ರಾಜ್ಯ ಸರ್ಕಾರದ ಅಕ್ಕಿ ಭಾಗ್ಯ ಜುಲೈನಲ್ಲೋ.. ಆಗಸ್ಟ್`ನಲ್ಲೋ ಖಚಿತ ಇಲ್ಲ. ಸರ್ಕಾರಕ್ಕೇ ಯಾವಾಗಿಂದ ಜಾರಿಯಾಗಲಿದೆ ಎಂಬ ಗ್ಯಾರಂಟಿ ಇಲ್ಲ. ಗೃಹಜ್ಯೋತಿ ಕುಂಟುತ್ತಲೇ ಇದೆ. ಗೃಹಲಕ್ಷ್ಮಿ ಯಾವಾಗ ಆರಂಭ ಎನ್ನುವುದು ಸರ್ಕಾರಕ್ಕೂ ಗೊತ್ತಿಲ್ಲ. ಇತ್ತ ಬಿಜೆಪಿಯಲ್ಲಿ ವಿರೋಧಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆಯೇ ಶುರುವಾಗಿಲ್ಲ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗದೆ ಏನು ಮಾಡುವುದು.. ಹೇಗೆ ಮಾಡುವುದು ಎಂಬ ಬಗ್ಗೆ ಬಿಜೆಪಿಯಲ್ಲೂ ಖಚಿತತೆ ಇಲ್ಲ. ಈ ನಡುವೆಯೇ ಯಡಿಯೂರಪ್ಪ ಮತ್ತೊಮ್ಮೆ ಅಖಾಡಕ್ಕೆ ಧುಮುಕಿದ್ದಾರೆ.
ರಾಜ್ಯ ಸರ್ಕಾರ ತಾನು ನೀಡಿರುವ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜುಲೈ 4ರೊಳಗೆ ಈಡೇರಿಸಬೆಕು. ಇಲ್ಲದಿದ್ದರೆ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ ಯಡಿಯೂರಪ್ಪ. ಬೇಡಿಕೆ ಈಡೇರಿಸಲೇಬೇಕು. ಇಲ್ಲದಿದ್ದರೆ ಜು.4ರಂದು ರಾಜ್ಯಪಾಲರ ಭಾಷಣ ಮುಗಿದ ನಂತರ ವಿಧಾನಸಭೆ ಅಧಿವೇಶನ ಮುಗಿಯುವವರೆಗೂ ವಿಧಾನಸೌಧ ಆವರಣದ ಗಾಂಧಿ ಪುತ್ಥಳಿ ಬಳಿ ಧರಣಿ ನಡೆಯುವುದಾಗಿ ಯಡಿಯೂರಪ್ಪ ಗುಡುಗಿದ್ದಾರೆ.
ಸದನದ ಹೊರಗೆ ಗಾಂಧಿ ಪುತ್ಥಳಿ ಬಳಿ ನಾನೂ ಸೇರಿ ಬಿಜೆಪಿ ಪರಾಜಿತ ಅಭ್ಯರ್ಥಿಗಳು, ಮಾಜಿ ಶಾಸಕರು ಧರಣಿ ನಡೆಸುತ್ತೇವೆ. ವಿಧಾನಸೌಧದ ಒಳಗೆ, ಹೊರಗೆ ನಮ್ಮ ಹೋರಾಟ ನಿಶ್ಚಿತ. ಅಧಿವೇಶನದಲ್ಲಿ ಬಿಜೆಪಿ ಶಾಸಕರು ಗ್ಯಾರಂಟಿ ಯೋಜನೆಗಳ ಜಾರಿಗೆ ಒತ್ತಾಯಿಸಿ ಹೋರಾಟ ನಡೆಸಿದರೆ, ನಾವು ಮಾಜಿಗಳೆಲ್ಲ ಸದನದ ಹೊರಗೆ ಹೋರಾಟ ನಡೆಸಲಿದ್ದೇವೆ ಎಂದು ಘೋಷಿಸಿದ್ದಾರೆ ಯಡಿಯೂರಪ್ಪ.
ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ಹಾಗೂ ಪದವೀಧರರಿಗೆ .3 ಸಾವಿರ, ಡಿಪ್ಲೋಮಾ ಪದವೀಧರರಿಗೆ ವಿದ್ಯಾನಿಧಿ ನೀಡುವುದಾಗಿ ಸ್ವತಃ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಹಿ ಮಾಡಿ, ಗ್ಯಾರಂಟಿ ಕಾರ್ಡ್ಗಳನ್ನು ರಾಜ್ಯದಲ್ಲಿ ಹಂಚಿ ಆಶ್ವಾಸನೆ ನೀಡಿದ್ದರು. ಮನೆ ಮನೆಗೆ ಹೋಗಿ ಗ್ಯಾರಂಟಿ ಕಾರ್ಡ್ ನೀಡಿದ್ದರು. ಈ ಪೈಕಿ ಶಕ್ತಿ ಯೋಜನೆ ಮಾತ್ರ ಜಾರಿಗೊಳಿಸಿದ್ದು, ಅದಕ್ಕೂ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಗ್ಯಾರಂಟಿ ಯೋಜನೆಗಳನ್ನು ಯಾವುದೇ ಷರತ್ತಿಲ್ಲದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ಧಾರೆ.



