ಬಸನಗೌಡ ಪಾಟೀಲ ಯತ್ನಾಳ್ ಬಿಜೆಪಿಯಲ್ಲಿ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಹೊಂದಾಣಿಕೆ ರಾಜಕೀಯ ಮಾಡ್ತಾರೆ ಅನ್ನೋ ಆರೋಪ ಮಾಡ್ತಾರೆ. ಅವರ ವಿರುದ್ಧ ಅಷ್ಟೇ ಅಲ್ಲ, ಆರ್. ಅಶೋಕ್, ಬಸವರಾಜ ಬೊಮ್ಮಾಯಿ ವಿರುದ್ಧ.. ಅಷ್ಟೇ ಏಕೆ.. ತಮ್ಮ ವಿರುದ್ಧ ಯಾರ್ ಯಾರು ಮಾತನಾಡ್ತಾರೋ ಅವರೆಲ್ಲರ ವಿರುದ್ಧವೂ ಯತ್ನಾಳ್ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಆರೋಪ ಮಾಡ್ತಾರೆ. ಆದರೆ, ಹಾಗೆ ಆರೋಪ ಮಾಡುವ ಯತ್ನಾಳ್ ವಿರುದ್ಧವೇ ಬಿಜೆಪಿಯಲ್ಲಿರುವ ಕೆಲವು ನಾಯಕರು ಹೊಂದಾಣಿಕೆ ರಾಜಕೀಯದ ಆರೋಪ ಮಾಡಿದ್ದಾರೆ.
ವಿಜಯಪುರದ ಬಿಜೆಪಿಯಲ್ಲಿರುವ ಪಂಚಮಸಾಲಿ ಮುಖಂಡರಾದ ವಿಜುಗೌಡ ಪಾಟೀಲ, ಸಂಜಯ ಪಾಟೀಲ ಕನಮಡಿ, ಡಾ.ಸುರೇಶ್ ಬಿರಾದಾರ, ಭೀಮಾಶಂಕರ ಹದನೂರು, ರವಿಕಾಂತ ಬಗಲಿ, ಕಾಸುಗೌಡ ಬಿರಾದಾರ, ಸಂದೀಪ ಪಾಟೀಲ.. ಮೊದಲಾದವರೆಲ್ಲ ಸಭೆ ನಡೆಸಿ ಯತ್ನಾಳ್ ವಿರುದ್ಧವೂ ಗುಡುಗಿದ್ದಾರೆ. ವಾಸ್ತವವಾಗಿ ತಮ್ಮ ಪಂಚಮಸಾಲಿ ಸಮುದಾಯದ ಜಯಮೃತ್ಯುಂಜಯ ಸ್ವಾಮೀಜಿಗೆ ಬುದ್ದಿವಾದ ಹೇಳಲು ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಯತ್ನಾಳ್ ವಿರುದ್ಧ ಹೊಂದಾಣಿಕೆ ರಾಜಕೀಯದ ಆರೋಪ ಮಾಡಿದ್ದಾರೆ.
ಎಂಬಿ ಪಾಟೀಲ್ ಜೊತೆ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್..?
ವಿಜುಗೌಡ ಪಾಟೀಲ್ ಅವರು ʻʻಯತ್ನಾಳ್ ಹಾಗೂ ಪಂಚಮಸಾಲಿ ಸ್ವಾಮೀಜಿಗಳಿಂದ ನಮ್ಮ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಿದೆ. ಯತ್ನಾಳ್ ಒಬ್ಬರೇ ಪಂಚಮಸಾಲಿನಾ, ನಾವು ಪಂಚಮಸಾಲಿಗೆ ಹುಟ್ಟಿಲ್ಲವಾ.. ಎಂದ ವಿಜು ಗೌಡ, ತಮ್ಮನ್ನು ಗಿರಾಕಿ ಎಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾ.. ನಾನು ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಬಬಲೇಶ್ವರ ಕ್ಷೇತ್ರದಲ್ಲಿ ಹೊಂದಾಣಿಕೆ, ದುಡ್ಡಿನ ಆಮೀಷಕ್ಕಾಗಿ ರಾಜಕಾರಣ ಮಾಡಿಲ್ಲ..ʼʼ ಎನ್ನುವ ಮೂಲಕ ಎಂಬಿ ಪಾಟೀಲರ ಜೊತೆ ಅಡ್ಜಸ್ಟ್‌ಮೆಂಟ್ ರಾಜಕೀಯ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಎಂಬಿ ಪಾಟೀಲ್ ಮತ್ತು ಯತ್ನಾಳ್ ಅವರ ಮಧ್ಯೆ ಸುದೀರ್ಘ ಕಾಲದಿಂದ ಹೊಂದಾಣಿಕೆ ನಡೆಯುತ್ತಿದೆ ಎಂಬ ಆರೋಪ ಸ್ಥಳೀಯ ಮಟ್ಟದಲ್ಲಿತ್ತು. ಅದು ಈಗ ಬಹಿರಂಗವಾಗಿದೆ.
ಯತ್ನಾಳ್ ವಿರುದ್ಧ ಕುಟುಂಬ ಪ್ರೇಮ ರಾಜಕೀಯದ ಆರೋಪ..
