ಬಸನಗೌಡ ಪಾಟೀಲ ಯತ್ನಾಳ್ ಫೈರ್ ಬ್ರಾಂಡ್. ಬಾಯಿ ಬಿಟ್ಟರೆ ಬೆಂಕಿ. ಹಿಂದುತ್ವದ ವಿಚಾರದಲ್ಲಂತೂ ಬೆಂಕಿಯೋ ಬೆಂಕಿ. ಆದರೆ.. ರಾಜಕೀಯಕ್ಕೆ ಬರೀ ಭಾಷಣಗಳಿಂದಲೇ ವೋಟು ಬರಲ್ಲ. ಹಾಗೆ ನೋಡಿದರೆ.. ಎಷ್ಟೋ ಬಾರಿ ಮಾತುಗಳಿಂದಲೇ ಬರಬೇಕಾದ ಮತಗಳೂ ಕೈ ತಪ್ಪಿ ಹೋಗುತ್ತವೆ. ಇದು ವಾಸ್ತವವೂ ಹೌದು. ಇದು ಯತ್ನಾಳ್ ಅವರಿಗೂ ಗೊತ್ತಿಲ್ಲದ ವಿಷಯವೇನಲ್ಲ. ಆದರೆ.. ಅವರು ತಮ್ಮ ಬಾಯಿಗೆ ಬೀಗ ಹಾಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ರೆಬಲ್ಸ್ ಟೀಂ ಕೂಡಾ ಯತ್ನಾಳ್ ಸಹವಾಸ ಸಾಕಪ್ಪಾ ಸಾಕು ಎಂಬಂತೆ ದೂರ ಇಡುವ ಪ್ರಯತ್ನ ಮಾಡಿದೆ.
ಯತ್ನಾಳ್ ಹೇಳಿಕೆ ಪಕ್ಷಕ್ಕೆ ಮುಜುಗರ ತಂದೊಡ್ಡಿದ್ದ ಹಿನ್ನಲೆ ಅವರನ್ನು ಉಚ್ಚಾಟನೆ ಮಾಡಲಾಯಿತು. ಯತ್ನಾಳ್‌ರನ್ನು ಕೆಳಗಿಸಿದ್ರೆ ಉಳಿದವರು ಶಮನವಾಗ್ತಾರೆ ಅನ್ನೋ ಲೆಕ್ಕಚಾರ ಹೈಕಮಾಂಡ್‌ಗಿತ್ತು ಆದರೆ ಅದ್ಯಾವುದು ಅಂದುಕೊಂಡಂತೆ ಆಗಲಿಲ್ಲ. ಕುಮಾರ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಜಿಎಂ ಸಿದ್ದೇಶ್ವರ, ಅರವಿಂದ್ ಲಿಂಬಾವಳಿ ಅಂಡ್ ಟೀಮ್ ಮತ್ತೆ ರಾಜ್ಯಾಧ್ಯಕ್ಷರ ಬದಲಾವಣೆ ಪಟ್ಟು ಹಿಡಿದು ಕುಳಿತಿದೆ. ಆದರಿಂದ ಹೈಕಮಾಂಡ್ ಯಾವುದೇ ತೀರ್ಮಾನಕ್ಕೆ ಬಾರದೆ ಎಲ್ಲವನ್ನು ಪೆಂಡಿಂಗ್ ಇಟ್ಟಿದೆ.
ಆದರೆ.. ರೆಬಲ್ಸ್ ಟೀಂ ಲೆಕ್ಕಾಚಾರವೇ ಬೇರೆ. ಬಿಜೆಪಿ ಹೈಕಮಾಂಡಿನವರಿಗೆ ವಿಜಯೇಂದ್ರ ಅವರನ್ನು ಸ್ಥಾನದಿಂದ ಕೆಳಗಿಳಿಸುವುದು ಬೇಕಿಲ್ಲ ಎಂಬುದು ಮನದಟ್ಟಾಗಿದೆ. ಅದು ಅರ್ಥವಾದ ಮರುಕ್ಷಣ.. ಪಕ್ಷದಲ್ಲಿ ತಮ್ಮ ತಮ್ಮ ಸ್ಥಾನ, ವಿಜಯೇಂದ್ರ ಮೇಲೆ ಹಿಡಿತ ತೆಗೆದುಕೊಳ್ಳಲು ಏನು ಮಾಡಬೇಕೋ.. ಆ ಪ್ರಯತ್ನ ಮಾಡುವುದಕ್ಕೆ ಶುರು ಮಾಡಿದೆ. ಅದು ಪಾಲಿಟಿಕ್ಸ್. ಹೊಡೆಯುವುದು ಸಾಧ್ಯವಿಲ್ಲ ಎಂದಾಗ.. ಕಂಟ್ರೊಲ್ ಪಡೆಯುವುದಕ್ಕಾದರೂ ಪ್ರಯತ್ನಿಸಬೇಕು. ಆದರೆ.. ಇಲ್ಲಿ ಯತ್ನಾಳ್ ಅವರ ಹೇಳಿಕೆಗಳು ನಿಲ್ಲುತ್ತಿಲ್ಲ.
