ದೊಡ್ಮನೆ ಹುಡ್ಗ ಯುವ ರಾಜ್ಕುಮಾರ್ ಸಿನಿಮಾ ನೋಡೋಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದರೆ ಅತ್ತ ಕಡೆಯಿಂದ ಬರ್ತಾ ಇರೋ ಸುದ್ದಿ ಹಾಗಿಲ್ಲ. ಡಾ.ರಾಜ್ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಹಿಟ್ ಆದವರು ಲೋಹಿತ್. ದೊಡ್ಡವರಾದ ಮೇಲೆ ಅದೇ ಲೋಹಿತ್ ಪುನೀತ್ ಆದರು. ಶಿವಣ್ಣ ಹ್ಯಾಟ್ರಿಕ್ ಹೀರೋ ಆದರೆ, ಪುನೀತ್ ಪವರ್ ಸ್ಟಾರ್ ಆದರು. ರಾಘವೇಂದ್ರ ರಾಜ್ಕುಮಾರ್ ಕೂಡಾ ಮಿಂಚಿನಂತೆ ಮಿನುಗಿ ಹೋದರು. ವಿನಯ್ ರಾಜ್ಕುಮಾರ್ ಹೀರೋ ಆಗಿದ್ದರೂ, ದೊಡ್ಡ ಹಿಟ್ ಸಿಕ್ಕಿಲ್ಲ. ಈ ಮಧ್ಯೆ ಪುನೀತ್ ನಿರ್ಗಮನ, ದೊಡ್ಮನೆ ಅಭಿಮಾನಿಗಳಿಗೆ ದುಃಖ ತಂದಿದ್ದು, ಆ ದುಃಖವನ್ನು ಯುವ ಮೂಲಕ ಮರೆಯೋ ಕ್ಷಣಕ್ಕೆ ಕಾಯುತ್ತಿದ್ದಾರೆ. ಆದರೆ ಈ ನಡುವೆಯೇ ಒಂದು ದೊಡ್ಡ ಸುದ್ದಿ ಹರಿದಾಡುತ್ತಿದೆ.
ಯುವ. ಯುವ ರಾಜ್ಕುಮಾರ್ ಅಭಿನಯದ ಸಿನಿಮಾ ಡಿಸೆಂಬರ್ 22ಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರ ಘೋಷಣೆಯಾದ ದಿನವೇ ಘೋಷಣೆಯಾಗಿತ್ತು. ಇದೀಗ ಸಿನಿಮಾ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ ಎಂಬ ಚರ್ಚೆ ಶುರುವಾಗುತ್ತಿದೆ. ಸಂತೋಷ್ ಆನಂದರಾಮ್ ನಿರ್ದೇಶನದ ಸಿನಿಮಾ ರಿಲೀಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ. ಕಾರಣ ಸಲಾರ್.
ಪ್ರಭಾಸ್, ಶೃತಿ ಹಾಸನ್ ಅಭಿನಯದ ಸಿನಿಮಾ ಕೂಡಾ ಹೊಂಬಾಳೆಯವರದ್ದೇ. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ತಾಂತ್ರಿಕ ಕಾರಣಗಳಿಂದ ಸಿನಿಮಾ ರಿಲೀಸ್ ಪೋಸ್ಟ್ ಪೋನ್ ಆಗಿದ್ದು, ಡಿಸೆಂಬರ್ 22ರಂದೇ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಇದೀಗ ಸಲಾರ್ ಚಿತ್ರಕ್ಕಾಗಿ ಯುವ ಚಿತ್ರವನ್ನು ಮುಂದೂಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಈ ಸಂಬಂಧ ಸಲಾರ್ ಚಿತ್ರದ ಪ್ಯಾನ್ ಇಂಡಿಯಾ ವಿತರಕರಿಗೆ ಸಂದೇಶ ರವಾನಿಸಿದೆಯಂತೆ. ಇದ್ರೊಂದಿಗೆ ಯುವ ಸಿನಿಮಾ ಬರಬೇಕಿದ್ದ ದಿನಾಂಕಕ್ಕೆ ಸಲಾರ್ ಬರ್ತಿದ್ದು, ಸ್ಟಾರ್ ನಟರ ಚಿತ್ರಗಳಿಗೆ ಸವಾಲ್ ಎಸೆದಿದೆ. , ಡಿಸೆಂಬರ್ 22ಕ್ಕೆ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಥಿಯೇಟರ್ಗೆ ಲಗ್ಗೆಯಿಡ್ತಿದೆ. ಈ ಕಡೆ ಸ್ಯಾಂಡಲ್ವುಡ್ನಲ್ಲಿ ‘ಮಾರ್ಟಿನ್’ ಚಿತ್ರವೂ ಅದೇ ದಿನವನ್ನ ಬುಕ್ ಮಾಡಿಟ್ಟುಕೊಂಡಿದೆಯಂತೆ. ಈಗ ಸಲಾರ್ ಚಿತ್ರವೂ ಅದೇ ದಿನದ ಮೇಲೆ ಕಣ್ಣಾಕಿದ್ದು, ವರ್ಷಾಂತ್ಯಕ್ಕೆ ಬಾಕ್ಸಾಫೀಸ್ನಲ್ಲಿ ಬಿಗ್ ಫೈಟ್ ಆಗುವ ಎಲ್ಲಾ ಸಾಧ್ಯತೆಗಳು ಹುಟ್ಕೊಂಡಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಯುವ ಚಿತ್ರವನ್ನು 2024ಕ್ಕೆ ರಿಲೀಸ್ ಮಾಡಲು ಹೊಂಬಾಳೆ ಪ್ಲಾನ್ ಮಾಡಿದೆ. ಯುವ ಚಿತ್ರದಲ್ಲಿ ಯುವ ರಾಜ್ಕುಮಾರ್ ಎದುರು ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಬಿರುಸಿನ ಚಿತ್ರೀಕರಣ ನಡೆಯುತ್ತಿದ್ದು, ಸಲಾರ್ ಚಿತ್ರಕ್ಕಾಗಿ ಮುಂದೂಡಲ್ಪಡುವ ಸಾಧ್ಯತೆ ಹೆಚ್ಚಾಗಿದೆ.



