ರಾಜ್ಯದಲ್ಲಿ ಎಲೆಕ್ಷನ್ನಿಗೆ ಇನ್ನೂ ಎರಡೂವರೆ ವರ್ಷಕ್ಕೂ ಹೆಚ್ಚು ಸಮಯ ಇದೆ. ಹೀಗಿರುವಾಗಲೇ ವಿಜಯೇಂದ್ರ.. ಈಗಲೇ ಎಲೆಕ್ಷನ್ ನಡೆದರೆ ಬಿಜೆಪಿ 130ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಯಡಿಯೂರಪ್ಪ ದೆಹಲಿಗೆ ಹೊರಟಿದ್ದಾರೆ. ರಾಜಾಹುಲಿಗೆ ದೆಹಲಿಗೆ ಹೊರಟ ಬೆನ್ನಲ್ಲೇ ಮಾತನಾಡಿರುವ ವಿಜಯೇಂದ್ರ, ಮೋದಿ ವಿದೇಶದಿಂದ ವಾಪಸ್ ಆದ ಮೇಲೆ ಕ್ಲಿಯರ್ ಪಿಕ್ಚರ್ ಸಿಗಲಿದೆ ಎಂದಿದ್ದಾರೆ.
ಎನ್‌ಡಿಎ ಸರ್ಕಾರದ 11 ವರ್ಷಗಳ ಆಡಳಿತವನ್ನು ಗುರುತಿಸಲು ನಡೆದ ಬಿಜೆಪಿ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವವರೆಗೆ ತಾನು ವಿಶ್ರಮಿಸುವುದಿಲ್ಲ. ರಾಜ್ಯದಲ್ಲಿ ಈಗಲೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿ 130 ಸ್ಥಾನ ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂದಿದ್ದಾರೆ ವಿಜಯೇಂದ್ರ. ಜೊತೆಗೆ ರಾಜ್ಯಾಧ್ಯಕ್ಷ ಹುದ್ದೆ ಕುರಿತಂತೆ ಮೋದಿ ವಿದೇಶದಿಂದ ಬಂದ ಮೇಲೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದಿದಾರೆ.
ಇತ್ತ ರೆಬಲ್ಸ್ ಗುಂಪಿನಲ್ಲಿಯೇ ಹೆಚ್ಚು ಕಾಣಿಸ್ತಾ ಇದ್ದ ಸಿಟಿ ರವಿ, ಪ್ರತಾಪ್ ಸಿಂಹ ಸೈಲೆಂಟ್ ಆಗಿದ್ದಾರಂತೆ. ಆರ್ ಅಶೋಕ್ ಅವರೂ ಸುಮ್ಮನಾಗಿದ್ದಾರಂತೆ. ಜೊತೆಗೆ ವಿಜಯೇಂದ್ರ ಅವರಿಗೆ ಸಂಸತ್ ಅಧಿವೇಶನಕ್ಕೂ ಮುನ್ನ, ಮೋದಿ ವಿದೇಶದಿಂದ ಬಂದ ಮೇಲೆ ಎಲ್ಲವೂ ಕ್ಲಿಯರ್ ಆಗಲಿದೆ ಎಂಬ ಸಂದೇಶ ಸಿಕ್ಕಿದೆ.
ಹಳೇ ಮೈಸೂರು ಪ್ರದೇಶದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ನೋಡಿಕೊಳ್ಳುವ ಸವಾಲನ್ನು ಸ್ವೀಕರಿಸಿದ್ದೇನೆ ಎಮದಿರುವ ವಿಜಯೇಂದ್ರ, ತಮ್ಮ ಸ್ಥಾನದ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಪಕ್ಷ ಸಂಘಟನೆಗೆ ನಾನು ಕೆಲಸ ಮಾಡಿದ್ದೇನೆ. ನನ್ನ ಹೋರಾಟದ ಬಗ್ಗೆ ಕಾರ್ಯಕರ್ತರು, ಹೈಕಮಾಂಡ್‌ಗೆ ತೃಪ್ತಿಯಿದೆ. ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ನನ್ನನ್ನೇ ಮುಂದುವರಿಸುವ ವಿಶ್ವಾಸ ನನಗಿದೆ ಎನ್ನವುದು ವಿಜಯೇಂದ್ರ ಕಾನ್ಫಿಡೆನ್ಸ್.
