2006-07ರಲ್ಲಿಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರಕಾರ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದಿತ್ತು. ಬಡ ಕುಟುಂಬಗಳಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳಿಗೆ ಸರಕಾರವು ನಿಶ್ಚಿತ ಠೇವಣಿ ಹೂಡಿ, ಈ ಮಗುವಿಗೆ ಹದಿನೆಂಟು ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ ಪರಿಪಕ್ವ ಹಣ ನೀಡುವ ಸದುದ್ದೇಶದಿಂದ ಆರಂಭಗೊಂಡಿದ್ದ ಯೋಜನೆ ಇದಾಗಿದೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಷ್ಟೇ ಅಲ್ಲ, ಆ ಯೋಜನೆಯಲ್ಲಿ ಕೆಲವು ಷರತ್ತುಗಳಿದ್ದವು.
ಯೋಜನೆಯ ಲಾಭ ಪಡೆಯಬೇಕು ಎಂದರೆ, ಹೆಣ್ಣು ಮಗುವಿಗೆ 18 ವರ್ಷ ಆಗಿರಬೇಕು. ಮದುವೆ ಆಗಿರಬಾರದು. ಅಷ್ಟೇ ಅಲ್ಲ, ಕನಿಷ್ಠ ಎಸ್.ಎಸ್.ಎಲ್.ಸಿ. ಓದಿರಬೇಕು. ಈ ಯೋಜನೆಯನ್ನು ವಿರೋಧಿಗಳು ಕೂಡಾ ಮೆಚ್ಚಿಕೊಂಡಿದ್ದರು. ಏಕೆಂದರೆ, ಈ ಯೋಜನೆ ಹೆಣ್ಣು ಭ್ರೂಣ ಹತ್ಯೆಯನ್ನಷ್ಟೇ ತಡೆಯುತ್ತಿರಲಿಲ್ಲ, ಬದಲಿಗೆ ಬಾಲ್ಯ ವಿವಾಹದ ನಿಯಂತ್ರಣ ಹಾಗೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೂ ಪೂರಕವಾಗಿತ್ತು. ಅಷ್ಟೇ ಅಲ್ಲ, ಒಂದು ಬಡ ಕುಟುಂಬದ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಯೋಜನೆ ಅನ್ವಯವಾಗುತ್ತಿತ್ತು. ಈ ಮೂಲಕ ಕುಟುಂಬ ನಿಯಂತ್ರಣವೂ ಸಾಧಿಸುವ ಯೋಜನೆಯಾಗಿತ್ತು. ಈ ಯೋಜನೆಗೆ ಬಡವರಾಗಿರಬೇಕು ಎಂಬುದು ಬಿಟ್ಟರೆ, ಜಾತಿ, ಧರ್ಮದಂತಹ ಯಾವ ನಿರ್ಬಂಧಗಳೂ ಇರಲಿಲ್ಲ. ಈ ಯೋಜನೆಗೀಗ 18 ವರ್ಷ ತುಂಬಿದೆ.
‘ಭಾಗ್ಯಲಕ್ಷ್ಮೀ ಯೋಜನೆ’ಯು ಆರಂಭದಲ್ಲಿ ಜೀವವಿಮಾ ನಿಗಮದಲ್ಲಿತ್ತು. ಇದೀಗ ಯೋಜನೆಯು ಅಂಚೆ ಇಲಾಖೆಯ ವ್ಯಾಪ್ತಿಯಲ್ಲಿದೆ. ಅಂಚೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ‘ಭಾಗ್ಯಲಕ್ಷ್ಮೀ ಸುಕನ್ಯಾ ಯೋಜನೆ’ ಎಂದು ಹೆಸರು ಕೂಡ ಬದಲಿಸಲಾಗಿದೆ. ಕೇಂದ್ರ ಸರಕಾರದ ಸುಕನ್ಯಾ ಸಮೃದ್ಧಿ ಯೋಜನೆಯನ್ನೂ ಅಂಚೆ ಇಲಾಖೆಯೇ ನಿರ್ವಹಿಸುತ್ತಿರುವುದಿಂದ ಭಾಗ್ಯಲಕ್ಷ್ಮಿಯನ್ನು ಅಂಚೆ ಇಲಾಖೆಗೆ ವಹಿಸಿ ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ಸೇರಿಸಲಾಯಿತು.
