ʻಮಿಸ್ಟರ್ ಕ್ಲೀನ್ ಸ್ವಾಮಿ (ಕುಮಾರಸ್ವಾಮಿ) ವಿರುದ್ಧ 50 ಡಿನೋಟಿಫಿಕೇಷನ್ ಪ್ರಕರಣ ಇರುವುದು ಗೊತ್ತಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರಾಜ್ಯಪಾಲರ ಮುಂದೆ ಲೋಕಾಯುಕ್ತ ಪೊಲೀಸರ ಪ್ರಾಸಿಕ್ಯೂಷನ್ ಅರ್ಜಿಯೂ ಬಾಕಿಯಿದೆ. ಎಲ್ಲಾ ಹಗರಣಗಳನ್ನೂ ಬಿಚ್ಚಿಡುತ್ತೇನೆ’ .. ಅಂತಿದ್ದಾರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್.
‘ನನ್ನನ್ನು ಕೆಣಕಬೇಡ ಶಿವಕುಮಾರ್, ಹುಷಾರು…’ ಎಂದು ಎಚ್ಚರಿಕೆ ನೀಡಿದ್ದಾರೆ ಕುಮಾರಸ್ವಾಮಿ.
ಕುಮಾರಸ್ವಾಮಿ ಅವರು ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದಲ್ಲಿ ಮೊದಲು ನನ್ನ ಮೇಲೆ ಆರೋಪ ಮಾಡಿದರು. ನಂತರ ಪ್ರೀತಂ ಗೌಡನ ಮೇಲೆ ಆರೋಪ ಮಾಡಿದ್ದಾರೆ. ಈ ಹಿಂದೆ ಯಡಿಯೂರಪ್ಪನವರಿಗೆ ಅಧಿಕಾರ ನೀಡದೆ ಬೆನ್ನಿಗೆ ಚೂರಿ ಹಾಕಿದವರು ಯಾರು? ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದಲ್ಲಿ ಯಾರನ್ನೂ ಬೆಳೆಯಲು ಬಿಡಲಿಲ್ಲ. ಉಪಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರನ್ನೂ ಬಿಡಲಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಪಕ್ಷದಲ್ಲಿ 17 ಸಂಸದರಿದ್ದರು. ಅವರಲ್ಲಿ ಯಾರೊಬ್ಬರೂ ಈಗ ಜೆಡಿಎಸ್ ಪಕ್ಷದಲ್ಲಿಲ್ಲ. ತಮ್ಮ ಮಕ್ಕಳಿಗೆ ರಾಜಕೀಯ ದಾರಿ ಮಾಡಿಕೊಡಲು ಕುಮಾರಸ್ವಾಮಿ ಅವರು ಜೆಡಿಎಸ್ ನಾಯಕರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಇದು ಜನತಾದಳದ ಇತಿಹಾಸ. ಕೊನೆಗೆ ತನ್ನ ಮಗನಿಗೆ ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ ಎಂದು ಅಣ್ಣನ ಮಗನ ವಿರುದ್ಧವೇ ಪಿತೂರಿ ಮಾಡಿ ಅವನ ಮೇಲೂ ಕೇಸ್ ದಾಖಲಾಗುವಂತೆ ಮಾಡಿದ್ದಾರೆ. ಅಂಥವರು ಸಿದ್ದರಾಮಯ್ಯ ಹಾಗೂ ನನ್ನನ್ನು ಬಿಡುತ್ತಾರಾ? ಎಂದರು.
ಡಿ.ಕೆ.ಶಿವಕುಮಾರ್‌ಗೆ ವ್ಯಕ್ತಿತ್ವ ಎನ್ನುವುದು ಇದೆ ಯಾರು? ಅವರದ್ದು ಒಂದುನಾಲಿಗೆನಾ.. ಅವರುಮನುಷ್ಯನಾ? ಮೊದಲು ನೆಟ್ಟಗೆ ಬದುಕು, ನನ್ನನ್ನು ಕೆಣಕಬೇಡ ಶಿವಕುಮಾರ್, ಹುಷಾರ್… ಎಂದು ಗುಡುಗಿದರು ಕುಮಾರಣ್ಣ.
‘ಮಿಸ್ಟರ್ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆಯಲ್ಲಿ ಕೇವಲ 19 ಸೀಟು ಗೆದ್ದ ನಿನಗೆ 136 ಸ್ಥಾನ ಗೆದ್ದು ಜನಾಶೀರ್ವಾದದಿಂದ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರ ರಾಜೀನಾಮೆ ಬೇಕಾ? ಈ ಕನಕಪುರ ಬಂಡೆ ಸಿದ್ದರಾಮಯ್ಯ ಹಿಂದೆ ಇದೆ. ಈ ಬಂಡೆ ಹಿಂದಿನ 136 ಶಾಸಕರೂ ಸಿದ್ದರಾಮಯ್ಯ ಹಿಂದೆ ಇದ್ದಾರೆ. ಹತ್ತು ತಿಂಗಳಲ್ಲ ಹತ್ತು ವರ್ಷವಾದರೂ ನಿಮಗೆ ಈ ಸರ್ಕಾರ ಮುಟ್ಟಲಾಗಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಎಸೆದರೆ..
