ಶಕ್ತಿ (ಮಹಿಳೆಯರಿಗೆ ಉಚಿತ ಸಾರಿಗೆ), ಗೃಹಜ್ಯೋತಿ (200 ಯುನಿಟ್ʻವರೆಗೆ ಉಚಿತ ವಿದ್ಯುತ್), ಗೃಹಲಕ್ಷ್ಮಿ (ಪ್ರತಿ ಮಹಿಳೆಯರಿಗೂ ಮಾಸಿಕ 2 ಸಾವಿರ ರೂ.) ಹಾಗೂ ಅನ್ನಭಾಗ್ಯ (ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿ ಉಚಿತ ಅಕ್ಕಿ. ಸದ್ಯಕ್ಕೆ 5 ಕೆಜಿ ಅಕ್ಕಿ ಉಳಿಕೆ ಹಣ ನೀಡಲಾಗುತ್ತಿದೆ)ಯನ್ನು ಜಾರಿಗೆ ತಂದಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗ ಯುವ ನಿಧಿ ಯೋಜನೆಯನ್ನೂ ಜಾರಿಗೆ ತರಲು ಮುಂದಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಪಂಚ ಗ್ಯಾರಂಟಿಗಳ ಪೈಕಿ ಕೊನೆಯ ಗ್ಯಾರಂಟಿಯಾದ ‘ಯುವನಿಧಿ’ ಯೋಜನೆಗೆ ಜನವರಿಯಲ್ಲಿ ಚಾಲನೆ ನೀಡಲಿದ್ದು, ಡಿಸೆಂಬರ್ ಮಾಸಾಂತ್ಯದ ವೇಳೆಗೆ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಯಾರಿಗೆಲ್ಲ ಯುವನಿಧಿ ಭಾಗ್ಯ : 2023ರಲ್ಲಿ ಪದವಿ ಮತ್ತು ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿ, ಆರು ತಿಂಗಳಾದರೂ ಉದ್ಯೋಗ ಸಿಗದೆ ಪರದಾಡುತ್ತಿರುವ ಯುವಕ-ಯುವತಿಯರು ಯುವನಿಧಿ ಯೋಜನೆಯ ಲಾಭ ದೊರೆಯಲಿದೆ. ಸರ್ಕಾರದ ಅಂದಾಜಿನಂತೆ 5 ಲಕ್ಷ ಯುವಕ-ಯುವತಿಯರು ಯೋಜನೆ ವ್ಯಾಪ್ತಿಗೊಳಪಡಲಿದ್ದಾರೆ. ಆದರೆ 2023ಕ್ಕೂ ಮುನ್ನ ಪದವಿ ಪೂರೈಸಿರುವವರಿಗೆ, ಉದ್ಯೋಗ ಸಿಗದೇ ಇರುವವರಿಗೆ ಈ ಯುವ ನಿಧಿ ಲಾಭ ಸಿಗುವುದಿಲ್ಲ.
ಪದವಿ ಅಥವಾ ಡಿಪ್ಲೋಮಾ ಉತ್ತೀರ್ಣರಾಗಿ 6 ತಿಂಗಳಾದರೂ ಕೆಲಸ ಸಿಗದವರು ಯೋಜನೆಯ ಲಾಭ ಪಡೆಯಲು ಅರ್ಹರಾಗಿರಲಿದ್ದಾರೆ. ಅವರು ನಿರುದ್ಯೋಗಿಗಳಾಗಿರಬೇಕು. ಉನ್ನತ ಶಿಕ್ಷಣಕ್ಕಾಗಿ ನೋಂದಣಿ ಆಗಿರಬಾರದು. ಅಂದರೆ ಡಿಗ್ರಿ ಮುಗಿಸಿದ್ದವರು, ಮಾಸ್ಟರ್ ಡಿಗ್ರಿ ಸೇರಿಕೊಂಡಿದ್ದರೆ ಅವರಿಗೆ ಯುವ ನಿಧಿ ಲಾಭ ಸಿಗುವುದಿಲ್ಲ. ವಿದ್ಯಾಭ್ಯಾಸ ಮುಗಿಸಿರುವ, ಉದ್ಯೋಗ ಸಿಕ್ಕದ ಪದವೀಧರರಿಗೆ 2 ವರ್ಷ ಈ ಲಾಭ ಸಿಗಲಿದೆ. ಎರಡು ವರ್ಷದ ಒಳಗೆ ಕೆಲಸ ಸಿಕ್ಕರೆ, ಉದ್ಯೋಗಿಯಾದರೆ ಅದನ್ನು ಸರ್ಕಾರಕ್ಕೆ ತಿಳಿಸಿ ಯುವ ನಿಧಿ ಸ್ಕೀಂನಿಂದ ಹೊರಬರಬೇಕು. ಒಂದು ವೇಳೆ 2 ವರ್ಷದೊಳಗೆ ಉದ್ಯೋಗ ದೊರೆತರೆ ಅವರನ್ನು ಯೋಜನೆಯ ಫಲಾನುಭವಿ ಪಟ್ಟಿಯಿಂದ ಹೊರಗಿಡಲಾಗುತ್ತದೆ.
ಪದವಿ ವಿದ್ಯಾರ್ಥಿಗಳಿಗೆ ಮಾಸಿಕ 3 ಸಾವಿರ ರು. ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿದವರಿಗೆ ಮಾಸಿಕ 1,500 ಕೋಟಿ ರು. ಸಹಾಯಧನ ನೀಡಲಾಗುತ್ತದೆ.
ಸರ್ಕಾರದ ಉನ್ನತ ಮೂಲಗಳ ಪ್ರಕಾರ ಯುವ ನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಈ ಮಾಸಾಂತ್ಯದ ವೇಳೆಗೆ ಆರಂಭವಾಗಲಿದ್ದು, ಜನವರಿಯಲ್ಲಿ ಯೋಜನೆ ಅಧಿಕೃತವಾಗಿ ಚಾಲನೆ ಪಡೆದುಕೊಳ್ಳಲಿದೆ. ಯೋಜನೆಯ ನೋಂದಣಿ, ಸಹಾಯಧನ ಪಾವತಿ ಸೇರಿದಂತೆ ಸಂಪೂರ್ಣ ವಿವರ ನೀಡಲು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ್ ಪಾಟೀಲ್ ಡಿ.19 ಅಥವಾ 20ರಂದು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.