ಅರ್ಹ ಫಲಾನುಭವಿಗಳ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. ಎಲ್ಲಾ ತಾಲೂಕುಗಳ ಸಿಡಿಪಿಒಗಳ ಮೂಲಕ ಅರ್ಹರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲು ಇಲಾಖೆ ಸೂಚಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳ ಅಂತ್ಯಕ್ಕೆ ಈ ಬಾಲಕಿಯರು ಯೋಜನೆಯ ಮೆಚ್ಯೂರಿಟಿಗೆ ಅರ್ಹರಾಗಿದ್ದಾರೆ. ಹೀಗಾಗಿ, ಇವರೆಲ್ಲರಿಗೂ ಆದ್ಯತೆ ಮೇರೆಗೆ ಶೀಘ್ರದಲ್ಲೇ ಹಣ ತಮ್ಮ ಖಾತೆಗಳಿಗೆ ಜಮೆ ಮಾಡಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ.
ಈ ಯೋಜನೆಯ ಹಣ ಪಡೆಯುವವರು ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಹೊಂದಿರಬೇಕು. ಶಾಶ್ವತ ಕುಟುಂಬ ಯೋಜನೆ ಅಳವಡಿಸಿಕೊಂಡಿರಬೇಕು. ಮೂರು ಮಕ್ಕಳ ಮಿತಿಯನ್ನು ದಾಟಿರಬಾರದು. ಫಲಾನುಭವಿ ಮಗು ಕಡ್ಡಾಯವಾಗಿ 8ನೇ ತರಗತಿ ವಿದ್ಯಾಭ್ಯಾಸ ಮಾಡಿದ ದೃಢೀಕರಣ, ಬಾಲ ಕಾರ್ಮಿಕ, ಬಾಲ್ಯ ವಿವಾಹಕ್ಕೆ ಒಳಗಾಗಿರಬಾರದು ಎನ್ನುವ ನಿಯಮಕ್ಕೆ ಬದ್ಧರಾಗಿರುವ ಹೆಣ್ಣು ಮಕ್ಕಳಿಗೆ ಮಾತ್ರ ಈ ಹಣ ದೊರೆಯಲಿದೆ.
ಫಲಾನುಭವಿಗಳು ಏನೇನು ದಾಖಲೆ ನೀಡಬೇಕು..?
ಫಲಾನುಭವಿಗಳ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಸಂಖ್ಯೆ, ಐಎಸ್‌ಎಫ್‌ಸಿ ಕೋಡ್, ಆಧಾರ್ ಕಾರ್ಡ್ ಸಂಖ್ಯೆ ನೀಡಭೆಕು.
ಯೋಜನೆಯ ಒರಿಜಿನಲ್ ಬಾಂಡ್, ಮಗುವಿನ ಜನನ ಪ್ರಮಾಣ ಪತ್ರ, ತಂದೆ, ತಾಯಿ, ಮಗುವಿನ ಹೆಸರು ಬದಲಾವಣೆಯಾಗಿದ್ದರೆ ಸಂಬಂಧಿಸಿದ ಸಿಡಿಪಿಒ ಅವರಿಂದ ದೃಢೀಕರಣ ಪತ್ರ ಮಾಡಿಸಿ ಒದಗಿಸಬೇಕು.
ಬಾಂಡ್ ಕಳೆದಿದ್ದರೆ ಬಾಂಡ್ ನಕಲು ಪ್ರತಿ ಜತೆ ಎಫ್‌ಐಆರ್ ಪ್ರತಿ ನೀಡಬಹುದು.
