ದೇಶದಲ್ಲಿ ಮುಸ್ಲಿಮರ ಸಂಖ್ಯೆ, ಪ್ರಮಾಣ ಹಿಂದೂಗಳಿಗೆ ಹೋಲಿಸಿದರೆ ಕಡಿಮೆಯೇ ಇರಬಹುದು. ಆದರೆ ಮುಸ್ಲಿಂ ಸಮುದಾಯ ಹೊಂದಿರುವ ಆಸ್ತಿಯ ಪ್ರಮಾಣ ಮಾತ್ರ ದೊಡ್ಡದು. ದೇಶದಲ್ಲಿ ಮಿಲಿಟರಿ ಹಾಗೂ ರೈಲ್ವೇ ಬಿಟ್ಟರೆ ಅತೀ ಹೆಚ್ಚು ಆಸ್ತಿ ಇರುವುದು ಮುಸ್ಲಿಂ ಸಮುದಾಯದ ವಕ್ಫ್ ಮಂಡಳಿಯಲ್ಲಿ. ಇತ್ತೀಚೆಗೆ ವಕ್ಫ್ ಆಸ್ತಿ ಕುರಿತ ಕಾಯ್ದೆಯ ಮರುಪರಿಶೀಲನೆ ಮಾಡುವ, ಹೊಸ ನಿಯಮಗಳನ್ನು ಅಳವಡಿಸುವ ಪ್ರಕ್ರಿಯೆ ಶುರುವಾಗಿದ್ದೇ ತಡ, ವಕ್ಫ್ ಮಂಡಳಿ ಎಲ್ಲ ಕಡೆ ಆಸ್ತಿಗಳನ್ನು ದಾಖಲೆ ಮಾಡಿಕೊಳ್ಳೋಕೆ ಶುರು ಮಾಡಿದೆ.
ಹೀಗಾಗಿ ರಾಜ್ಯದಲ್ಲೆಡೆ ಯಾವ್ಯಾವುದೋ ರೈತರ ಭೂಮಿಗಳ ಪಹಣಿಗಳಲ್ಲಿ, ಮಠಗಳ ಆಸ್ತಿಗಳಲ್ಲಿ, ದೇವಸ್ಥಾನಗಳ ಆಸ್ತಿ ದಾಖಲೆಗಳಲ್ಲಿ ದಿಢೀರ್ ಎಂದು ವಕ್ಫ್ ಮಂಡಳಿಯ ಹೆಸರು ಪ್ರತ್ಯಕ್ಷವಾಗಿದೆ. ವಿಜಯಪುರದಿಂದ ಶುರುವಾದ ಗಲಾಟೆ, ಈಗ ವಿಜಯಪುರದ ಗಲಾಟೆ ಆಗಿ ಅಷ್ಟೇ ಉಳಿದಿಲ್ಲ. ಬೀದರ್, ರಾಯಚೂರು, ಗುಲ್ಬರ್ಗ, ಧಾರವಾಡ-ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಚಿತ್ರದುರ್ಗ.. ಹೀಗೆ ಹಲವು ಜಿಲ್ಲೆಗಳ ನೂರಾರು ರೈತರಿಗೆ ಬಿಸಿ ತಟ್ಟಿದೆ. ಮಾಧ್ಯಮಗಳಲ್ಲಿ ಬಂದಿರುವ ಪ್ರಕಾರವೇ ಈ ರೀತಿ ಕಾಣಿಸಿಕೊಂಡಿರುವ ರೈತರ ಸಂಖ್ಯೆ ಹತ್ತಿರತ್ತಿರ ಸಾವಿರಗಳಲ್ಲಿದೆ.
ಹಾವೇರಿಯಲ್ಲಿ ಗಲಾಟೆಯೂ ಆಗಿ, ಮುಸ್ಲಿಂ ಮುಖಂಡರ ಮನೆ ಮೇಲೆ ಕಲ್ಲು ತೂರಾಟವೂ ನಡೆದಿದೆ. ಬೈ ಎಲೆಕ್ಷನ್ ಪ್ರಕ್ರಿಯೆ ಕೂಡಾ ಚಾಲ್ತಿಯಲ್ಲಿರೋದ್ರಿಂದ ಅತ್ತ ಹಾವೂ ಸಾಯದಂತೆ ಇತ್ತ ಕೋಲೂ ಮುರಿಯದಂತೆ ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದೆ. ಅತ್ತ ವಕ್ಫ್ ಮಂಡಳಿಯ ನೋಟಿಸಿಂದ ಯಾವುದೇ ಸಮಸ್ಯೆ ಇಲ್ಲ. ನೋ ಪ್ರಾಬ್ಲಂ ಎನ್ನುತ್ತಿರುವ ಸರ್ಕಾರ, ಪಹಣಿಗಳಲ್ಲಿ ಕಾಣಿಸಿಕೊಂಡಿದ್ದ ವಕ್ಫ್ ಮಂಡಳಿ ಹೆಸರನ್ನು ತೆಗೆದು ಹಾಕಿಸಿದೆ. ಈ ರೀತಿ ಸರ್ಕಾರ ತುಘಲಕ್ ದರ್ಬಾರ್ ನಡೆಸಿದೆ.
ಅತ್ತ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ವಕ್ಫ್ ಆಸ್ತಿ ದಾಖಲೆ ಸರಿ ಮಾಡಿಕೊಳ್ಳೋಕೆ ಖುದ್ದು ಸಿಎಂ ಸಿದ್ದರಾಮಯ್ಯನವರೇ ಆದೇಶ ಕೊಟ್ಟಿದ್ದಾರೆ ಎನ್ನುತ್ತಿದ್ದಾರೆ. ಜಮೀರ್ ಅವರಿಗೆ ಸರ್ಕಾರದ ಯಾವೊಬ್ಬ ಸಚಿವರೂ ʻಹಾಗೆ ಮಾಡಬೇಡಿʼ ಎಂದು ಹೇಳುತ್ತಿಲ್ಲ.
