ಬಸನಗೌಡ ಪಾಟೀಲ ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ನಡೆಯತ್ತಿದ್ದ ವಾಗ್ಯುದ್ಧ ಸದ್ಯಕ್ಕೆ ಸೈಲೆಂಟ್ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಏಕೆಂದರೆ ರಾಜ್ಯದಲ್ಲಿ ಯಾವುದಾದರೊಂದು ಮೂಲೆಯಲ್ಲಿ ಕುಳಿತು ಮೈಕ್ ಮುಂದೆ ಏನಾದರೊಂದು ಮಾತನಾಡುತ್ತಿದ್ದ ಯತ್ನಾಳ್ ಬಣದ ನಾಯಕರು ಕಳೆದ ಎರಡು ದಿನಗಳಿಂದ ಫುಲ್ ಸೈಲೆಂಟ್ ಆದಂತೆ ಕಾಣುತ್ತಿದ್ದಾರೆ. ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಲಿಂಬಾವಳಿ.. ಮತ್ತಿತರೆಲ್ಲ ಮೌನಕ್ಕೆ ಶರಣಾದಂತೆ ತೋರುತ್ತಿದೆ.ಈ ಮೌನದ ಹಿಂದೆ ಏನೇ ಹುಡುಕಿದರೂ ಕಾಣುವುದು ಎರಡೇ ಕಾರಣಗಳು. ಒಂದು ಹೈಕಮಾಂಡ್ ವಾರ್ನಿಂಗ್. ಎರಡನೆಯದ್ದು ವಿಜಯೇಂದ್ರ ಅವರ ಎಚ್ಚರಿಕೆಯ ಹೆಜ್ಜೆ.
ಇನ್ನೂ ಬೆಳೆಯುತ್ತಿರುವವನು.. ತಪ್ಪಾಗಿದ್ದರೆ ತಿದ್ದಿಕೊಳ್ತೇನೆ : ವಿಜಯೇಂದ್ರ
ಮೊದಲ ಬಾರಿ ಶಿಕಾರಿಪುರದ ಜನರ ಆಶೀರ್ವಾದದಿಂದ ಶಾಸಕನಾಗಿದ್ದೇನೆ. ನಾನು ಕಳೆದ ಒಂದು ವರ್ಷದಲ್ಲಿ ಅನೇಕ ಪಾಠಗಳನ್ನು ಕಲಿತಿದ್ದೇನೆ. ನಾನು ರಾಜಕಾರಣದಲ್ಲಿ ಈಗ ತಾನೇ ಬೆಳೆಯುತ್ತಿರುವವನು. ಹೀಗಾಗಿ, ಎಡವುವುದು ಸಹಜ. ಈ ಮಾತು ಹೇಳಿರೋದು ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ. ತುಮಕೂರು ಸಮೀಪದ ಬೆಳ್ಳಾವಿ ಕಾರದ ಮಠದಲ್ಲಿ ಶ್ರೀಗಳ ಗದ್ದುಗೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಜಯೇಂದ್ರ ಈ ರೀತಿ ತಪ್ಪು ತಿದ್ದಿಕೊಳ್ಳೋ ಸುಳಿವು ಕೊಟ್ಟಿದ್ದಾರೆ.
ಯಾವಾಗ ಬೇಕಾದರೂ ಕೇಂದ್ರದ ವರಿಷ್ಠರು ರಾಜ್ಯಕ್ಕೆ ಬರಬಹುದು. ಎಲ್ಲಾ ಶಾಸಕರ ಜೊತೆ ಚರ್ಚಿಸಿ, ರಾಜ್ಯಾಧ್ಯಕ್ಷರ ಬಗ್ಗೆ ಅವರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದಿರುವ ವಿಜಯೇಂದ್ರ ಫೆಬ್ರವರಿ 20ರ ಒಳಗೆ ಎಲ್ಲದಕ್ಕೂ ಇತಿಶ್ರೀ ಹಾಡಲಿದ್ಧಾರೆ ಎಂಬ ಸೂಚನೆ ಕೊಟ್ಟಿದ್ದಾರೆ. ಫೆಬ್ರವರಿ 20, ತುಂಬಾ ದೂರವೇನೂ ಇಲ್ಲ.