ರೆಬಲ್ಸ್ ಟೀಂನ ನಾಯಕರೆಲ್ಲ ಒಟ್ಟಾಗಿ ಸೇರಿ.. ಬಾಯಿಗೆ ಒಂದಿಷ್ಟು ದಿನ ಬೀಗ ಹಾಕಿಕೊಳ್ಳಿ ಎಂದು ಠರಾವು ಹೊರಡಿಸಿದ್ದರೂ.. ಯತ್ನಾಳ್ ಬಾಯಿ ಮುಚ್ಚುತ್ತಿಲ್ಲ. ಹೀಗಾಗಿ ಯತ್ನಾಳ್ ಅವರಿಂದ ಅಂತರ ಕಾಯ್ದುಕೊಳ್ಳೋಕೆ ಮುಂದಾಗಿ ರೆಬಲ್ಸ್ ಟೀಂ. ಇನ್ನು ಮುಂದೆ ಯತ್ನಾಳ್ ಜೊತೆ ರಾಜಕೀಯ ಚರ್ಚೆ ಮಾಡುವುದೇ ಬೇಡ ಎಂಬ ತೀರ್ಮಾನಕ್ಕೆ ಬಂದಿದೆಯಂತೆ.
ಬೊಮ್ಮಾಯಿ ಪಟಾಕಿಯೂ ಠುಸ್..!
ದೆಹಲಿಗೆ ಹೋಗಿದ್ದ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ರಾಜ್ಯಾಧ್ಯಕ್ಷನಾಗುವ ಆಸೆಗೆ ಹೈಕಮಾಂಡ್ ತಣ್ಣೀರು ಎರಚಿದೆ. ನನಗೆ ಆ ಸ್ಥಾನ ಬೇಕಿಲ್ಲ ಎಂದು ಬಹಿರಂಗವಾಗಿ ಹೇಳಿ ದೆಹಲಿಗೆ ಹೋಗಿದ್ದ ಬೊಮ್ಮಾಯಿ, ಠುಸ್ ಎಂದು ವಾಪಸ್ ಬಂದಿದ್ದಾರೆ. ಬೊಮ್ಮಾಯಿ ಅವರು ಬೇಡ ಬೇಡ ಎನ್ನುತ್ತಲೇ ಸ್ಥಾನ ಪಡೆಯವುದು ಹೊಸದಲ್ಲ. ಸಿಎಂ ಪೋಸ್ಟು, ಸಂಸತ್ ಸ್ಥಾನಕ್ಕೆ ಸ್ಪರ್ಧೆ, ಮಗನಿಗೆ ಎಂಎಲ್‌ಎ ಟಿಕೆಟ್ಟು.. ಈ ಎಲ್ಲವನ್ನೂ ಅವರು ಹೊರಗೆ ಬೇಡ ಬೇಡ ಎನ್ನುತ್ತಲೇ.. ಕೊನೆಗೆ ಹೈಕಮಾಂಡ್ ಹೇಳಿತು ಎಂಬ ನೆಪ ಹೇಳಿದ್ದರು. ಅದನ್ನು ನೆನಪಿಸಿರುವ ದೆಹಲಿ ನಾಯಕರು.. ಕಳೆದ ಬಾರಿ ಚುನಾವಣೆಗೆ ಹೋಗಿದ್ದು ನಿಮ್ಮದೇ ನೇತೃತ್ವದಲ್ಲಿ. ನಿಮ್ಮ ಸಲಹೆ ಸ್ವೀಕರಿಸಿಯೇ ಎಡವಟ್ಟಾಯ್ತು. ಕೊನೆಯ ದಿನದವರೆಗೂ ದಾರಿ ತಪ್ಪಿಸಿದಿರಿ. ನಿಮ್ಮ ಕೈಗೆ ಪಕ್ಷದ ಅಧ್ಯಕ್ಷ ಸ್ಥಾನ ಕೊಡುವುದು ಹೇಗೆ ಎಂದು ಪ್ರಶ್ನೆ ಮಾಡಿದಾಗ.. ಬೊಮ್ಮಾಯಿ ಠುಸ್ ಪಟಾಕಿಯಾಗಿ ವಾಪಸ್ ಆದ್ರಂತೆ.



