ಯುವರಾಜ್ ಕುಮಾರ್ ಮತ್ತು ಪತ್ನಿ ಶ್ರೀದೇವಿ ಭೈರಪ್ಪ ಅವರ ದಾಂಪತ್ಯ ಜೀವನ ʻದಿ ಎಂಡ್ʼ ಹಂತಕ್ಕೆ ಬಂದು ನಿಂತಿದೆ. ಇಬ್ಬರದ್ದೂ ಲವ್ ಮ್ಯಾರೇಜ್. ಇಬ್ಬರೂ ಒಪ್ಪಿಕೊಂಡ ನಂತರವೇ ರಾಘವೇಂದ್ರ ರಾಜ್ ಕುಮಾರ್ ಮದುವೆ ಮಾಡಿಸಿದ್ದು. ಸೊಸೆಯನ್ನು ಮಗಳಲ್ಲ, ನನ್ನ ತಾಯಿ ಎನ್ನುತ್ತಿದ್ದ ರಾಘವೇಂದ್ರ ರಾಜ್ ಕುಮಾರ್ ಕೂಡಾ ಈಗ ಸೊಸೆಯಿಂದ ದೂರ ಇದ್ದಾರೆ. ಈ ನಡುವೆ ಯುವ ರಾಜ್ ಕುಮಾರ್ ಅವರು ಇತ್ತೀಚೆಗೆ ಹಾಕಿದ್ದ ಒಂದು ಪೋಸ್ಟ್ ಭಾರೀ ಚರ್ಚೆ ಹುಟ್ಟುಹಾಕಿತ್ತು. ಆ ಪೋಸ್ಟಿಗೆ, ನಂತರ ಯುವ ರಾಜ್ ಕುಮಾರ್ ದೊಡ್ಡಪ್ಪ ಶಿವಣ್ಣ ಹಾಕಿದ್ದ ಪೋಸ್ಟುಗಳನ್ನು ಶ್ರೀದೇವಿ ಕೆಣಕಿದ್ದರು. ಅವುಗಳಿಗೆ ಯುವ ರಾಜ್ ಕುಮಾರ್ ಒಂದೇ ಮಾತಿನ ಉತ್ತರ ಕೊಟ್ಟಿದ್ದಾರೆ.
“ಆ ಸಂದರ್ಭಕ್ಕೆ ನಾನು ಪೋಸ್ಟ್ ಮಾಡಿದ್ನಲ್ಲ ಅದೇ ನನ್ನ ಉತ್ತರ. ಅದರ ಮೇಲೆ ಬೇರೆ ಏನೂ ಇಲ್ಲ” ಇದು ಯುವರಾಜ್ ಕುಮಾರ್ ಕೊಟ್ಟಿರುವ ಉತ್ತರ.
ವಿವಾದದ ಹಿನ್ನೆಲೆ ಏನು..?
ಯಾವುದೇ ರೀತಿಯಾದ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನು ಕೀಳಾಗಿ ಕಾಣುವ ಪ್ರಪಂಚ ಬೆಳವಣಿಗೆಗೂ ಮುನ್ನ ನಾಶವಾಗಬೇಕು. ಇದು ಯುವ ರಾಜ್ ಕುಮಾರ್ ಹಾಕಿದ್ದ ಪೋಸ್ಟ್.
ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯವಾದದ್ದು. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ ಮತ್ತು ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಸೋಶಿಯಲ್ ಮೀಡಿಯಾ ತುಂಬಾ ಬಲಿಷ್ಠವಾದ ಅಸ್ತ್ರ, ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕು ಹೊರತು, ಅವಾಚ್ಯ ಶಬ್ದಗಳಿಂದ ನಿಂದಿಸಿ, ದ್ವೇಷ-ಅಸೂಯೆಯನ್ನು ಬಿತ್ತಲು ಬಳಸಬಾರ್ದು. ನಿಮ್ಮ ನಿಲುವು ಸರಿಯಿದೆ, ರಮ್ಯಾ. ನಾವು ಸದಾ ನಿಮ್ಮ ಜೊತೆಗೆ ನಿಲ್ಲುತ್ತೇವೆ. ಇದು ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಹಾಕಿದ್ದ ಪೋಸ್ಟ್.
