ರಾಜ್ಯದಲ್ಲಿ ಕುಮಾರಸ್ವಾಮಿ ಮೊದಲ ಬಾರಿಗೆ ಸಿಎಂ ಆಗಿದ್ದು ಯಡಿಯೂರಪ್ಪ ಅವರ ಬಿಜೆಪಿ ಜೊತೆ ಸೇರಿದಾಗ. 2006ರ ಫೆಬ್ರವರಿ ೩ನೇ ತಾರೀಕು ಬಿಎಸ್‌ವೈ ಡಿಸಿಎಂ ಆದರೆ, ಅದೇ ದಿನ ಕುಮಾರಸ್ವಾಮಿ ಮೊದಲ ಬಾರಿಗೆ ಕರ್ನಾಟಕ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಒಪ್ಪಂದದ ಪ್ರಕಾರ 20 ತಿಂಗಳು ಕಳೆದ ನಂತರ ಯಡಿಯೂರಪ್ಪ ಅವರಿಗೆ ಸಿಎಂ ಪಟ್ಟ ಬಿಟ್ಟುಕೊಡಬೇಕಿದ್ದ ಕುಮಾರಸ್ವಾಮಿ, ಮಾತಿಗೆ ತಪ್ಪಿದರು. ಕೊನೆಗೆ ಏನೇನೋ ಹಠಮಾರಿತನ, ಮಾತುಕತೆ ಆಗಿ ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯೂ ಆದರು.
2007 ನವೆಂಬರ್ 12ರಿಂದ, ನವೆಂಬರ್ 19ನೇ ತಾರೀಕಿನವರೆಗೆ ಕೇವಲ 7 ದಿನದ ಮುಖ್ಯಮಂತ್ರಿಯಾದರು. ಕೇವಲ 7 ದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಸರಿಯಾಗಿ ಸಿಎಂ ಕಚೇರಿಯನ್ನು ಕೂಡಾ ನೋಡಿರಲಿಲ್ವೇನೋ.. ಅಷ್ಟರೊಳಗೆ ಕುಮಾರಸ್ವಾಮಿ, ಯಡಿಯೂರಪ್ಪನವರಿಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿದ್ದರು. ಅನಿವಾರ್ಯವಾಗಿ ಸಿಎಂ ಪಟ್ಟಕ್ಕೆ ರಾಜೀನಾಮೆ ಕೊಟ್ಟಿದ್ದ ಯಡಿಯೂರಪ್ಪ, ಅದಾದ ವಚನ ಭ್ರಷ್ಟತೆಯನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಹೋರಾಟ ಮಾಡಿ, ಚುನಾವಣೆ ಗೆದ್ದು ಸಿಎಂ ಆಗಿದ್ದು ಇತಿಹಾಸ.
ಆದರೆ ಹೀಗೆ 7 ದಿನದ ಸಿಎಂ ಆಗುವುದಕ್ಕೆ ಕಾರಣ, ಕೆಳಗಿಳಿಯಲು ಕಾರಣ ಹೆಚ್ ಡಿ ರೇವಣ್ಣ ಎಂದು ಹೇಳಿದ್ದಾರೆ ಜಿಟಿ ದೇವೇಗೌಡ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದೇ ಎಚ್.ಡಿ.ರೇವಣ್ಣ. ಈ ಹಿಂದೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ 20-20 ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಬೇಕಿತ್ತು. ರೇವಣ್ಣ ತಾನು ಉಪಮುಖ್ಯಮಂತ್ರಿ ಆಗಬೇಕು ಅಂದುಕೊಂಡಿದ್ದರು. ಅವರ ಆಸೆ ಈಡೇರದ ಕಾರಣ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜೊತೆ ಮಾತನಾಡಿ ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನ ತಪ್ಪಿಸಿದರು. ಈ ಬಗ್ಗೆ ರೇವಣ್ಣ ಒಪ್ಪಿಕೊಂಡು ಕ್ಷಮೆ ಸಹ ಯಾಚಿಸಿದ್ದಾರೆ ಎಂದಿದ್ದಾರೆ ಜಿಟಿ ದೇವೇಗೌಡ.
ಎಚ್.ಡಿ.ಕುಮಾರಸ್ವಾಮಿ ಇಲ್ಲದಿದ್ದರೆ ಜಿ.ಟಿ.ದೇವೇಗೌಡ ಅವರು ತಮ್ಮ ಮಗನೊಂದಿಗೆ ಜೈಲಿನಲ್ಲಿ ಇರಬೇಕಿತ್ತು ಎಂಬ ರೇವಣ್ಣ ಹೇಳಿಕೆಗೆ ಪ್ರತಿಕ್ರಿಸಿರುವು ಜಿಟಿ ದೇವೇಗೌಡ 20-20 ಸರ್ಕಾರದ ಒಂದು ಗುಟ್ಟು ಬಿಚ್ಚಿಟ್ಟಿದ್ದಾರೆ. ತೀರಾ ಮೊನ್ನೆ ಮೊನ್ನೆವರೆಗೆ ಜೆಡಿಎಸ್-ಬಿಜೆಪಿ ಮೈತ್ರಿಯಾಗುವವರೆಗೂ ಕೂಡಾ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಶತ್ರುಗಳಂತೆಯೇ ಇದ್ದರು. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಇದೆಲ್ಲದಕ್ಕೂ ಮೂಲ ಕಾರಣವೇ 20-20 ಸರ್ಕಾರದಲ್ಲಿ ಮಾತು ತಪ್ಪಿದ್ದ ಕುಮಾರಸ್ವಾಮಿ. ಆದರೆ ಇದರ ಹಿಂದೆ ಹೆಚ್ ಡಿ ರೇವಣ್ಣ ಅವರಿದ್ದರು ಎಂಬುದು ಈಗ ಜಿಟಿ ದೇವೇಗೌಡರೇ ಹೇಳುವ ಮೂಲಕ ಗೊತ್ತಾಗಿದೆ.
ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಜಿಟಿಡಿ ʻʻರೇವಣ್ಣ ಅವರು, ನನ್ನನ್ನು ಅರ್ಥ ಮಾಡಿಕೊಳ್ಳಲು ನನ್ನ ಕುಟುಂಬಕ್ಕೆ ಆಗಿಲ್ಲ. ನಿಮಗೆ ಹೇಗೆ ಅರ್ಥವಾಗುತ್ತದೆ. ನನ್ನ ಮೇಲೆ ಯಾವುದೇ ಪ್ರಕರಣವಿಲ್ಲ. ಸಿಎಂ ಸಿದ್ದರಾಮಯ್ಯ ಸೇರಿ ಯಾರೂ ನನ್ನನ್ನು ಬಂಧಿಸುವಂತೆ ಹೇಳಿಲ್ಲ. ನಾನು ಸಿದ್ದರಾಮಯ್ಯ ಅವರಿಂದ ಕರೆ ಮಾಡಿಸಿಲ್ಲ. ರಕ್ಷಣೆ ಕೊಡುವಂತೆ ಕುಮಾರಸ್ವಾಮಿ ಅವರನ್ನು ಕೇಳಿಲ್ಲ. ಜೈಲಿಗೆ ಹೋಗುವರ ಅಪರಾಧವನ್ನು ನಾನಾಗಲಿ, ನನ್ನ ಮಗನಾಗಲಿ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.



