ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟು ಮಾಯವಾಗಿದೆ. ಅತ್ತ ವಿಜಯೇಂದ್ರ ಯಡಿಯೂರಪ್ಪ, ಬಿಜೆಪಿಯಲ್ಲಿನ ಕಾರ್ಯಕರ್ತರನ್ನೆಲ್ಲ ಒಗ್ಗೂಡಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಯಶಸ್ವಿಯಾಗಿ ಪ್ರತಿಭಟನೆ, ಪಾದಯಾತ್ರೆ ಮಾಡಿ ಮುಗಿಸಿದ್ದರೆ, ಇತ್ತ ಇನ್ನೊಂದು ಬಣ ದಿನಕ್ಕೊಂದು ಸಭೆ, ಗಂಟೆಗೊಂದು ಮೀಡಿಯಾ ಹೇಳಿಕೆ ನೀಡುತ್ತಾ ಕಾಲ ಕಳೆಯುತ್ತಿದೆ. ಒಪ್ಪುವುದೋ.. ಬಿಡುವುದೋ.. ಅದು ಆ ಪಕ್ಷದೊಳಗಿನ ವಿಷಯ. ಆದರೆ.. ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಂತೂ ಇಲ್ಲ ಎನ್ನುವುದು ಸುಸ್ಪಷ್ಟ.
ಇದೀಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಯತ್ನಾಳ್ ಅವರನ್ನು ತಣ್ಣಗೆ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ವಿಜಯೇಂದ್ರ ಭೇಟಿಯಾಗಿದ್ದಾರೆ. ಈ ವೇಳೆ, ಯತ್ನಾಳ್ ಅವರ ಭಿನ್ನಮತದ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಎಂದು ವಿಜಯೇಂದ್ರ ಮನವಿ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಬಿ.ಎಲ್. ಸಂತೋಷ್ ಅವರು ವಿಜಯೇಂದ್ರ ಅವರಿಗೆ ʻನೀವು ರಾಜ್ಯಾಧ್ಯಕ್ಷರು. ನೀವೇ ಒಮ್ಮೆ ಯತ್ನಾಳ್ ಅವರ ಜೊತೆ ಮಾತನಾಡಿʼ ಎಂದು ಸಲಹೆ ಕೊಟ್ಟರಂತೆ. ಆಗ ವಿಜಯೇಂದ್ರ ಆ ಪ್ರಯತ್ನ ಆಗಿದೆ. ಆದರೆ ಅದು ಫಲ ಕೊಡಲಿಲ್ಲ ಎಂದರಂತೆ. ಪಾದಯಾತ್ರೆ ಯಶಸ್ವಿಯಾಗಿದ್ದರೂ.. ಯತ್ನಾಳ್, ಜಾರಕಿಹೊಳಿ, ಸಿಟಿ ರವಿ, ಪ್ರತಾಪ್ ಸಿಂಹ ಮೊದಲಾದ ಕೆಲ ನಾಯಕರ ಹೇಳಿಕೆಗಳಿಂದ ಕಾಂಗ್ರೆಸ್ ಲಾಭ ಪಡೆಯುತ್ತಿದೆ ಎಂದು ದೂರಿದ್ದಾರಂತೆ ವಿಜಯೇಂದ್ರ.
ಸದ್ಯದ ಭಿನ್ನಮತ ಬೇರೆ ದಾರಿ ಹಿಡಿಯುವ ಸೂಕ್ಷ್ಮತೆಯನ್ನು ಅರಿತ ನಡ್ಡಾ, ತಮ್ಮ ಆಪ್ತರ ಮೂಲಕ ಯತ್ನಾಳ್ ಅವರಿಗೆ ಸದ್ಯಕ್ಕೆ ಸುಮ್ಮನಿರುವಂತೆ ಸೂಚಿಸಿದ್ದಾರೆ. ಎಲ್ಲವನ್ನೂ ಹಂತಹಂತವಾಗಿ ಸರಿ ಪಡಿಸುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ.
ಆದರೆ.. ಯತ್ನಾಳ್ ಕೂಲ್ ಆಗಿಲ್ಲ. ಸಿಟಿ ರವಿ ಅವರೂ ಕೂಲ್ ಆಗಿಲ್ಲ. ಪ್ರತಾಪ್ ಸಿಂಹ ಅವರೂ ತಣ್ಣಗಾಗಿಲ್ಲ. ರಮೇಶ್ ಜಾರಕಿಹೊಳಿ ಸಿಡಿಯುತ್ತಲೇ ಇದ್ದಾರೆ. ಅಲ್ಲಿಗೆ ಬಿಜೆಪಿಯೊಳಗೆ ಒಂದು ಬಿಜೆಪಿ ಸೃಷ್ಟಿಯಾಗಿದೆ.
ಈ ಮಧ್ಯೆ ಯತ್ನಾಳ್ ʻʻತಾನು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಿಲ್ಲ, ಯಾಕೆಂದರೆ ಅವರು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ವಿಧಾನಸಭೆಯ ಮೆಟ್ಟಲೇರಿದವರು. ಇದನ್ನು ಡಿಕೆ ಶಿವಕುಮಾರ್ ಸಹ ಅಂಗೀಕರಿಸಿದ್ದಾರೆ, ಕಾಂಗ್ರೆಸ್ ಭಿಕ್ಷೆಯಿಂದ ಶಾಸಕನಾದವನ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗದುʼ ಎಂದಿದ್ದಾರೆ.
ವಿಷಯಗಳನ್ನು ತಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆ ಮಾಡಿದ್ದು ಅವರು ಸ್ವಲ್ಪ ಸಮಯದ ನಂತರ ಎಲ್ಲವನ್ನೂ ಸರಿ ಮಾಡುವ ಮತ್ತು ಪಕ್ಷದ ಹಳಬರಿಗೆ ಹಾಗೂ ಪ್ರಾಮಾಣಿಕರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಿದ್ದಾರೆ. ಸಂಘದ ಪ್ರಮುಖರೂ ಸಹ ರಾಜ್ಯದಲ್ಲಿ ಬಿಜೆಪಿಯನ್ನು ಹೊಂದಾಣಿಕೆ ಮುಕ್ತ ಮಾಡುವುದಾಗಿ ಎಂದಿದ್ದು, ತಾನು ಕೆಲ ದಿನಗಳವರೆಗೆ ತಾಳ್ಮೆಯಿಂದ ಇರಬೇಕು ಅಂತ ಹೇಳಿದ್ದಾರೆ. ಪಕ್ಷದ ಮತ್ತು ಸಂಘದ ವರಿಷ್ಠರು ಹೇಳಿರುವುದನ್ನು ತಾನು ಪಾಲಿಸುತ್ತೇನೆʼ ಎಂದು ಹೇಳಿದ್ದಾರೆ.