ದತ್ತು ಮಕ್ಕಳಾಗಿದ್ದರೆ ಕಾನೂನಾತ್ಮಕವಾಗಿ ದತ್ತು ಪಡೆದ ಪೋಷಕರ ಹೆಸರನ್ನು ಸಿಡಿಪಿಒ ದೃಢೀಕರಿಸಬೇಕು.
ಭಾಗ್ಯಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳಿಂದ ಈಗಾಗಲೇ ಅರ್ಜಿ ಪಡೆದು ಅಗತ್ಯ ದಾಖಲೆಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಅರ್ಜಿದಾರ ಮಗುವಿನ ಜನ್ಮ ದಿನಾಂಕದಿಂದ ಹದಿನೆಂಟು ವರ್ಷ ಮೀರಿದ ಹೆಣ್ಣು ಮಕ್ಕಳಿಗೆ ಈ ಪರಿಪಕ್ವ ಹಣ ನೀಡಲಾಗುತ್ತದೆ.
ರಾಜ್ಯದಲ್ಲಿ ಆರಂಭದಿಂದ ಈವರೆಗೆ ಸುಮಾರು 34.50 ಲಕ್ಷ ಮಂದಿ ಭಾಗ್ಯಲಕ್ಷ್ಮಿ ಬಾಂಡ್ ಪಡೆದಿದ್ದಾರೆ. ಈ ಪೈಕಿ ‘ಭಾಗ್ಯಲಕ್ಷ್ಮಿ ಸುಕನ್ಯಾ’ ಹೆಸರಿನಲ್ಲಿ 4.30 ಲಕ್ಷ ಮಂದಿ ಬಾಂಡ್ ಪಡೆದಿದ್ದಾರೆ. ಯೋಜನೆಯ ಆರಂಭಿಕ ವರ್ಷದಲ್ಲಿ ನೋಂದಣಿಯಾದವರು ಸುಮಾರು 30 ಲಕ್ಷ ಇದ್ದಾರೆ. ಭಾಗ್ಯಲಕ್ಷ್ಮೀ ಬಾಂಡ್ ಪಡೆದು 18 ವರ್ಷ ಪೂರೈಸಿದ ಹೆಣ್ಣು ಮಕ್ಕಳಿಗೆ ಷರತ್ತುಗಳನ್ವಯ ಮೆಚ್ಯುರಿಟಿ ಹಣವನ್ನು ಖಾತೆಗೆ ವರ್ಗಾಯಿಸಲಾಗುವುದು.
ಯಡಿಯೂರಪ್ಪ ಮೊದಲ ಬಾರಿಗೆ ಸಿಎಂ ಆಗಿದ್ದ ಅವಧಿಯಲ್ಲಿ ಮಾಡಿದ ಯೋಜನೆಯ ಲಾಭ ಈಗ ಜನರಿಗೆ ಸಿಗುತ್ತಿದೆ. ವಿಶೇಷ ಎಂದರೆ, ಈ ೧೮ ವರ್ಷಗಳಲ್ಲಿ ರಾಜಕೀಯ ಕಾಲಚಕ್ರ ಸುತ್ತು ತಿರುಗಿದೆ. ಆದರೆ ಈ ಯೋಜನೆ ಎಷ್ಟು ಪರಿಣಾಮಕಾರಿ ಆಯಿತೆಂದರೆ, ಅದಾದ ಮೇಲೆ ಮೋದಿ ಪ್ರಧಾನಿಯಾಗಿ ಬಂದಾಗ, ಇದೇ ಯೋಜನೆಯನ್ನು ರಾಷ್ಟ್ರಮಟ್ಟದಲ್ಲಿ ಸುಕನ್ಯಾ ಯೋಜನೆ ಎಂಬ ಹೆಸರಲ್ಲಿ ಜಾರಿಗೆ ತಂದರು. ಭಾಗ್ಯಲಕ್ಷ್ಮಿ ಯೋಜನೆಯೂ ಈಗ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲೇ ಇದೆ.



