ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಎದುರು ಸಂಭವಿಸಿದ ಕಾಲ್ತುಳಿತ 11 ಮಂದಿಯನ್ನು ಬಲಿ ತೆಗೆದುಕೊಂಡಿದೆ. ದೇಶದಲ್ಲೇ ಕ್ರೀಡಾ ವಿಜಯೋತ್ಸವದಲ್ಲಿ ಈ ಮಟ್ಟಿನ ದುರಂತ ಇದೇ ಮೊದಲು. 10 ಸಾವಿರ ಜನರನ್ನು ನಿಭಾಯಿಸುವ ಶಕ್ತಿ ಸಾಮರ್ಥ್ಯವೂ ಇಲ್ಲದ ಪ್ರದೇಶದಲ್ಲಿ ಲಕ್ಷಾಂತರ ಜನ ಸೇರಿದ್ದೇ ದುರ್ಘಟನೆಗೆ ಕಾರಣ. ಇದೀಗ ದುರಂತಕ್ಕೆ ಹೊಣೆಗಾರರು ಎಂದು ರಾಜ್ಯ ಸರ್ಕಾರ ಪೊಲೀಸರನ್ನೇ ಸಸ್ಪೆಂಡ್ ಮಾಡಿದೆ.
ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಕಮಿಷನರ್ ಒಬ್ಬರನ್ನು ಅಮಾನತು ಮಾಡಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಅಡಿಷನಲ್ ಕಮಿಷನರ್(ಪಶ್ಚಿಮ ವಿಭಾಗ) ವಿಕಾಸ್ ಕುಮಾರ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್, ಕಬ್ಬನ್ ಪಾರ್ಕ್ ಎಸಿಪಿ ಬಾಲಕೃಷ್ಣ, ಕಬ್ಬನ್ ಪಾರ್ಕ್ ಇನ್ಸ್ʼಪೆಕ್ಟರ್ ಗಿರೀಶ್ ಹಾಗೂ ಕಬ್ಬನ್ ಪಾರ್ಕ್ ಠಾಣಾ ಸಿಬ್ಬಂದಿ ಸಸ್ಪೆಂಡ್ ಆಗಿದ್ದಾರೆ. ಸರ್ಕಾರದ ಪ್ರಕಾರ ಪೊಲೀಸರ ಅನುಮತಿ ಇಲ್ಲದೇ ಇದ್ದರೂ ಕಾರ್ಯಕ್ರಮ ಆಯೋಜಿಸಿದ್ದವರು, ಪೊಲೀಸರಿಗೆ ಕನಿಷ್ಠ ಮಾಹಿತಿಯನ್ನೂ ನೀಡದೆ ಕಾರ್ಯಕ್ರಮ ರೂಪಿಸಿದ್ದವರು ಹೊಣೆಗಾರರಾಗಿಲ್ಲ. ತಲೆದಂಡ ಕೊಟ್ಟಿರುವುದು ಪೊಲೀಸ್ ಅಧಿಕಾರಿಗಳು. ಪೊಲೀಸ್ ಅಧಿಕಾರಿಗಳ ಪರವಾಗಿ ಯಡಿಯೂರಪ್ಪ, ವಿಜಯೇಂದ್ರ ನಿಂತಿರುವುದು ವಿಶೇಷ.
ಯಡಿಯೂರಪ್ಪ ʻ ಸ್ವತಃ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ಮುಂದೆ ನಿಂತು ವಿಜಯೋತ್ಸವ ಆಚರಣೆಗೆ ಮುಂದಾಗಿ ಬಹುದೊಡ್ಡ ದುರಂತಕ್ಕೆ ಕಾರಣವಾಗಿರುವಾಗ ಐವರು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿರುವುದು ನಾಚಿಕೆಗೇಡಿನ ಸಂಗತಿʼ ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಕನಿಷ್ಠ ನೈತಿಕತೆ ಇದ್ದರೆ ಈ ದುರಂತ ಘಟನೆಯ ಜವಾಬ್ದಾರಿ ಹೊತ್ತು ಈ ಕೂಡಲೇ ರಾಜಿನಾಮೆ ನೀಡಬೇಕು. ತಮ್ಮ ನೈತಿಕ ಜವಾಬ್ದಾರಿ ಮರೆತು, ಜನರ ಆಕ್ರೋಶವನ್ನು ತಣ್ಣಗಾಗಿಸಬಹುದೆಂಬ ದುರಾಲೋಚನೆಯಿಂದ ಪೊಲೀಸ್ ಆಯುಕ್ತರೂ ಸೇರಿ ಐವರು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ ಅಮಾನತು ಮಾಡಿರುವುದು ನಾಚಿಕೆಗೇಡಿನ ಕ್ರಮ ಎಂದು ಟೀಕಿಸಿರುವ ಯಡಿಯೂರಪ್ಪ ದುರಂತ ಸಂಭವಿಸಿದ ನಂತರವೂ ಸನ್ಮಾನಕ್ಕೆ ಹೋಗಿದ್ದು ಅಪರಾಧ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಸಾವು ಗೊತ್ತಾದ ಬಳಿಕವೂ ಸನ್ಮಾನಕ್ಕೆ ಹೋಗಿದ್ದು ಭಂಡತನದ ಪರಮಾವಧಿ ಎಂದಿರುವ ಯಡಿಯೂರಪ್ಪ ಜನರ ಆಕ್ರೋಶವನ್ನು ತಣಿಸಲು ಹಾಗೂ ಉಚ್ಚ ನ್ಯಾಯಾಲಯದ ನ್ಯಾಯದಂಡದಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಕುರ್ಚಿಗೆ ಅಂಟಿ ಕೂರುವ ಸ್ವಾರ್ಥದ ಕ್ರಮ ಎಂದಿದ್ದಾರೆ.
