ಯುವರಾಜ್ ಕುಮಾರ್ ನಟನೆಯ 2ನೇ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ. ಜುಲೈ 18ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಚಿತ್ರತಂಡ ಈಗಷ್ಟೆ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಈಗಾಗಲೇ ಟೀಸರ್ ಹಾಗೂ ಟೈಟಲ್ ಟ್ರ್ಯಾಕ್ ಮೂಲಕ ಭಾರೀ ನಿರೀಕ್ಷೆ ಹೆಚ್ಚಿಸಿದೆ.
‘ಜಾಕಿ’ ಚಿತ್ರದ ದೃಶ್ಯವೊಂದರಲ್ಲಿ ಅಪ್ಪು ವಿಭಿನ್ನ ಅವತಾರದಲ್ಲಿ ದರ್ಶನ ಕೊಟ್ಟಿದ್ದರು. ‘ಎಕ್ಕ’ ಟೀಸರ್‌ನಲ್ಲಿ ಯುವ ಕೂಡಾ ಅಂಥದ್ದೇ ಲುಕ್‌ನಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ.
ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಅಶ್ವಿನಿ ಪುನೀತ್, ಜಯಣ್ಣ-ಭೋಗೇಂದ್ರ ಹಾಗೂ ಕಾರ್ತಿಕ್ ಗೌಡ, ಯೋಗಿ ರಾಜ್ ಜಂಟಿ ನಿರ್ಮಾಣದ ಚಿತ್ರವಿದು. ವಿಕ್ರಂ ಹತ್ವಾರ್ ಕತೆ ಬರೆದಿದ್ದು, ರೋಹಿತ್ ಪದಕಿ ನಿರ್ದೇಶಿಸಿದ್ದಾರೆ.
ಸಂಜನಾ ಆನಂದ್ ಹಾಗೂ ಸಂಪದಾ ಚಿತ್ರದ ನಾಯಕಿಯರು. ಅತುಲ್ ಕುಲಕರ್ಣಿ, ಆದಿತ್ಯ ಸೇರಿದಂತೆ ದೊಡ್ಡ ತಾರಗಣವೇ ಚಿತ್ರದಲ್ಲಿದೆ. ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿದೆ. ಯುವ ರಾಜ್‌ಕುಮಾರ್ ಸಖತ್ ರಫ್ ಆ್ಯಂಡ್ ಟಫ್ ರೋಲ್ ಮಾಡಿದ್ದು, ರಕ್ತಸಿಕ್ತ ಜಗತ್ತಿನ ಹೊಸ ಅಧ್ಯಾಯ ಅಂತಲೂ ಫೀಲ್ ಆಗುತ್ತದೆ. ಆ ರೀತಿಯ ಪೋಸ್ಟರ್‌ಗಳು ಈಗಾಗಲೇ ರಿಲೀಸ್ ಆಗಿವೆ.
ಇನ್ನು ಸಿನಿಮಾದಲ್ಲಿ ಬ್ಯಾಂಗಲ್ ಬಂಗಾರಿ ಎಂಬ ಹಾಡು ಜೂನ್ 5ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಆರ್‌ಸಿಬಿ ವಿಜಯೋತ್ಸವ ದುರಂತಕ್ಕೆ 11 ಮಂದಿ ಬಲಿಯಾದ ದುರಂತದ ಹಿನ್ನೆಲೆಯಲ್ಲಿ ಹಾಡಿನ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಜೂನ್ 6ರಂದೇ ಚಿತ್ರ ರಿಲೀಸ್ ಮಾಡುವುದಾಗಿ ಮೊದಲು ಹೇಳಲಾಗಿತ್ತಾದರೂ, ತಾಂತ್ರಿಕ ತೊಂದರೆಗಳಿಂದಾಗಿ ಚಿತ್ರದ ರಿಲೀಸ್ ಮುಂದಕ್ಕೆ ಹೋಗಿತ್ತು. ಅಷ್ಟೇ ಅಲ್ಲ, ಏಪ್ರಿಲ್ 22 ರಂದು ನಡೆದ ದುರಂತದಲ್ಲೂ ಅಷ್ಟೇ, ಮೊದಲೇ ಫಿಕ್ಸ್ ಆಗಿದ್ದ ಎಕ್ಕ ಚಿತ್ರದ ಟೀಸರ್ ರಿಲೀಸ್ ಮುಂದೂಡಲಾಗಿತ್ತು. ಏಪ್ರಿಲ್ 23ರಂದು ಟೀಸರ್ ರಿಲೀಸ್ ಇತ್ತು. ಎಕ್ಕ ಚಿತ್ರ ಶುರುವಾದಾಗಿನಿಂದಲೂ ಚಿತ್ರಕ್ಕೆ ಒಂದಲ್ಲ ಒಂದು ಅಡ್ಡಿಗಳು ಎದುರಾಗುತ್ತಲೇ ಇವೆ.
ಅದಾದ ಮೇಲೆ ಎಕ್ಕ ಟೀಸರ್ ರಿಲೀಸ್ ಆಗಿತ್ತು. ಮಗು ಮತ್ತು ಮೃಗದ ಕಥೆ ಹೇಳಿದ್ದ ಟೀಸರಿನಲ್ಲಿ ಯುವ, ಪುನೀತ್ ರಾಜ್ ಕುಮಾರ ಜಾಕಿಯಲ್ಲಿ ಬಂದ ಸ್ಟೈಲಿನಲ್ಲೇ ಬಂದಿದ್ದರು. ಜಾಕಿ ವೇಷದಲ್ಲಿ ಪೊರಕೆಯ ಗನ್ ಹಿಡಿದು ಎಂಟ್ರಿ ಕೊಟ್ಟಿದ್ದರು ಯುವ. ಟೀಸರ್ ಸಖತ್ತಾಗಿತ್ತು.
ಒಟ್ಟಿನಲ್ಲಿ ಚಿತ್ರದ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಯ್ತು. ಚಿತ್ರದ ಟೀಸರ್, ಹಾಡುಗಳ ರಿಲೀಸ್ ಕೂಡಾ ಪೋಸ್ಟ್ ಪೋನ್ ಅಗ್ತಾನೇ ಇದೆ. ಇದೆಲ್ಲದರ ಮಧ್ಯೆ ಜುಲೈ 18ಕ್ಕೆ ಎಕ್ಕ ರಿಲೀಸ್ ಪಕ್ಕಾ ಅಂತಿದೆ ಎಕ್ಕ ಟೀಂ. ಯುವ ಆವರೇಜ್ ಹಿಟ್ ಆಗಿರುವ ಹಿನ್ನೆಲೆಯಲ್ಲಿ ಎಕ್ಕ ಚಿತ್ರದ ಮೇಲೆ ಭಾರೀ ಭರವಸೆ ಇಟ್ಟುಕೊಳ್ಳಲಾಗಿದೆ.



