಂಬ ರಾಜಕೀಯ ಸಂಚಲನ, ಪ್ರವಾಹ, ಟಿಬಿ ಡ್ಯಾಂ ಕ್ರಸ್ಟ್ ಗೇಟ್ ಡ್ಯಾಮೇಜ್.. ಹೀಗೆ ರಾಜ್ಯದಲ್ಲಿ ಸುದ್ದಿಗಳ ಸುರಿಮಳೆ.
ಅತ್ತ ದೇಶಾದ್ಯಂತ ಬಾಂಗ್ಲಾದಲ್ಲಿ ಕ್ಷಿಪ್ರಕ್ರಾಂತಿ, ಕೇಜ್ರಿವಾಲ್ ಕೇಸ್, ಒಲಿಂಪಕ್ಸ್, ವಿಶ್ವಕಪ್ ವಿಜಯ.. ಹೀಗೆ ಸುದ್ದಿಗಳಿಗಂತೂ ಬರವಿಲ್ಲ. ಇದೆಲ್ಲದರ ಮಧ್ಯೆ ಟಿಆರ್‌ಪಿ ಕಾಪಾಡಿಕೊಂಡಿದ್ದು ಒನ್ & ಓನ್ಲಿ ದರ್ಶನ್. ಘಟನೆ ಆಗಿ 3 ತಿಂಗಳಾಗುತ್ತಿದ್ದರೂ, ಘಟನೆಯ ಬಿಸಿ ಮತ್ತು ರೇಟಿಂಗ್ ಕಡಿಮೆಯಾಗಿಲ್ಲ. ಇವೆಲ್ಲವುಗಳ ಮಧ್ಯೆ ದರ್ಶನ್ ಪ್ರಕರಣಕ್ಕೆ ಚಾಲೆಂಜ್ ಹಾಕಿದ್ದ ಇನ್ನೊಂದು ಪ್ರಕರಣ ಎಂದರೆ, ಅದು ಮುಡಾ ಸೈಟು ಹಗರಣ ಒಂದೇ. ಏಕೆಂದರೆ, ಸಿದ್ಧರಾಮಯ್ಯನವರ ಪಟ್ಟಕ್ಕೇ ಕುತ್ತು ತಂದಿದೆ ಎಂಬ ವಾದಗಳಿವೆ.
ವಿಚಿತ್ರವೇನೆಂದರೆ, ಈಗ ಪ್ರಹ್ಲಾದ್ ಜೋಶಿ ಮಾಡಿರುವ ಅತಿ ದೊಡ್ಡ ಆರೋಪ. ಕೇಂದ್ರ ಸಚಿವರೂ ಆಗಿರೋ ಜೋಶಿ ಅವರ ಪ್ರಕಾರ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿರುವ ಮುಡಾ ಹಗರಣದ ಚರ್ಚೆಯನ್ನು ಹತ್ತಿಕ್ಕಲೆಂದೇ ಸ್ವತಃ ಕಾಂಗ್ರೆಸ್ ಸರ್ಕಾರದಿಂದ ನಟ ದರ್ಶನ್ ಮಾಡಿದ್ದಾರೆನ್ನಲಾದ ರೇಣುಕಾಸ್ವಾಮಿ ಕೊಲೆ ಕೇಸಿನ ಸಂಬಂಧಿತ ಫೋಟೋಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿರೋ ಜೋಶಿ, ದರ್ಶನ್ ಫೋಟೋಗಳನ್ನು ಉದ್ದೇಶ ಪೂರ್ವಕವಾಗಿಯೇ ರಿಲೀಸ್ ಮಾಡಲಾಗುತ್ತಿದೆ. ಖುದ್ದು ರಾಜ್ಯ ಸರ್ಕಾರವೇ ಈ ಕೆಲಸ ಮಾಡಿಸುತ್ತಿದೆ. ಚಿತ್ರದುರ್ಗದ ವ್ಯಕ್ತಿ ರೇಣುಕಾಸ್ವಾಮಿಯದ್ದು ರಾಜ್ಯ ಕಂಡಂತಹ ಅತ್ಯಂತ ಕ್ರೂರ ಹತ್ಯೆಯಾಗಿದೆ. ಆದರೆ, ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ ಎನ್ನಲಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಮತ್ತು ಕಾಂಗ್ರೆಸ್ ಸರ್ಕಾರದ ಮಂತ್ರಿ ನಾಗೇಂದ್ರ ಅವರು ಭಾಗಿಯಾಗಿರುವ ವಾಲ್ಮೀಕಿ ಹಗರಣಗಳು ಹೊರಗೆ ಬಂದ ನಂತರ ಅವುಗಳ ಬಗ್ಗೆ ಚರ್ಚೆ ಜೋರಾಯಿತು. ರಾಜ್ಯಾದ್ಯಂತ ಮುಡಾ ಮತ್ತು ವಾಲ್ಮೀಕಿ ಹಗರಣದ ಕುರಿತ ಚರ್ಚೆಗಳು ಶುರುವಾದ ನಂತರ, ಈ ಚರ್ಚೆಯನ್ನು ಡೈವರ್ಟ್ ಮಾಡುವ ಉದ್ದೇಶದಿಂದಲೇ ಸ್ವತಃ ರಾಜ್ಯ ಸರ್ಕಾರದಿಂದಲೇ ಪುನಃ ನಟ ದರ್ಶನ್ ಪ್ರಕರಣವನ್ನು