ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತೆ ಕಾಣಿಸುತ್ತಿದೆ. ನ್ನಲ್ಲೇ ಇತರ ಭಿನ್ನಮತೀಯ ಮುಖಂಡರನ್ನು ಮನವೊಲಿಸಲು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಆಪ್ತರು ಮುಂದಾಗಿದ್ದಾರೆ. ಯತ್ನಾಳ್ ಕಾರಣಕ್ಕಾಗಿ ಬಲಗೊಂಡಿದ್ದ ಭಿನ್ನಮತೀಯರ ಗುಂಪು ಯತ್ನಾಳ್ʻರನ್ನು ಪಕ್ಷದಿಂದ ಹೊರಗೆ ಹಾಕಿದ ನಂತರ ಒಂದು ಹಂತಕ್ಕೆ ಸೈಲೆಂಟ್ ಅಗಿದೆ. ಈ ನಡುವೆ ಯತ್ನಾಳ್ ಜೊತೆಯಲ್ಲಿದ್ದ ಕೆಲವು ನಾಯಕರು ಡಿಕೆ ಸಂಪರ್ಕಕ್ಕೆ ಬಂದಿದ್ದಾರೆ.
ಯತ್ನಾಳ್ ಅವರ ಜೊತೆ ಸ್ಟ್ರಾಂಗ್ ಆಗಿ ಗುರುತಿಸಿಕೊಂಡಿದ್ದ ದಾವಣಗೆರೆ ಭಾಗದ ನಾಯಕರುಗಳಾದ ಮಾಜಿ ಕೇಂದ್ರ ಸಚಿವ ಜಿಎಂ ಸಿದ್ದೇಶ್ವರ್ ಹಾಗೂ ಬಿಪಿ ಹರೀಶ್ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಡಿಕೆ ಹೇಳುವ ಪ್ರಕಾರ ಇದು ಸೌಜನ್ಯದ ಭೇಟಿ, ಅಷ್ಟೇ. ಮೂಲಗಳ ಪ್ರಕಾರ ಬಿಪಿ ಹರೀಶ್ ಅವರಿಗೆ ಡಿಕೆ ಶಿವಕುಮಾರ್ ಅವರು ಬಾಗಿಲು ಓಪನ್ ಆಗಿಟ್ಟಿದ್ದಾರೆ. 2023ರ ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಜೆಪಿ ಶಾಸಕ ಬಿಪಿ ಹರೀಶ್ ಅವರಿಗೆ ಪಕ್ಷಾಂತರದ ಓಪನ್ ಆಫರ್ ಕೊಟ್ಟಿದ್ದರು. ಈಗ ಇದ್ದಕ್ಕಿದ್ದಂತೆ ಬಿಪಿ ಹರೀಶ್ ಮತ್ತು ಜಿಎಂ ಸಿದ್ದೇಶ್ವರ, ಇಬ್ಬರೂ ಡಿಕೆ ಅವರನ್ನು ಭೇಟಿ ಮಾಡಿದ್ದಾರೆ.
ರಾಜಕೀಯ ಲೆಕ್ಕಾಚಾರದ ಪ್ರಕಾರ ಶಾಮನೂರು ಕುಟುಂಬದ ಪ್ರಾಬಲ್ಯಕ್ಕೆ ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಬ್ರೇಕ್ ಹಾಕುವ ಪ್ಲಾನ್ ಡಿಕೆಗೆ ಇದೆ. ಈ ಯೋಜನೆಯ ಭಾಗವಾಗಿ ಈ ಇಬ್ಬರನ್ನೂ ಸೆಳೆಯಲು ಯತ್ನಿಸಲಾಗುತ್ತಿದೆ ಎಂಬುದು ಒಂದು ಲೆಕ್ಕ. ಇನ್ನು ಸಿದ್ದೇಶ್ವರ ಮತ್ತು ಬಿಪಿ ಹರೀಶ್ ಇಬ್ಬರಿಗೂ ಕೂಡಾ ಯಡಿಯೂರಪ್ಪ, ವಿಜಯೇಂದ್ರ ಇಷ್ಟೆಲ್ಲ ಕೂಗಾಡಿ ಹಾರಾಡಿದ ಮೇಲೆಯೂ, ಅಲ್ಲೇ ಇದ್ದರೆ ಭವಿಷ್ಯ ಇರುವುದಿಲ್ಲ ಎಂಬ ಆತಂಕ.
ಇನ್ನು ಯತ್ನಾಳ್ ಪಕ್ಷದಲ್ಲಿದ್ದಾಗ ಆಕ್ಟೀವ್ ಇದ್ದ ರೆಬೆಲ್ ನಾಯಕರು ಈಗ ಎಲ್ಲಿಯೂ ಕೂಡ ವಿಜಯೇಂದ್ರ ವಿರುದ್ಧ ಬಾಯಿ ಬಿಡ್ತಿಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎನ್ನುತ್ತ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ.ಇದನ್ನೆಲ್ಲ ಗಮಿನಿಸಿರುವ ವಿಜಯೇಂದ್ರ ಅವರನ್ನು ಓಲೈಸಲು ಮುಂದಾಗುತ್ತಿದ್ದಾರೆ. ತಮ್ಮ ಆಪ್ತರ ಮೂಲಕ ಮಾತುಕತೆಗೆ ಕರೆಯುತ್ತಿದ್ದಾರೆ. ಯತ್ನಾಳ್ ಹೋರಹೋದ ಬಳಿಕ ಮುಂದೇನು ಎಂಬ ಆತಂಕದಲ್ಲಿರುವ ಹಲವರಿಗೆ, ವಿಜಯೇಂದ್ರ ಧೈರ್ಯ ಹೇಳುತ್ತಿದ್ದಾರಂತೆ.
ಇನ್ನು ಯತ್ನಾಳ್ ಅವರು ಹೋದ ನಂತರ ಮುನಿಸಿಕೊಂಡಿದ್ದ ಎರಡನೆಯ ಹಂತದ ಮುಖಂಡರ ಪೈಕಿ ಬಹುತೇಕರು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಅವರಿಂದ ಉಪಕೃತರಾದ ನಾಯಕರೊಬ್ಬರು ಭಾರೀ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.