ಕುಮಾರಸ್ವಾಮಿ.. ನಿಮ್ಮ ಯೋಗ್ಯತೆ, ಹಣೆಬರಹ ನನಗೆ ಬಹಳ ಚೆನ್ನಾಗಿ ಗೊತ್ತಿದೆ. ನಿಮ್ಮ ಬಗ್ಗೆ ನನ್ನಲ್ಲಿರುವ ಮಾಹಿತಿ ತೆಗೆದಿಟ್ಟರೆ ಬದುಕಲು ಕಷ್ಟವಾಗುತ್ತದೆ. ನಮ್ಮ ಕುಟುಂಬದ ವಿರುದ್ಧ ಏನೆಲ್ಲ ಸಂಚು ಮಾಡಿದ್ದೀರಿ, ರೇವಣ್ಣ ಕುಟುಂಬ ಮುಗಿಸಲು ಏನೇನು ಕುತಂತ್ರ ಮಾಡಿದ್ದೀರಿ ಎನ್ನುವುದು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ನಮ್ಮ ಶಾಸಕರು ಕಡಿಮೆ ಇದ್ದರೂ ದಾಖಲೆ ಸಮೇತ ಹೋರಾಟ ಮಾಡಿದ್ದೆವು. ದಾಖಲೆ ಸಮೇತ ಮಾತನಾಡಿದೆವು, ಅದರಲ್ಲೇನು ನಾಚಿಕೆ ಇಲ್ಲ ಎಂದು ಉತ್ತರ ಕೊಟ್ಟಿದ್ದಾರೆ.
ಸರ್ಕಾರ ಕೆಡವಲು ಪ್ರಯತ್ನ ನಡೆಯುತ್ತದೆಯಂತೆ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಂಚು ನಡೆಯುತ್ತಿದೆ ಎಂದು ಯಾರು ಹೇಳಿದರು? ಅವರಿಗೇನು ಕನಸು ಬಿದ್ದಿತ್ತಾ? ಅಥವಾ ಅಜ್ಜಯ್ಯ ಹೇಳಿದರಾ? ಯಾರು ಹೇಳಿದ್ರಂತೆ ಅವರಿಗೆ? ಪ್ರಶ್ನೆ ಮಾಡಿದ್ದಾರೆ ಕುಮಾರಸ್ವಾಮಿ
ಇತ್ತ ಡಿಕೆ ಶಿವಕುಮಾರ್ ‘ಹೇಯ್ ವಿಜಯೇಂದ್ರ, ಹೇಯ್ ಅಶೋಕ, ಕುಮಾರಸ್ವಾಮಿ ಸಿದ್ದರಾಮಯ್ಯನವರ ರಾಜೀನಾಮೆ ಬೇಕಾ? 19 ಸ್ಥಾನ ಗೆದ್ದ ನಿನಗೆ ರಾಜೀನಾಮೆ ಕೇಳುವ ನೈತಿಕತೆ ಇದೆಯಾ? ಮಾಧ್ಯಮಗಳು ನನ್ನನ್ನು ಬಂಡೆ ಎಂದರು. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ಬಂಡೆ ಸಿದ್ದರಾಮಯ್ಯನ ಜತೆ ಇದೆ. ಈ ಬಂಡೆ ಜತೆಗೆ 135 ಶಾಸಕರೂ ಸಿದ್ದರಾಮಯ್ಯ ಹಿಂದೆ ಇದ್ದಾರೆ. ಕೋಟ್ಯಂತರ ಜನ ಸಿದ್ದರಾಮಯ್ಯನವರ ಬೆನ್ನಿಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ’ ಎಂದಿದ್ದಾರೆ.
ಒಟ್ಟಿನಲ್ಲಿ ಹೋರಾಟ ನಡೆಯುತ್ತಿರುವು ಸಿಎಂ ಸಿದ್ದರಾಮಯ್ಯ ಮತ್ತು ಅವರ ಮೇಲೆ ಕೇಳಿ ಬಂದಿರೋ ಮುಡಾದಲ್ಲಿ 14 ಸೈಟು ಪಡೆದಿರುವ ಪ್ರಕರಣದಲ್ಲಿ. ಅದು ಸರಿಯೋ ತಪ್ಪೋ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಒಂದು ಕಡೆ ಕೋರ್ಟು, ಮತ್ತೊಂದು ಗವರ್ನರ್, ಅಧಿವೇಶನ ಹಾಗೂ ಬೀದಿ ಬೀದಿಯಲ್ಲಿ ಚರ್ಚೆಯಾಗುತ್ತಿದೆ. ಈ ಹಿಂದೆ ಕೇಳಿ ಬಂದ ಆರೋಪಗಳಿಗಿಂತ ತುಂಬ ಗಂಭೀರವಾದ ಪ್ರಕರಣ ಇದು ಎನ್ನುವುದಂತೂ ಸತ್ಯ. ಆದರೆ.. ಡಿಕೆ ಮತ್ತು ಹೆಚ್ಡಿಕೆ ಸಮರದ ಮಧ್ಯೆ ಸಿದ್ದರಾಮಯ್ಯ ಸೈಡಿಗೆ ಹೋಗಿದ್ದಾರೆ ಎನ್ನುವುದೂ ಅಷ್ಟೇ ಸತ್ಯ.



