ಜಸ್ಟಿಸ್ ಫಾರ್ ಸೌಜನ್ಯ ಎಂದು ಶುರುವಾಗಿದ್ದ ಹೋರಾಟ.. ನಂತರ ಹಲವು ರೂಪ ಪಡೆದು, ಧರ್ಮಸ್ಥಳದ ವಿರುದ್ಧ ಸಂಚಿನ ರೂಪವಾಗಿ ಬದಲಾದ ಸುದ್ದಿ ಹೊಸದೇನಲ್ಲ. ಹೂತು ಹಾಕಿದ್ದ ಶವಗಳ ಹುಡುಕಾಟಕ್ಕೆ ಆರಂಭವಾದ ಎಸ್‌ಐಟಿ, ಒಂದು ರಿಪೋರ್ಟ್ ಕೊಟ್ಟಿದೆ. ತನಿಖೆಯನ್ನು ಇನ್ನೂ ಮುಗಿಸಿಲ್ಲ. ಆದರೆ ಇದುವರೆಗೆ ಕೊಟ್ಟಿರುವ ವರದಿಗಳ ಪ್ರಕಾರ ಆರೋಪಗಳಲ್ಲಿ ಯಾವುದೇ ಸತ್ಯ ಇಲ್ಲ ಎಂದು ಗೊತ್ತಾಗಿದೆ. ಈಗ ಅದೇ ಕೇಸಿನಲ್ಲಿ ಯೂಟ್ಯೂಬರ್, ಸಂಚಾರಿ ಸ್ಟುಡಿಯೋದ ಸಂತೋಷ್ ಮರ್ಧಾಳ ಅವನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಗೆ ಕೋರ್ಟ್ 30 ದಿನ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಪದೇಪದೆ ಸಂಚಾರಿ ಸ್ಟುಡಿಯೋ ಯೂ ಟ್ಯೂಬ್ ಮೂಲಕ ಅವಹೇಳನಕಾರಿಯಾಗಿ ವಿಡಿಯೋ ಮಾಡಿ ಪ್ರಸಾರ ಮಾಡಿದ ಪ್ರಕರಣ ಸಂಬಂಧ ನೋಟಿಸ್ ಜಾರಿ ಮಾಡಲಾಗಿತ್ತು. ಮತ್ತೆ ವಿಡಿಯೋ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ 30 ದಿನಗಳ ಕಾಲ ಜೈಲು ಶಿಕ್ಷೆ ಆದೇಶ ಹೊರಡಿಸಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ವಕೀಲರಾದ ರಾಜಶೇಖರ್ ಹಿಲಿಯಾರು ವಾದ ಮಂಡಿಸಿದ್ದರು.
ದಕ್ಷಿಣ ಕನ್ನಡದ ಧರ್ಮಸ್ಥಳ ಪ್ರಕರಣವು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಸೂಕ್ತ ತನಿಖೆ ನಡೆದು, ಕೆಲವು ಆರೋಪಗಳಲ್ಲಿ ಹುರುಳಿಲ್ಲ ಎಂಬುದು ಸಾಬೀತಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಎಸ್‌ಐಟಿ ಕೋರ್ಟ್‌ಗೆ ವರದಿ ಸಹ ಸಲ್ಲಿಸಿತ್ತು. ಮತ್ತೊಂದೆಡೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮತ್ತವರ ಕುಟುಂಬ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡದಂತೆ ಕೋರ್ಟ್‌ನಿಂದ ವರ್ಷಗಳ ಹಿಂದೆಯೇ ಆದೇಶ (ಇಂಜೆಕ್ಷನ್) ನೀಡಲಾಗಿತ್ತು.
ಅರ್ಜಿದಾರರು ಸುಳ್ಳು ಸುದ್ದಿ, ಮಾನಹಾನಿ ವಿಷಯಗಳಿಂದ ರಕ್ಷಣೆ ಪಡೆಯಲು ತಾತ್ಕಾಲಿಕ ತಡೆ ಆದೇಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. 2023ರ ಸೆಪ್ಟೆಂಬರ್ 13ರಂದು ನ್ಯಾಯಾಲಯವು ತಾತ್ಕಾಲಿಕ ತಡೆ ಆದೇಶ ನೀಡಿತ್ತು. ಪ್ರತಿವಾದಿ ಅಥವಾ ಯಾರಾದರೂ ಡಾ. ಡಿ. ವೀರೇಂದ್ರ ಹೆಗ್ಗಡೆ, ಸಂಸ್ಥೆ, ಕುಟುಂಬ ಸದಸ್ಯರು ಅಥವಾ ದೇವಸ್ಥಾನದ ವಿರುದ್ಧ ಸುಳ್ಳು ಆರೋಪ ಮಾಡಬಾರದು, ಮಾನಹಾನಿ ವಿಡಿಯೋಗಳನ್ನು ಪ್ರಕಟಿಸಬಾರದು ಅಥವಾ ಹರಡಬಾರದು ಎಂದು ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಲಾಗಿತ್ತು. ಹೀಗಿದ್ದರೂ ಈ ಸಂತೋಷ್ ಯೂಟ್ಯೂಬ್‌ನಲ್ಲಿ ಒಂದಷ್ಟು ವಿಷಯಗಳನ್ನು ಪ್ರಕಟಿಸುತ್ತಲೇ ಇದ್ದ. ಹೀಗಾಗಿ ಅರ್ಜಿದಾರರು ಮಾನ ಹಾನಿ ಪ್ರಕರಣ ದಾಖಲಿಸಿದ್ದಾರೆ. ಅಂದಹಾಗೆ ಇದು ನ್ಯಾಯಾಂಗ ನಿಂದನೆಯೂ ಆಗಿತ್ತು.
ಅಂದರೆ ನ್ಯಾಯಾಲಯವು ʻಈ ಕೆಲಸ ಮಾಡಬೇಡʼ ಎಂದು ಆದೇಶ ಕೊಟ್ಟ ಮೇಲೆಯೂ ಅದನ್ನು ಮುಂದುವರೆಸಿದ್ದಕ್ಕಾಗಿ ಕಂಟೆಂಪ್ಟ್ ಆಫ್ ಕೋರ್ಟ್ ಪ್ರಕಾರ ಜೈಲಿಗೆ ಕಳಿಸಿದೆ ಕೋರ್ಟ್.
ಕೋರ್ಟ್ ಆದೇಶ ಮೈಕ್ ಇದೆ, ಕ್ಯಾಮೆರಾ ಇದೆ ಎಂದು ಯಾರನ್ನು ಬೇಕಾದರೂ ಟೀಕೆ ಮಾಡುವವರಿಗೆ ಒಂದು ಪಾಠವೂ ಹೌದು. ಎಚ್ಚರಿಕೆಯೂ ಹೌದು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಕಣ್ಣಿಗೆ ಕಂಡವರನ್ನು, ಮನಸ್ಸಿಗೆ ಬಂದವರನ್ನು ಹೊಲಸು ಭಾಷೆಗಳಲ್ಲಿ ಟೀಕೆ ಮಾಡುವುದಲ್ಲ. ಸುಳ್ಳು ಸುದ್ದಿ ಹಬ್ಬಿಸುವುದೂ ಅಲ್ಲ.