ಮುನ್ನೆಲೆಗೆ ಎಳೆದು ತರಲಾಗಿದೆ. ಸಂಕುಚಿತ ಷಡ್ಯಂತ್ರ ಮನೋಭಾವದಿಂದ ಹೀಗೆ ಮಾಡಲಾಗಿದೆ. ಇಲ್ಲಿ ಕೊಲೆ ಮಾಡಿದವರಿಗೆ ನ್ಯಾಯಾಲಯದಲ್ಲಿ ಅತ್ಯಂತ ಕಠಿಣ ಶಿಕ್ಷೆ ಆಗಲೇಬೇಕು. ಆದರೆ, ಆರೋಪಿಗಳ ಮೊಬೈಲ್ ಫೋನ್‌ಗಳಿಂದ ರಿಟ್ರೀವ್ (ಮರು ಸಂಗ್ರಹಿಸಲಾದ) ಮಾಡಿದ ಫೋಟೋಗಳನ್ನು ಬಿಡುಗಡೆ ಮಾಡಿರೋದು ಅಕ್ಷಮ್ಯ ಅಪರಾಧವಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಒಂದು ಗಂಭೀರ ಕೊಲೆ ಕೇಸಿಗೆ ಸಂಬಂಧಿಸಿದ ಫೋಟೋಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುತ್ತಿರುವ ವಿಚಾರವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಕಾರಣಿಕರ್ತರಾದ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು. ಇಲ್ಲಿ ವಿಷಯಾಂತರ ಮಾಡಲೆಂದೇ ಹೀಗೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದು ನಿಜವೇ ಎಂದು ಹುಡುಕಿದರೆ, ಹಾಗೇನೂ ಕಾಣಿಸುವುದಿಲ್ಲ. ಏಕೆಂದರೆ ದರ್ಶನ್ ವಿಚಾರದಲ್ಲಿ ದಿನಕ್ಕೊಂದು ಸುದ್ದಿ ಬರುತ್ತಿದೆ. ಎಲ್ಲವೂ ಥ್ರಿಲ್ಲರ್ ಕಥೆಯಂತೆಯೇ ಇವೆ. ರೋಚಕತೆ ಇದೆ. ಸಸ್ಪೆನ್ಸ್ ಮತ್ತು ಕುತೂಹಲವೂ ಇದೆ. ದರ್ಶನ್ ರಿಲೀಸ್ ಆಗ್ತಾರಾ..? ಕೇಸಿಂದ ಬಚಾವ್ ಆಗ್ತಾರಾ.. ಎಂಬ ಚರ್ಚೆ ಹಾದಿಬೀದಿಗಳಲ್ಲಿ ನಡೆಯುತ್ತಿದೆ. ಟಿವಿಯೋವ್ರು ಹೇಳಿದ್ದನ್ನೇ ಹೇಳ್ತಾರೆ ಅನ್ನೋವ್ರೂ ಕೂಡಾ ಅದೇ ಸುದ್ದಿಯನ್ನು ಹುಡುಕಿ ಹುಡುಕಿ ನೋಡ್ತಾರೆ.
ಆದರೆ ಸಿದ್ಧರಾಮಯ್ಯ ವಿರುದ್ಧದ ವಿಷಯದಲ್ಲಿ ಹಾಗಲ್ಲ. ಸಿದ್ಧರಾಮಯ್ಯ ಅವರನ್ನ ಕೆಳಕ್ಕೆ ಇಳಿಸೋ ಹುಚ್ಚು ಸಾಹಸವನ್ನ ಕಾಂಗ್ರೆಸ್ ಮಾಡಲ್ಲ ಅನ್ನೋದು ಜನರಿಗೆ ಗೊತ್ತು. ಇತಿಹಾಸದಿಂದ ಪಾಠ ಕಲಿತಿರೋ ಕಾಂಗ್ರೆಸ್, ಕೇರ್ ಫುಲ್ಲಾಗಿ ನಡೆದುಕೊಳ್ಳುತ್ತೆ ಅನ್ನೋದು ಜನರಿಗೆ ಅರ್ಥವಾಗದ ವಿಷಯವೇನಲ್ಲ. ಸಿಎಂ ಸ್ಥಾನದಿಂದ ಸಿದ್ಧರಾಮಯ್ಯ ಇಳೀತಾರೆ ಅನ್ನೋ ಸುದ್ದಿಯನ್ನೇ ಒಪ್ಪದ ಜನ, ಮುಡಾ ಹಗರಣ ಸುದ್ದಿಯ ಕುರಿತು ನಾಯಕರ ಹೇಳಿಕೆಗಳನ್ನ ನೋಡಿ.. ನೋಡಿ.. ನಾವ್ ಹೇಳ್ದಂಗೇ ಮಾಡ್ತಾವ್ರೆ ಅಂದ್ಕೋತಾರೆ. ಇದನ್ನೂ ಮೀರಿ ಇನ್ನೇನಾದ್ರೂ ಆಗಬೇಕೆಂದರೆ.. ಕುರ್ಚಿ ನಿಜಕ್ಕೂ ಅಲ್ಲಾಡಬೇಕು.