ಬಿಎಸ್‌ವೈ ಕುಟುಂಬದ ವಿರುದ್ಧ ಕುಟುಂಬ ರಾಜಕಾರಣ ಅಂತ ಟೀಕೆ ಮಾಡೋ ಯತ್ನಾಳ್ ತಮ್ಮ ಅಕ್ಕನ ಮಗನಿಗಾಗಿ ಪಕ್ಷದವರನ್ನೇ ಸೋಲಿಸಿದ್ದರು ಎಂಬ ಅರೋಪವೂ ಕೇಳಿಬಂದಿದೆ. ಈ ಆರೋಪ ಮಾಡಿದ್ದು ಸಂಜಯ ಪಾಟೀಲ ಕನಮಡಿ. ಸಹಕಾರ ಮಹಾಮಂಡಲದ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ನಾನೇ ಇದ್ದೆ. ಆದರೆ ಯತ್ನಾಳ್ ಅವರು ತಮ್ಮ ಪುತ್ರನಿಗಾಗಿ, ಅಕ್ಕನ ಮಗನಿಗಾಗಿ ತಮ್ಮ ವಿರುದ್ಧವೇ ಕೆಲಸ ಮಾಡಿ ಸೋಲಿಸಿದರು. ಬೆಳಗಾವಿಯ ಕಾಂಗ್ರೆಸ್ ಶಾಸಕರ ಸಹಾಯ ಪಡೆದು, ತಮ್ಮವರನ್ನು ಗೆಲ್ಲಿಸಿಕೊಂಡರು ಎಂದಿದ್ದಾರೆ. ಇದು ಅಡ್ಜಸ್ಟ್‌ಮೆಂಟ್ ರಾಜಕೀಯ ಅಲ್ವೇ.. ಎನ್ನುವುದು ಅವರ ಪ್ರಶ್ನೆ.
ಅದಕ್ಕೆ ಸಾಥ್ ಕೊಟ್ಟ ವಿಜುಗೌಡ ಪಾಟೀಲ್ ಯತ್ನಾಳ್ ಅವರು ಕೋ ಆಪರೇಟಿವ್ ಸೊಸೈಟಿಗೆ ಅವರ ಮಗನನ್ನ ನಿಲ್ಲಿಸಿ ಆರಿಸಿ ತಂದಿದ್ದಾರೆ. ಅರಕೇರಿ ಬರಲಿಲ್ಲ, ಬಬಲೇಶ್ವರಕ್ಕೆ ಬಂದು ನನಗೆ ಮತ ಹಾಕಿ ಅಂತಾ ಹೇಳಲೆ ಇಲ್ಲ, ಬಿಜೆಪಿ ಓಟು ಹಾಕಿ ಎನ್ನಲೇ ಇಲ್ಲ ಎಂದು ದೂರಿದ್ದಾರೆ.
ಯತ್ನಾಳ್ ಹಿಂದುತ್ವವನ್ನೇ ಪ್ರಶ್ನೆ ಮಾಡಿದ ನಾಯಕರು..!
ಯತ್ನಾಳ್ ಅವರು ಎಲ್ಲರಿಗೂ ಗೊತ್ತಿರುವಂತೆ ಹಿಂದುತ್ವದ ಅಜೆಂಡಾ.. ಪಂಚಮಸಾಲಿ ಮುಖಂಡ. ಅವರು ಜಯಮೃತ್ಯುಂಜಯ ಸ್ವಾಮೀಜಿ ಜೊತೆ ನಿಂತಿದ್ದನ್ನೂ ಪ್ರಶ್ನೆ ಮಾಡಿರುವ ನಾಯಕರು ನಾವು ಹಿಂದೂಗಳೇ ಅಲ್ಲ ಎನ್ನುವ ಸ್ವಾಮೀಜಿ ಹಿಂದೆ ಓಡಾಡುತ್ತಿದ್ದಾರೆ. ಹಿಂದೂ ಧರ್ಮವನ್ನು ಒಡೆದು, ಪ್ರತ್ಯೇಕ ಲಿಂಗಾಯತ ಧರ್ಮ ಕಟ್ಟುವ ಹೋರಾಟ ನಡೆಸುತ್ತಿರುವವರ ಜೊತೆ ಓಡಾಡುತ್ತಿದ್ದಾರೆ. ಇದೇನಾ ಹಿಂದುತ್ವ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಯತ್ನಾಳ್ ಅವರು ಯಡಿಯೂರಪ್ಪ ವಾಪಸ್ ಬಿಜಾಪುರಕ್ಕೆ ಕರೆ ತಂದು ನನಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಯತ್ನಾಳ್ ಹೇಳುವ ವಿಡಿಯೋ ಬೈಟ್ ಪ್ಲೇ ಮಾಡಿ ತೋರಿಸಿದ ವಿಜು ಗೌಡ ಯಡಿಯೂರಪ್ಪ ಮನೆಗೆ ಹೋಗಿಲ್ಲ ಎಂದಿದ್ದ ಯತ್ನಾಳ್, ಮನೆಗೆ ಹೋಗಿ ಕಾಲಿಗೆ ಬಿದ್ದಿರುವ ವಿಡಿಯೋ ಕೂಡಾ ತೋರಿಸುತ್ತೇನೆ ಎಂದು ಹೇಳಿದ್ಧಾರೆ.



