ಇದು ಅಚ್ಚರಿ ಎನಿಸಿದರೂ ಸತ್ಯ ಎನ್ನುತ್ತಿವೆ ರಾಜಕೀಯ ಮೂಲಗಳು. ಏಕೆಂದರೆ ಚನ್ನಪಟ್ಟಣ ಟಿಕೆಟ್ ಕೊನೆಯ ಹಂತದವರೆಗೂ ಯಾರಿಗೆ ಎಂಬ ಕುತೂಹಲ ಉಳಿಸಿಕೊಂಡಿತ್ತು. ಈ ಹಂತದಲ್ಲಿ ಯಡಿಯೂರಪ್ಪನವರೇ ನಿಖಿಲ್ ಹೆಸರು ಫೈನಲ್ ಮಾಡಿ ಎಂದು ಖುದ್ದು ಕುಮಾರಸ್ವಾಮಿಗೆ ಹೇಳಿದರು ಎನ್ನಲಾಗುತ್ತಿದೆ. ಇಷ್ಟಕ್ಕೂ ಆಗಿದ್ದೇನೆಂದರೆ..
ಒಂದು ಹಂತದಲ್ಲಿ ಸಿಪಿ ಯೋಗೇಶ್ವರ್ ಅವರಿಗೆ ಜೆಡಿಎಸ್ ಟಿಕೆಟ್ ಕೊಡುವುದಕ್ಕೆ ಒಪ್ಪಿದ್ದ ಕುಮಾರಸ್ವಾಮಿ, ಅದಕ್ಕೆ ಸಿಪಿವೈ ಒಪ್ಪದೇ ಇದ್ದಾಗ ಇನ್ನೂ ಒಂದು ನಿರ್ಧಾರಕ್ಕೆ ಬಂದಿದ್ದರು. ಏನೆಂದರೆ ಬಿಜೆಪಿಗೇ ಟಿಕೆಟ್ ಕೊಟ್ಟು, ಜೆಡಿಎಸ್ ಬೆಂಬಲಿಸುವುದು. ಆದರೆ ಕುಮಾರಸ್ವಾಮಿ ಈ ನಿರ್ಧಾರಕ್ಕೆ ಬರುವ ಹೊತ್ತಿಗೆ ಅತ್ತ ಸಿಪಿ ಯೋಗೇಶ್ವರ್ ಕಾಂಗ್ರೆಸ್ಸಿನವರಿಗೆ ಎಸ್ ಎಂದು ಆಗಿತ್ತು. ಆಗ ಮಧ್ಯಪ್ರವೇಶಿಸಿದವರು ಯಡಿಯೂರಪ್ಪ.
ಕುಮಾರಸ್ವಾಮಿ ಅವರಿಗೆ ಮೋದಿ ಮತ್ತು ಅಮಿತ್ ಶಾ ಮೇಲೆ ವಿಶ್ವಾಸವಿತ್ತು. ಏನೇ ಆಗಲಿ, ಇವರು ನಮ್ಮ ಜೊತೆ ಇರುತ್ತಾರೆ ಎಂದುಕೊಂಡು ಮುಂದಡಿ ಇಟ್ಟರೆ, ಸಿಪಿ ಯೋಗೇಶ್ವರ್ ಉಲ್ಟಾ ಹೊಡೆದುಬಿಟ್ಟಿದ್ದರು. ಆಗ ಖುದ್ದು ಯಡಿಯೂರಪ್ಪನವರೇ ಕುಮಾರಸ್ವಾಮಿ ಅವರಿಗೆ ನಿಖಿಲ್ ಅವರಿಗೆ ಟಿಕೆಟ್ ಕೊಡಿ ಎಂದು ಸಲಹೆ ಕೊಟ್ಟರಂತೆ.