ವಿಜಯೇಂದ್ರ ಎಲ್ಲಿಯೇ ಸಿಗಲಿ.. ವಿಜಯೇಂದ್ರ ಅವರಿಗೆ ಮಾಧ್ಯಮದವರು ಕೇಳುವುದು ಒಂದೇ ಪ್ರಶ್ನೆ. ರಾಜ್ಯಾಧ್ಯಕ್ಷ ಹುದ್ದೆ ಘೋಷಣೆ ಯಾವಾಗ ಅನ್ನೋದು. ಅದಕ್ಕೆ ವಿಜಯೇಂದ್ರ ಕೊಟ್ಟಿರುವ ಉತ್ತರ ಮತ್ತು ಪಶ್ನೆ ನನ್ನ ನಗು ಮುಖ ನೋಡಿದರೆ ನಿಮಗೆ ನಾನು ಬದಲಾಗುತ್ತೇನೆ ಎಂದು ಅನ್ನಿಸುತ್ತದಾ? ನಾನು ಬದಲಾಗಬೇಕಾ? ಮುಂದುವರಿಯಬೇಕಾ? ಮಾಧ್ಯಮದವರೇ ಹೇಳಿ ಎಂದು ನಗುತ್ತಲೇ ಪ್ರಶ್ನಿಸಿದ್ದಾರೆ.
ದೆಹಲಿಗೆ ರಾಜಾಹುಲಿ :
ವಿಜಯೇಂದ್ರ ಘೋಷಣೆ ವಿಳಂಬಕ್ಕೆ ಬೇಸರ ಮಾಡಿಕೊಂಡಿರುವ ಬಿಎಸ್ ಯಡಿಯೂರಪ್ಪ, ನೇರ ದೆಹಲಿ ಫ್ಲೈಟ್ ಹತ್ತಿದ್ದಾರೆ. 8 ರಾಜ್ಯಗಳ ಅಧ್ಯಕ್ಷರ ಘೋಷಣೆ ಆಯ್ತು. ಕರ್ನಾಟಕ ಅಧ್ಯಕ್ಷರ ಘೋಷಣೆ ಮಾಡೋಕೆ ಏನ್ ಪ್ರಾಬ್ಲಮ್ಮು ಎಂದು ಸಿಟ್ಟಾಗಿರುವ ಯಡಿಯೂರಪ್ಪ, ಇದೇ ಗೊಂದಲದಲ್ಲಿಟ್ಟರೆ ಪಕ್ಷ ಸಂಘಟನೆ ಮಾಡುವುದು ಹೇಗೆ.. ಯಾರು ಮಾತು ಕೇಳ್ತಾರೆ ಎಂಬ ಪ್ರಶ್ನೆ ಹೊತ್ತುಕೊಂಡೇ ದೆಹಲಿಗೆ ಹೊರಟಿದ್ದಾರೆ.
ಈ ಮಧ್ಯೆ ರೆಬಲ್ಸ್ ಟೀಂನ ಅರವಿಂದ್ ಲಿಂಬಾವಳಿ, ಬಿವಿ ನಾಯಕ್, ಬಿಪಿ ಹರೀಶ್, ಕುಮಾರ್ ಬಂಗಾರಪ್ಪ, ಮಹೇಶ್ ಕುಮುಟಳ್ಳಿ, ರಮೇಶ್ ಪುತ್ರ ಅಮರನಾಥ್ ಮೊದಲಾದವರು ರಮೇಶ್ ಜಾರಕಿಹೊಳಿ ಸಹೋದರ ಲಖನ್ ಮನೆಯಲ್ಲಿ ಸೇರಿದ್ದಾರೆ. ಅಲ್ಲಿಂದ ಕೊಲ್ಹಾಪುರ ಲಕ್ಷ್ಮೀ ದೇವಿ ದರ್ಶನ ಮಾಡಿದ್ದಾರೆ.
ಮೂಲಗಳ ಪ್ರಕಾರ ಜುಲೈ 13/14ರಂದು ರೆಬಲ್ಸ್ ಮೀಟಿಂಗ್ ನಡೆಯಲಿದೆ. ಈ ವೇಳೆ ಮಾಜಿ ಶಾಸಕ ಅರವಿಂದ್ ಲಿಂಬಾವಳಿ, ನೀವು ನಮ್ಮ ಟೀಂ ಗೆ ಬರ್ತೀರಿ ಎಂದು ಹೇಳಿ ರಮೇಶ್ ಜಾರಕಿಹೊಳಿ ನಮ್ಮನ್ನು ಕರೆದುಕೊಂಡು ಬಂದಿದ್ದಾರೆ ಎಂದಿದ್ದಾರೆ. ಇದಕ್ಕೆ ಲಖನ್ ಜಾರಕಿಹೊಳಿ, ನಾವು ನಿಮ್ಮ ಟೀಂ ನಲ್ಲಿ ಇದ್ದಂಗೆ ಎಂದು ಭರವಸೆ ನೀಡಿದ್ದಾರೆ. ಅಂದ ಹಾಗೆ.. ಈ ಟೀಂನಲ್ಲಿ ಅರವಿಂದ ಲಿಂಬಾವಳಿ ಕಾಣಿಸಿಕೊಂಡಿರಲಿಲ್ಲ. ಈಗ ಲಿಂಬಾವಳಿಯೂ ಸೇರಿದ್ದಾರೆ.



