ಸಿದ್ದರಾಮಯ್ಯ ಈ ಬಾರಿ ಸಿಎಂ ಆಗುತಿದ್ದಂತೆಯೇ ಕ್ರಾಂತಿ ಬರೆದಿದ್ದಾರೆ. ಮೊದಲನೆಯದ್ದು ತಮಗೆ ಝೀರೋ ಟ್ರಾಫಿಕ್ ಬೇಡ ಎಂದಿದ್ದು. ಎರಡನೆಯದ್ದು ತಮ್ಮ ಕಚೇರಿಗೆ ಬರುವವರು ಹೂವಿನ ಹಾರ, ಬೊಕೆಗಳನ್ನು ತರಬೇಡಿ. ತರುವುದಾದರೆ, ಕೊಡುವುದಾದರೆ ಪುಸ್ತಕಗಳನ್ನು ಕೊಡಿ ಎಂದಿದ್ದು. ಎರಡೂ ಕ್ರಾಂತಿಕಾರಕ ನಿರ್ಧಾರಗಳೇ ಸರಿ.
ಝೀರೋ ಟ್ರಾಫಿಕ್ ಅನ್ನೋದು ಕೆಲವು ರಾಜಕಾರಣಿಗಳಿಗೆ ಚಟವಾಗಿ ಹೋಗಿದೆ. ಅದೊಂದು ಪ್ರತಿಷ್ಠೆಯ ವಿಷಯವಾಗಿ ಹೋಗಿದೆ. ಅಂದರೆ ರಾಜ್ಯಪಾಲರು, ಮುಖ್ಯಮಂತ್ರಿಗಳು ಬರುವಾಗ, ಹೋಗುವಾಗ ಅವರು ಹೋಗಿ-ಬರುವ ರಸ್ತೆಗಳಲ್ಲಿ ಯಾವುದೇ ವಾಹನಗಳು ಓಡಾಡದಂತೆ ಮಾಡುವುದೇ ಝೀರೋ ಟ್ರಾಫಿಕ್.
ಅದು ಗಣ್ಯ ವ್ಯಕ್ತಿಗಳು ಬರುವುದಕ್ಕೆ ಕನಿಷ್ಠ ಒಂದು ಗಂಟೆ ಮುನ್ನ ಶುರುವಾಗುತ್ತದೆ. ಜನಸಾಮಾನ್ಯರಂತೂ ಇವುಗಳಿಂದ ಬೇಸತ್ತು ಹೋಗಿದ್ದರು. ಈ ರಾಜಕಾರಣಿಗಳು ಓಡಾಡೋಕೆ ನಾವ್ಯಾಕೆ ಬಿಸಿಲು-ಮಳೆಯಲ್ಲಿ ಕೊಳೆಯಬೇಕು, ಹಂಗೇ ಕೆಲ್ಸ ಮಾಡುವುದಕ್ಕೆ ಆಗಲ್ವಾ ಎಂದು ಹಿಡಿಶಾಪ ಹಾಕುತ್ತಿದ್ದರು. ಅಂದಹಾಗೆ ಕಾನೂನಿನ ಪ್ರಕಾರ ಈ ಝೀರೋ ಟ್ರಾಫಿಕ್ ವ್ಯವಸ್ಥೆ ಇರುವುದು ಸಿಎಂ ಮತ್ತು ರಾಜ್ಯಪಾಲರಿಗೆ ಮಾತ್ರ. ಕೆಲವೊಮ್ಮೆ ಅದನ್ನು ಅನಧಿಕೃತವಾಗಿ ಬೇರೆಯವರೂ ಬಳಸ್ತಾರೆ. ಕಳೆದ ಅವಧಿಯಲ್ಲಿ ಗೃಹ ಸಚಿವರಾಗಿದ್ದಾಗ ಪರಮೇಶ್ವರ್ ಅವರಂತೂ ವಿಪರೀತ ಬಳಸಿ ಟೀಕೆಗೆ ಗುರಿಯಾಗಿದ್ದರು. ಕಾಂಗ್ರೆಸ್`ನ ರಾಷ್ಟ್ರೀಯ ಮುಖಂಡರೂ ಬೆಂಗಳೂರಿಗೆ ಬಂದಾದ ಝೀರೋ ಟ್ರಾಫಿಕ್ ವೈಭೋಗ ಅನುಭವಿಸುತ್ತಿದ್ದರು.