ಕಾರಣ ಗೊತ್ತಿರುವಂತದ್ದೇ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ರಮ್ಯಾ ಪೋಸ್ಟ್ ಹಾಕಿದ್ದು ಹಾಗೂ ಅದಕ್ಕೆ ದರ್ಶನ್ ಅಭಿಮಾನಿಗಳು ರಿಯಾಕ್ಟ್ ಮಾಡಿದ ರೀತಿ, ಅವಾಚ್ಯ ಶಬ್ಧಗಳ ಬಳಕೆ, ಅಮ್ಮ.. ಅಕ್ಕ.. ತು.. ತು.. ಡ್ಯಾಷ್ ಡಾಷ್ ಭಾಷೆಗಳನ್ನು ಬಳಸಿದ್ದು. ಅದು ಪೊಲೀಸ್ ಠಾಣೆ ಮೆಟ್ಟಿಲೇರಿ 7 ಮಂದಿ ಅರೆಸ್ಟ್ ಆಗಿದ್ದಾರೆ. ನಾಪತ್ತೆಯಾದವರ ಹುಡುಕಾಟ ನಿಂತಿಲ್ಲ.
ಆ ವಿಷಯಕ್ಕೆ ಶ್ರೀದೇವಿ ಭೈರಪ್ಪ ʻʻನಿಮ್ಮ ಮನೆಯಲ್ಲಿ ಇಂತಹುದು ನಡೆಯುತ್ತಿದ್ದಾಗ ಎಲ್ಲಿದ್ಯಪ್ಪ ಎಂದು ಪ್ರಶ್ನೆ ಮಾಡಿ ಶಿವಣ್ಣ ಮತ್ತು ಯುವ ಇಬ್ಬರನ್ನೂ ಪ್ರಶ್ನೆ ಮಾಡಿದ್ದರು. ಸಹಜವೇ ಎನಿಸುವಂತಿದ್ದ ಪ್ರಶ್ನೆಗೆ ಯುವ ಉತ್ತರ ಕೊಟ್ಟಿದ್ದಾರೆ.
“ಮಾಧ್ಯಮಗಳಲ್ಲಿ ಮಹಿಳೆಯನ್ನ ಅವಮಾನಿಸುವುದರ ವಿರುದ್ಧ ಮಾತನಾಡುವುದು ನೋಡುವಾಗ, ತಮ್ಮ ಕುಟುಂಬದಲ್ಲಿಯೇ ಇದೆಲ್ಲಾ ನಡೆಯುವಾಗ ಮಾತನಾಡದೇ ಸುಮ್ಮನೆ ಇದ್ರಲ್ಲ, ಆವಾಗ ನಿದ್ದೆ ಮಾಡ್ತಾ ಇದ್ರ ಎಲ್ಲಾ? #Hypocrites #Drama” ಎಂದೆಲ್ಲ ಟೀಕಿಸಿದ್ದ ಶ್ರೀದೇವಿ ಭೈರಪ್ಪ ಟೀಕೆಗಳಿಗೆ ಯುವ ಕೊಟ್ಟಿರುವ ಉತ್ತರ ಇಷ್ಟೇ.
ಅಂದಹಾಗೆ ಇಬ್ಬರೂ ಡಿವೋರ್ಸಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದು ಪರಸ್ಪರ ಒಪ್ಪಿಗೆಯ ಡಿವೋರ್ಸ್ ಅಲ್ಲ. ಹಾಗಿದ್ದರೆ ಇಷ್ಟು ಹೊತ್ತಿಗೆ ಡಿವೋರ್ಸ್ ಆಗಿರುತ್ತಿತ್ತೇನೋ.. ಆದರೆ.. ಶ್ರೀದೇವಿ ಭೈರಪ್ಪ ನಟಿ ಸಪ್ತಮಿ ಗೌಡ ಮತ್ತು ಯುವ ಮಧ್ಯೆ ಸಂಬಂಧ ಇತ್ತು ಎಂಬ ದೂರನ್ನೂ ಮಾಡಿದ್ದಾರೆ. ಕೌಟುಂಬಿಕ ಹಿಂಸೆಯ ದೂರು ಕೊಟ್ಟಿದ್ದಾರೆ. ಹೀಗಾಗಿ ಪ್ರಕರಣ ಇನ್ನೂ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲೇ ಇದೆ. ಶ್ರೀದೇವಿ ದೂರು ಕೊಟ್ಟ ಬಳಿಕ ಅಮೆರಿಕ ಸೇರಿದ್ದಾರೆ.