ಇತ್ತ ವಿಜಯೇಂದ್ರ ಕೂಡಾ ʻಪೊಲೀಸರು ಬೇಡ ಎಂದರೂ ಕಾರ್ಯಕ್ರಮ ನಡೆಸಿದ್ದು ಸರ್ಕಾರ. ಈಗ ಬೇಡ ಎಂದು ಹೇಳಿದ್ದ ಪೊಲೀಸರನ್ನೇ ಸಸ್ಪೆಂಡ್ ಮಾಡುವುದು ನಾಚಿಕೆಗೇಡು. ಪೊಲೀಸರು ಹರಕೆಯ ಕುರಿಗಳಾಗಿದ್ದಾರೆʼ ಎಂದು ಟೀಕಿಸಿದ್ದಾರೆ.
ಅಂದಹಾಗೆ ಮೂಲಗಳ ಪ್ರಕಾರ ಡಿಎನ್‌ಎ (ಈ ಸಂಸ್ಥೆಯ ವಿರುದ್ಧವೂ ಎಫ್‌ಐಆರ್ ಆಗಿದೆ) ಎಂಬ ಸಂಸ್ಥೆ ಕಾರ್ಯಕ್ರಮದ ಉಸ್ತುವಾರಿ ಹೊತ್ತುಕೊಂಡಿತ್ತು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡಿತ್ತು. ಆದರೆ ವಿಧಾನಸೌಧದ ಪೊಲೀಸರಿಗೆ ಈ ಡಿಎನ್‌ಎ ಸಂಸ್ಥೆಯವರು ಸ್ಟೇಜ್ ಹಾಕುವುದಕ್ಕೆ ಬರುವವರೆಗೂ ಮಾಹಿತಿ ಇರಲಿಲ್ಲ. ಅಷ್ಟೇ ಏಕೆ, ಡಿಎನ್‌ಎ ಸಂಸ್ಥೆಯವರ ಬಳಿ ಅಧಿಕೃತ ಆದೇಶ ಪತ್ರವೂ ಇರಲಿಲ್ಲ. ಕೇವಲ ಮಾತಿನಲ್ಲಿ ಎಲ್ಲ ಕೆಲಸವೂ ನಡೆದಿದೆ. ವಿಧಾನಸೌಧದ ಪೊಲೀಸರು ಕೇಳಿದಾಗ ಸಿಎಂ ಹಾಗೂ ಡಿಸಿಎಂ ಹೆಸರು ಹೇಳಿದರಂತೆ. ಕಮಿಷನರ್ ದಯಾನಂದ್ ಅವರಿಗೆ ವಿಷಯ ಗೊತ್ತಾದರೂ, ನೇರವಾಗಿ ಸಿಎಂ ಕಚೇರಿಯಿಂದಲೇ ಬಾಯಿ ಮಾತಿನಲ್ಲಿ ಸೂಚನೆ ಬಂದಾಗ ಒಪ್ಪಿಕೊಂಡರಂತೆ. ಈಗ ಆ ಬಾಯಿ ಮಾತಿನ ಸೂಚನೆ ಕೇಳಿದ್ದಕ್ಕೆ, ಅಧಿಕೃತವಾಗಿ ದಾಖಲೆಗಳ ಮೂಲಕ ನಮ್ಮ ಒಪ್ಪಿಗೆ ಇಲ್ಲ ಎಂದು ಹೇಳದೇ ಇರುವುದಕ್ಕೆ ಅವರೇ ತಲೆದಂಡ ಕೊಟ್ಟಿದ್ದಾರೆ.