ಎನ್.ಡಿ.ಎ. ಅಭ್ಯರ್ಥಿಯಾಗಿ ನಿಖಿಲ್ ಅವರನ್ನು ಕಣಕ್ಕೆ ಇಳಿಸಿ. ಗೆಲ್ಲಿಸಿಕೊಂಡು ಬರೋಣ ಎಂದರಂತೆ. ಯಾವಾಗ ಯಡಿಯೂರಪ್ಪನವರೇ ಈ ವಿಷಯ ಖುದ್ದಾಗಿ ತಿಳಿಸಿದರೋ, ಆಗ ಕುಮಾರಸ್ವಾಮಿ ಕೂಡಾ ಭರವಸೆ ತಂದುಕೊಂಡು ನಿಖಿಲ್ ಅವರಿಗೇ ಟಿಕೆಟ್ ಫೈನಲ್ ಮಾಡಿದರು ಎನ್ನುತ್ತಿದೆ ಈಗ ಬಂದಿರೋ ಸುದ್ದಿ. ಹೀಗಾಗಿ ವಿಜಯೇಂದ್ರ, ಯಡಿಯೂರಪ್ಪ ಕೂಡಾ ಫುಲ್ ಫೋರ್ಸಿನೊಂದಿಗೆ ಅಖಾಡಕ್ಕೆ ಇಳಿದಿದ್ದಾರಂತೆ.
ಚನ್ನಪಟ್ಟಣದಲ್ಲಿ ಕಣ್ಣೀರಿನದ್ದೇ ಚರ್ಚೆ :
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಕುಟುಂಬಕ್ಕೆ ಸಾರ್ವಜನಿಕವಾಗಿ ಕಣ್ಣೀರು ಹಾಕದೆ ಯಾವ ಚುನಾವಣೆಯೂ ಪೂರ್ಣಗೊಳ್ಳುವುದಿಲ್ಲ. ಇವತ್ತು ಚನ್ನಪಟ್ಟಣದಲ್ಲಿ ಪ್ರಚಾರ ಮುಂದುವರಿಸಿದ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಾನು ಯಾವ ತಪ್ಪು ಮಾಡಿದ್ದೀನೋ ಗೊತ್ತ್ತಿಲ್ಲ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನಾಗಿ ಮತ್ತು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೆಚ್ಡಿ ಕುಮಾರಸ್ವಾಮಿಯವರ ಮಗನಾಗಿ ಹುಟ್ಟಿದ್ದು ತಪ್ಪೇ ಎಂದು ಕಣ್ಣೀರಿಟ್ಟಿದ್ದಾರೆ.
ಯಾವುದೇ ಅಭ್ಯರ್ಥಿ ಕಣ್ಣೀರು ಹಾಕಿ ಮತದಾರರ ಮನಸ್ಸು ಗೆಲ್ಲಲು ಆಗಲ್ಲ. ಅವರ ತಂದೆ ಮಾಡಿದ ಅವ್ಯವಸ್ಥೆಗೆ ಸಾವಿರಾರು ಜನ ಕಣ್ಣೀರಾಕುತ್ತಿದ್ದಾರೆ. ಕಣ್ಣೀರಿಡುವುದು ಒಬ್ಬ ನಾಯಕನ ಗುಣವಲ್ಲ ಎಂದು ಯೋಗೇಶ್ವರ್ ಆರ್ಭಟಿಸುತ್ತಿದ್ದರೆ, ‘ಕಟುಕರಿಗೆ ಕಣ್ಣೀರು ಬರುವುದಿಲ್ಲ’ ಎನ್ನುವುದು ಕುಮಾರಸ್ವಾಮಿ ತಿರುಗೇಟು. ಇದು ಜೆಡಿಎಸ್ ನಾಯಕರ ಟೆಕ್ನಿಕ್. ಇಂತಹ ನಾಟಕಕ್ಕೆ ಬಲಿಯಾಗಬೇಡಿ ಅನ್ನೋದು. ಕುಮಾರಸ್ವಾಮಿ ಮತ್ತು ಅವರ ಕುಟುಂಬದವರಿಗೆ ಕಣ್ಣೀರು ಬರುವುದು ಚುನಾವಣೆ ಇದ್ದಾಗ ಮಾತ್ರ. ಚನ್ನಪಟ್ಟಣದ ಜನರು ಕಣ್ಣೀರು ಹಾಕಿದಾಗ ಅವರು ಎಲ್ಲಿಗೆ ಹೋಗಿದ್ದರು ಎಂದು ಕೌಂಟರ್ ಕೊಟ್ಟಿರೋದು ಡಿಕೆ ಸೋದರರು. ಒಟ್ಟಿನಲ್ಲಿ ಕಣ್ಣೀರಿನ ಯುದ್ಧವೇ ನಡೆಯುತ್ತಿದೆ.