ʻʻಯಡಿಯೂರಪ್ಪ ಹಾದಿಯಲ್ಲೇ ನಡೆಯುತ್ತೇನೆʼʼ
ಯಡಿಯೂರಪ್ಪನವರಿಗೆ ತೊಂದರೆಯಾದಾಗಲೆಲ್ಲ ಈ ನಾಡಿನ ಮಠ-ಮಾನ್ಯಗಳು ಅವರಿಗೆ ಜೊತೆಯಾಗಿ ನಿಂತಿವೆ. ರಾಜಕೀಯದಲ್ಲಿ ನನ್ನ ಗುರಿ ಸ್ಪಷ್ಟವಾಗಿದೆ. ನನ್ನ ರಾಜಕೀಯ ಗುರು ಯಡಿಯೂರಪ್ಪನವರು. ಯಡಿಯೂರಪ್ಪನವರಿಂದ ರಾಜಕೀಯ ಕಲಿತವನು ನಾನು. ಯಡಿಯೂರಪ್ಪನವರು ಏನೇ ಸವಾಲುಗಳು ಬಂದರೂ ಹೊರಗಡೆ ತೋರಿಸುತ್ತಿರಲಿಲ್ಲ ಎಂದು ಹೇಳಿಕೆ ನೀಡಿರುವ ವಿಜಯೇಂದ್ರ ಮತ್ತೊಮ್ಮೆ ನಾನು ರಾಜಕಾರಣದಲ್ಲಿ ಈಗ ತಾನೇ ಬೆಳೆಯುತ್ತಿರುವವನು. ಹೀಗಾಗಿ, ಎಡವುವುದು ಸಹಜ. ರಾಜಕೀಯದಲ್ಲಿ ನನ್ನ ಗುರಿ ಸ್ಪಷ್ಟವಾಗಿದೆ. ನನ್ನ ರಾಜಕೀಯ ಗುರು ಯಡಿಯೂರಪ್ಪನವರು. ಯಡಿಯೂರಪ್ಪನವರಿಂದ ರಾಜಕೀಯ ಕಲಿತವನು ನಾನು ಎಂದು ಮಾತನಾಡಿದ್ದಾರೆ.
ಯತ್ನಾಳ್ ಟೀಂಗೆ ವಾರ್ನಿಂಗ್ :
ಇನ್ನು ಹೈಕಮಾಂಡ್ ನಾಯಕರು ಯತ್ನಾಳ್ ಬಣದ ಆರೋಪಕ್ಕೆ ಸೊಪ್ಪು ಹಾಕಿಲ್ಲ. ಅದರಲ್ಲೂ ಅಮಿತ್ ಶಾ ಗರಂ ಆಗಿದ್ದಾರೆ. ಹಾಗೆಂದು ವಿಜಯೇಂದ್ರ ಅವರನ್ನು ಸುಖಾಸುಮ್ಮನೆ ಸಮರ್ಥನೆ ಮಾಡಿಕೊಂಡಿಲ್ಲ. ಈಗ ರಾಜ್ಯ ಬಿಜೆಪಿಗೆ ಬೇಕಿರುವುದು ಮಾಸ್ ಲೀಡರ್. ಟಿವಿಗಳಲ್ಲಿ ಹೇಳಿಕೆ ನೀಡುವ ನಾಯಕರೂ ಅಲ್ಲ. ಸದಾ ವಿವಾದಾತ್ಮಕ ಹೇಳಿಕೆ ಕೊಡುವ ನಾಯಕರೂ ಅಲ್ಲ. ಅತ್ತ ಸಂಘಟನೆಯನ್ನೂ ನೋಡಿಕೊಂಡು, ಬಲ ಹೆಚ್ಚಿಸುವ ಮಾಸ್ ಲೀಡರ್. ಇದು ವಿಜಯೇಂದ್ರ ಅವರಿಗೆ ಮಾತ್ರವೇ ಇದೆ ಎಂಬ ತೀರ್ಮಾನಕ್ಕೆ ಬಂದಿರುವ ಅಮಿತ್ ಶಾ ಪಕ್ಷದ ಸಂಘಟನೆಯತ್ತ ಗಮನ ಕೊಡಿ ಎಂದು ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ. ಮುಂದೆ ಇದೇ ರೀತಿ ಮುಂದುವರಿದರೆ ಪಕ್ಷದಿಂದ ಹೊರಹಾಕುವುದು ಅನಿವಾರ್ಯವಾದೀತು ಎಂದೂ ಹೇಳಿದ್ದಾರೆ.
ಆದರೆ ಯತ್ನಾಳ್ ಪಡೆಗೆ ಆಗುತ್ತಿರುವ ಅನುಭವವವೇ ಬೇರೆ. ಟೀಕೆಯ ವೇಳೆ ಬಳಸಬಾರದ ಪದಗಳನ್ನೆಲ್ಲ ಬಳಸಿ ಆಗಿದೆ. ಅದನ್ನು ಇಡೀ ರಾಜ್ಯವೇ ನೋಡಿದೆ. ಈಗ ಸೈಲೆಂಟ್ ಆದರೆ ಮರ್ಯಾದೆ ಇರಲ್ಲ ಎನ್ನುವುದು ಅವರ ಆತಂಕ. ಒಟ್ಟಿನಲ್ಲಿ ಮರ್ಯಾದೆ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.