ಇದೀಗ ಸಿದ್ದರಾಮಯ್ಯ ಆ ಎಲ್ಲವುಗಳಿಗೂ ಬ್ರೇಕ್ ಹಾಕಿದ್ದಾರೆ. ಮುಖ್ಯಮಂತ್ರಿಯೇ ಬಳಸೋದಿಲ್ಲ ಎಂದಾಗ ಬೇರೆಯವರೂ ಬಳಸುವುದಿರಲಿ, ಕೇಳುವಂತೆಯೂ ಇಲ್ಲ. ಇದಕ್ಕೆ ಬಹುಪರಾಕ್ ಇದ್ದರೆ, ಇನ್ನೊಂದು ಆದೇಶ ಹೂ ಬೇಡ, ಪುಸ್ತಕ ಕೊಡಿ ಎಂಬ ಆದೇಶದ್ದು. ಇದಕ್ಕೆ ಒಂದಷ್ಟು ಜನ ಪ್ರಶಂಸೆಯನ್ನೂ ಮಾಡಿದ್ದಾರೆ. ಕೆಲವರು ಟೀಕಿಸಿಯೂ ಇದ್ದಾರೆ.
ಟೀಕೆಗಳಿಗೆ ಕಾರಣ, ಹೂ ಬೆಳೆಗಾರರು. ಬೇರೆಯವರ ವಿಷಯ ಬಿಡಿ, ವಿಧಾನಸೌಧದ ಸುತ್ತಮುತ್ತ 1 ಕಿ.ಮೀ. ವ್ಯಾಪ್ತಿಯಲ್ಲಿಯೇ ಸುಮಾರು 50ಕ್ಕೂ ಹೆಚ್ಚು ಹೂ ಮಾರಾಟಗಾರರ ಅಂಗಡಿಗಳಿವೆ. ಹೂವುಗಳನ್ನು ನಂಬಿಕೊಂಡೇ ಬದುಕುತ್ತಿರುವ ಜನ ವಿಧಾನಸೌಧದ ಸುತ್ತಲೇ ಸಾವಿರಾರು ಜನರಿದ್ದಾರೆ. ಆ ವ್ಯಾಪಾರಿಗಳನ್ನು ನಂಬಿಕೊಂಡು ನೂರಾರು ಹೂ ಕೃಷಿಕರಿದ್ದಾರೆ. ಸಾಗಾಟಗಾರರಿದ್ದಾರೆ. ಈಗ ಸಿದ್ದರಾಮಯ್ಯ ಮಾಡಿರುವ ಈ ಅದೇಶದಿಂದ ನಷ್ಟವಾಗುವುದು ಇವರೆಲ್ಲರಿಗೆ. ಏಕೆಂದರೆ ಮುಖ್ಯಮಂತ್ರಿಯೇ ಹೂಗುಚ್ಛ ಸ್ವೀಕರಿಸುತ್ತಿಲ್ಲ ಎಂದಾದಾಗ ಸಹಜವಾಗಿಯೇ ಬೇರೆಯವರೂ ಅದನ್ನು ಫಾಲೋ ಮಾಡ್ತಾರೆ. ಆಗ ನಷ್ಟವಾಗುವುದು ಸಾವಿರಾರು ಜನರಿಗೆ.
ಈಗ ಇದನ್ನು ಟೀಕಿಸುತ್ತಿರುವವರು ಹೇಳ್ತಿರೋದು ಒಂದೇ. ವಿಧಾನಸೌಧಕ್ಕೆ ಬರುವ, ನಿಮಗೇ ಹೂಗುಚ್ಛ ಕೊಡುವ ಶಕ್ತಿ ಇರುವವರ್ಯಾರು ಬಡವರಂತೂ ಆಗಿರಲ್ಲ. ಹಾಗಾಗಿ ಪುಸ್ತಕಗಳ ಜೊತೆ ಹೂಗುಚ್ಛ ಕೊಡಿ ಎಂದು ಹೇಳಿ ಎಂದು ಸಲಹೆ ಕೊಡುತ್ತಿದ್ದಾರೆ.



