ದೊಡ್ಮನೆ ಅನ್ನೋದು ಒಗ್ಗಟ್ಟಿಗೆ ಮಾಡೆಲ್. ಅಣ್ಣ ತಮ್ಮಂದಿರ ಅನ್ಯೋನ್ಯತೆಗೆ ಮಾದರಿ. ಆದರೆ, ಪರಿಸ್ಥಿತಿ ಬದಲಾಗಿದೆ. ಮೊದಲೂ ಹೀಗೆಯೇ ಇತ್ತೋ.. ಅಥವಾ ಈಗ ಈ ಪರಿಸ್ಥಿತಿ ಉದ್ಭವವಾಗಿದೆಯೋ ಗೊತ್ತಿಲ್ಲ. ಆದರೆ.. ಪುನೀತ್ ನಿಧನದ ನಂತರ ದೊಡ್ಮನೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅಭಿಮಾನಿಗಳಿಗೆ ಶಾಕ್ ನೀಡುತ್ತಿರುವುದಂತೂ ಸತ್ಯ.
ಯುವ ಮತ್ತು ಶ್ರೀದೇವಿ ಭೈರಪ್ಪ ನಡುವಿನ ಸಂಸಾರದ ಜಗಳ ಬೀದಿಗೆ ಬಂದು ಹಾದಿ ಬೀದಿ ರಂಪವಾಗುತ್ತಿದೆ. ದೊಡ್ಮನೆಯಲ್ಲಿ ಇದು ಮೊದಲ ಪ್ರಕರಣ. ಅವರ ಮೇಲೆ ಇವರು.. ಇವರ ಮೇಲೆ ಅವರು ಅಕ್ರಮ ಸಂಬಂಧದಂತಹ ಗಂಭೀರ ಆರೋಪ ಮಾಡುತ್ತಿದ್ದಾರೆ. ಕೋರ್ಟ್ ಮೆಟ್ಟಿಲು ಹತ್ತಿಯೂ ಆಗಿದೆ. ಆದರೆ.. ಈ ಯಾವುದೂ ಕೂಡಾ ದೊಡ್ಡಪ್ಪ ಶಿವಣ್ಣಂಗೆ ಗೊತ್ತಿಲ್ಲ. ಶಿವಣ್ಣಂಗೆ ಗೊತ್ತಾಗಿದ್ದು ಟಿವಿಯಲ್ಲಿ ನ್ಯೂಸ್ ನೋಡಿದ್ಮೇಲೆ ಅಂತೆ.
ಯುವ ಡಿವೋರ್ಸ್ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಹಾಗಾಗಿ, ಮಾಹಿತಿ ಇಲ್ಲದೇ ಮಾತನಾಡೋದು ಸರಿಯಿಲ್ಲ. ಈ ಬಗ್ಗೆ ಮೊಬೈಲ್ನಲ್ಲಿ ನೋಡಿ ತಿಳಿದುಕೊಂಡೆ. ಆ ರೀತಿ ಏನಾದರೂ ಆಗಿದ್ದರೆ ಮನಸ್ಸಿಗೆ ಬೇಜಾರಾಗುತ್ತದೆ ಎಂದಿದ್ದಾರೆ ಶಿವ ರಾಜ್ ಕುಮಾರ್.
ದೊಡ್ಮನೆಯಲ್ಲಿ ಮೊದಲಿನ ರೀತಿಯ ಅನ್ಯೋನ್ಯತೆ ಇಲ್ಲ. ಬಾಂಧವ್ಯವೂ ಇಲ್ಲ ಎನ್ನುವ ಮಾತುಗಳಿಗೆ ಪುಷ್ಠಿ ಕೊಡುವಂತಿದೆ ಈ ಹೇಳಿಕೆ. 2018ರ ಜುಲೈ 5ರಂದು ಮೈಸೂರಿನಲ್ಲಿ ನಿಶ್ಚಿತಾರ್ಥ ಮಾಡಲಾಗಿತ್ತು. 2019ರ ಮೇ 26ರಂದು ಯುವ ರಾಜ್ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ವಿವಾಹ ನೆರವೇರಿತ್ತು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ದೂರಿ ವಿವಾಹ ಸಮಾರಂಭ ನಡೆದಿತ್ತು. ಡಾ. ರಾಜ್ಕುಮಾರ್ ಕುಟುಂಬದಲ್ಲಿ ಇದೇ ಮೊದಲ ಬಾರಿಗೆ ವಿಚ್ಛೇದನ ನಡೆಯುತ್ತಿದೆ. ಆದ್ದರಿಂದ ಅಭಿಮಾನಿಗಳಿಗೆ ಶಾಕ್ ಆಗಿದೆ.
ನಮಗೂ ಈ ವಿಚಾರದ ಬಗ್ಗೆ ಬೇಸರ ಆಗಿದೆ. ಖಂಡಿತಾ ಈ ಬಗ್ಗೆ ಅವರೊಂದಿಗೆ ಮಾತಾಡುತ್ತೇನೆ. ನಮ್ಮಿಂದ ಏನು ಆಗುತ್ತೋ ಅದನ್ನು ಮಾಡುತ್ತೇನೆ. ಎಲ್ಲರಿಗೂ ಖಾಸಗಿ ಜೀವನ ಇರುತ್ತೆ. ಅದು ಅವರ ಲೈಫ್.ಇದು ನಮ್ಮನೆ ವಿಷಯ. ನಾವು ಟಿವಿಯಲ್ಲಿ ನೋಡಿದ ಮೇಲೆಯೇ ನಮಗೂ ಗೊತ್ತಾಗಿದ್ದು. ವಿಷಯ ಗೊತ್ತಿಲ್ಲದೆ ನಾವು ಮಾತಾಡೋದು ಒಳ್ಳೆಯದಲ್ಲ ಎಂದಿದ್ದಾರೆ.
ಪುನೀತ್ ನಿಧನದ ನಂತರ ದೊಡ್ಮನೆಯಲ್ಲಿ ಪರಿಸ್ಥಿತಿ ದಿನೇ ದಿನೇ ಬದಲಾಗುತ್ತಿದೆ. ಅಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವಾದಕ್ಕೆ ಮತ್ತೆ ಮತ್ತೆ ಸಾಕ್ಷಿ ಸಿಗುತ್ತಿವೆ. ರಾಘವೇಂದ್ರ ರಾಜ್ ಕುಮಾರ್ ಮಾತ್ರ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನದಲ್ಲಿದ್ದಾರೆ. ಹಾಗೆ ನೋಡಿದರೆ ಶಿವಣ್ಣ ಕುಟುಂಬದಿಂದ ಒಂದು ಅಂತರ ಕಾಯ್ದುಕೊಳ್ಳುತ್ತಲೇ ಇದ್ದಾರೆ. ಈಗ ನೋಡಿದರೆ.. ಕುಟುಂಬದ ಹಿರಿಯಣ್ಣನಾಗಿ, ತಮ್ಮನ ಮಗನ ಡೈವೋರ್ಸ್ ವಿಷಯ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ. ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ಆಗುತ್ತಿದೆ.



