ದರ್ಶನ್ ಜೈಲಿನಲ್ಲಿದ್ದರೆ, ಇತ್ತ ದರ್ಶನ್ ಅಭಿನಯದ ʻದಿ ಡೆವಿಲ್ʼ ರಿಲೀಸ್ ಆಗುತ್ತಿದೆ. ಚಿತ್ರದ ಹೀರೋ ಇಲ್ಲದೆ ದರ್ಶನ್ ಚಿತ್ರದ ಪ್ರಚಾರ ನಡೆಯುತ್ತಿದೆ. ಹಾಗೆ ನೊಡಿದರೆ ದರ್ಶನ್ ಅವರ ಹಿಂದಿನ ಚಿತ್ರದ ಕಾಟೇರ ಚಿತ್ರದಲ್ಲೂ ಅಷ್ಟೇ ದರ್ಶನ್ ಯಾವುದೇ ಟಿವಿ ಚಾನೆಲ್ಲುಗಳಿಗೆ ಸಂದರ್ಶನ ಕೊಟ್ಟಿರಲಿಲ್ಲ. ಕ್ರಾಂತಿ ಚಿತ್ರವನ್ನು ಮೀಡಿಯಾಗಳು ಬಾಯ್ಕಾಟ್ ಮಾಡಿದ್ದವು. ಚಿತ್ರವೂ ಫ್ಲಾಪ್ ಆಗಿತ್ತು. ಆದರೆ.. ಕಾಟೇರ ಚಿತ್ರದ ಹೊತ್ತಿಗೆ ಮೀಡಿಯಾಗಳ ಜೊತೆ ರಾಕ್ ಲೈನ್ ವೆಂಕಟೇಶ್ ಮಧ್ಯಸ್ಥಿಕೆ ವಹಿಸಿದ್ದರು. ಮೀಡಿಯಾಗಳು ಕಾಟೇರ ಚಿತ್ರವನ್ನು ಪ್ರಚಾರ ಮಾಡಿದರೂ.. ದರ್ಶನ್ ಸಂದರ್ಶನ ಮಾಡಿರಲಿಲ್ಲ. ಈಗ ʻದಿ ಡೆವಿಲ್ʼ ರಿಲೀಸ್ ಆಗ್ತಾ ಇದೆ. ಪ್ರಚಾರದ ಅಖಾಡಕ್ಕೆ ಖುದ್ದು ವಿಜಯಲಕ್ಷ್ಮಿಯೇ ಧುಮುಕಿದ್ದಾರೆ.
ದರ್ಶನ್ ಹೊರಗೆ ಇಲ್ಲ. ಬರೋಕೆ ಆಗಲ್ಲ. ಜೈಲಿನಲ್ಲಿದ್ದಾರೆ. ಪ್ರಚಾರ ಮಾಡುವುದಕ್ಕೆ ಆಗಲ್ಲ. ಹೀಗಾಗಿಯೇ ವಿಜಯಲಕ್ಷ್ಮಿ ದರ್ಶನ್ ಪ್ರಚಾರಕ್ಕೆ ಬಂದಿದ್ದಾರೆ. ವಿಜಯಲಕ್ಷ್ಮಿ ಜೊತೆ ಸಹೋದರ ದಿನಕರ್ ತೂಗುದೀಪ, ಸಿನಿಮಾ ನಿರ್ದೇಶಕ ಪ್ರಕಾಶ್ ವೀರ್, ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಸೇರಿದಂತೆ ಚಿತ್ರತಂಡದ ಪ್ರಮುಖರು ಭಾಗಿಯಾಗಿ ಪ್ರಚಾರದ ನೇತೃತ್ವ ವಹಿಸಿದ್ದಾರೆ. ಚಿತ್ರದ ನಾಯಕಿ ರಚನಾ ರೈ.