ಈ ಮಧ್ಯೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲ ವಕ್ಫ್ ಆಸ್ತಿಗಳನ್ನೂ ರಾಷ್ಟ್ರೀಕರಣ ಮಾಡಿ ಎಂದು ಆಗ್ರಹಿಸಿ ಪತ್ರ ಬರೆದಿದ್ದಾರೆ. ವಕ್ಫ್ ಬೋರ್ಡ್‌ನಿಂದ ಭೂಮಾಲೀಕರು ಮತ್ತು ರೈತರಿಗೆ ಸಮಸ್ಯೆಯಾಗುತ್ತಿದೆ. ಧಾರ್ಮಿಕ ಸಂಸ್ಥೆಗಳು ಮಠ ಮಾನ್ಯಗಳ ಜಮೀನನ್ನ ವಕ್ಫ್ ಆಕ್ರಮಿಸಿಕೊಳ್ಳುತ್ತಿದೆ. ವಕ್ಫ್‌ನ ಈ ನಡೆ ಕಾನೂನು ಅಸಮಾನತೆ ಮತ್ತು ಕ್ರೂರತೆಯನ್ನ ಒಳಗೊಂಡಿದೆ. ವಕ್ಫ್‌ಗೆ ಅಪರಿಮಿತಿ ಅಧಿಕಾರ ನೀಡಲಾಗಿದ್ದು, ಇದರಿಂದ ಭಾರತೀಯರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ವಕ್ಫ್ ಆಸ್ತಿಯನ್ನ ರಾಷ್ಟ್ರೀಕರಣ ಮಾಡಿ ಸಮಾಜಕ್ಕೆ ಉಪಯೋಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ನಾಯಕರು ಯತ್ನಾಳ್ ಒಬ್ಬ ಹುಚ್ಚ, ಮೆಂಟಲ್ ಎಂದೆಲ್ಲ ಟೀಕೆ ಮಾಡಿ ಸುಮ್ಮನಾಗಿದ್ದಾರೆ. ಆದರೆ ವಿವಾದ ಮುಗಿದಿಲ್ಲ. ರೈತರು ಕಳೆದುಕೊಂಡಿರೋದು ಅಥವಾ ಕಳೆದುಕೊಳ್ಳಲಿರೋದು ತಮ್ಮ ಜೀವನಾಧಾರವಾಗಿರುವ ಭೂಮಿಯನ್ನು. ನಾಯಕರ ಮೀಡಿಯಾ ಹೇಳಿಕೆಗಳಿಂದ ಅದು ಶಾಂತವಾಗುವುದಿಲ್ಲ.
ಹಾಗಾದರೆ ವಕ್ಫ್ ಆಸ್ತಿಗಳ ರಾಷ್ಟ್ರೀಕರಣ ಸಾಧ್ಯವೇ..? ಸಾಧ್ಯ ಎನ್ನುತ್ತಾರೆ ಕಾನೂನು ತಜ್ಞರು. ಆದರೆ ಅದಕ್ಕೆ ಮುನ್ನ ಪಾಲಿಸಬೇಕಾದ ಹಲವು ನಿಯಮಗಳ ಬಗ್ಗೆ ಎಚ್ಚರಿಕೆ ಇರಬೇಕು ಎಂದೂ ಹೇಳುತ್ತಾರೆ. ಈಗ ವಿವಾದವಾಗುತ್ತಿರುವ ಭೂಮಿಗಳ ವಿಷಯದಲ್ಲಿ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಹಳೆಯ ಕಾನೂನಿನ ವಿಷಯದಲ್ಲಿ ಹಾಗಾಗುವುದಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಅರ್ಥಾತ್ ಮೋದಿಯವರೇ ಮಧ್ಯಪ್ರವೇಶಿಸಿ ಸುಗ್ರೀವಾಜ್ಞೆ ಹೊರಡಿಸಬಹುದು ಎನ್ನುವ ತಜ್ಞರು ಇಂದಿರಾ ಗಾಂಧಿ ಕಾಲದಲ್ಲಿ ರಾಜ ವಂಶಸ್ಥರ ಆಸ್ತಿಗಳನ್ನು ರಾಷ್ಟ್ರೀಕರಣ ಮಾಡಿದ್ದನ್ನು, ಎಲ್ಲ ಬ್ಯಾಂಕುಗಳನ್ನೂ ರಾಷ್ಟ್ರೀಕರಣ ಮಾಡಿದ್ದನ್ನೂ ನೆನಪಿಸುತ್ತಾರೆ.
ಆದರೆ ಬ್ಯಾಂಕುಗಳಾಗಲೀ, ರಾಜವಂಶಸ್ಥರ ಅಸ್ತಿಗಳಾಗಲೀ ಯಾವುದೋ ಒಂದು ಧರ್ಮಕ್ಕೆ ಸೇರಿದ ವಿಚಾರ ಆಗಿರಲಿಲ್ಲ. ಆದರೆ ವಕ್ಫ್ ಆಸ್ತಿ ಹಾಗಲ್ಲ. ಹೀಗಾಗಿ ಇದು ಸಾಧ್ಯವಿಲ್ಲ ಎಂದು ಹೇಳುವ ತಜ್ಞರದ್ದು ಇನ್ನೊಂದು ವಾದ ಇದೆ.