ʻಅಲೆಹೊಮೊರ..ʼ ಹಾಡು ಬಿಡುಗಡೆ ಮಾಡಿ ಮಾತನಾಡಿದ ವಿಜಯಲಕ್ಷ್ಮಿ ʻʻಡೆವಿಲ್ ಚಿತ್ರದಲ್ಲಿನ ಈ ಹಾಡು ನನಗೆ ವ್ಯೆಯಕ್ತಿಕವಾಗಿ ತುಂಬಾ ಇಷ್ಟವಾದ ಹಾಡು. ದರ್ಶನ್.. ತುಂಬಾ ಇಷ್ಟಪಟ್ಟು ಈ ಚಿತ್ರವನ್ನು ಮಾಡಿದ್ದಾರೆ, ನಿಮ್ಮೆಲ್ಲರ ಬೆಂಬಲ ಬೇಕುʼʼ ಎಂದು ಹೇಳಿರುವ ವಿಜಯಲಕ್ಷ್ಮಿ ದರ್ಶನ್ ಅವರು ಅಭಿಮಾನಿಗಳಿಗೆ ಹೇಳಿದ ಸಂದೇಶವನ್ನೂ ದಾಟಿಸಿದರು. ದರ್ಶನ್ ತಮ್ಮ ಅಭಿಮಾನಿಗಳಿಗೆ ನೀವೆಲ್ಲಾ ಸ್ವಲ್ಪ ಜಾಸ್ತಿ ಪ್ರೀತಿ ತೋರಿಸಬೇಕಂತೆ ಎಂದು ಕೇಳಿಕೊಂಡಿದ್ದಾರಂತೆ. ಮುಂದಿನ ಜವಾಬ್ದಾರಿ ದರ್ಶನ್ ಅವರ ಸೆಲಬ್ರಿಟಿಗಳದ್ದಂತೆ. ಡಿಸೆಂಬರ್ 12ರಂದು ಸಿನಿಮಾ ರಿಲೀಸ್ ಆಗಲಿದೆ.
ನವೆಂಬರ್ 16ರಂದು ಉಲ್ಲಾಳ ಬಳಿಯ ಪಾರ್ಟಿ ಹಾಲ್ ಒಂದರಲ್ಲಿ ದರ್ಶನ್ ಅಭಿಮಾನಿಗಳ ಸಮ್ಮುಖದಲ್ಲಿ ‘ದಿ ಡೆವಿಲ್’ ಸಿನಿಮಾದ ಈವೆಂಟ್ ನಡೆಸಿಕೊಟ್ಟಿದ್ದಾರೆ. ಇದು 100% ಮಾಸ್ ಸಿನಿಮಾ. ನಿಮಗೆಲ್ಲ ಖಂಡಿತಾ ಖುಷಿ ಕೊಡುತ್ತದೆ ಎಂದು ಹೇಳಿದ ಚಿತ್ರದ ನಿರ್ದೇಶಕ ವೀರ್ ಪ್ರಕಾಶ್ ಚಿತ್ರದ ಡೈಲಾಗ್ ಹೇಳಿ ಅಭಿಮಾನಿಗಳನ್ನು ಖುಷಿ ಪಡಿಸಿದರು. ವೀರ್ ಪ್ರಕಾಶ್ ಜೊತೆ ದರ್ಶನ್ ಅವರಿಗೆ ಇದು 2ನೇ ಸಿನಿಮಾ. ಈ ಹಿಂದೆ ತಾರಕ್ ಚಿತ್ರ ನಿರ್ದೇಶಿಸಿದ್ದ ಪ್ರಕಾಶ್ (ಆಗ ಮಿಲನ ಪ್ರಕಾಶ್) ಈ ಬಾರಿ ಆಕ್ಷನ್ ಮಾಸ್ ಸಿನಿಮಾ ಮಾಡಿದ್ದಾರೆ.
ದಿ ಡೆವಿಲ್ ಚಿತ್ರವನ್ನು ಮೀಡಿಯಾಗಳಲ್ಲಿ ಜಾಹೀರಾತು ಕೊಟ್ಟು ಪ್ರಚಾರ ಮಾಡುತ್ತಾರೆಯೇ ಎಂಬ ಬಗ್ಗೆ ಅನುಮಾನಗಳಿವೆ. ಕಾರಣ ಇಷ್ಟೇ, ದರ್ಶನ್ ಆಗಲೀ, ದರ್ಶನ್ ಚಿತ್ರಗಳ ನಿರ್ಮಾಪಕರಾಗಲೀ, ಟಿವಿ ಚಾನೆಲ್ಲುಗಳಾಗಲೀ.. ಎಲ್ಲರೂ ಹಠಕ್ಕೆ ಬಿದ್ದು ವರ್ತಿಸಿದ್ದಾರೆಯೇ ಹೊರತು, ಪಕ್ಕಾ ಪ್ರೊಫೆಷನಲಿಸಂ ಕಾಣಿಸಿಲ್ಲ. ಶುರು ಮಾಡಿದ್ದು ಯಾರೇ ಇರಬಹುದು.. ಇದೆಲ್ಲದರ ಮಧ್ಯೆ ಡೆವಿಲ್ ಚಿತ್ರದ ಭವಿಷ್ಯ ಏನಾಗುತ್ತದೆ.. ಕುತೂಹಲವಂತೂ ಇದೆ.



