ಬಸನಗೌಡ ಪಾಟೀಲ ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಈಗ ನಡೆಯುತ್ತಿರುವುದು ಮುಸುಕಿನ ಗುದ್ದಾಟವಲ್ಲ. ಓಪನ್ ವಾರ್. ಹಾಗೆ ನೋಡಿದರೆ ಯತ್ನಾಳ್ ಅವರನ್ನೇ ಕಂಟ್ರೋಲ್ ಮಾಡುವುದಕ್ಕೆ ಆಗುತ್ತಿಲ್ಲ. ಯತ್ನಾಳ್ ಅವರ ಮಾತುಗಳೇ ಅವರಿಗೆ ವಿಲನ್ ಆಗುತ್ತಿದೆ. ಈ ಮಧ್ಯೆ ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಸಂಧಾನಕ್ಕೂ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಕೇಶವಕೃಪಾದಲ್ಲಿಯೇ ಇಬ್ಬರೂ ನಾಯಕರನ್ನು ಮಾತನಾಡಿಸಿ, ಭಿನ್ನಮತಕ್ಕೆ ಇತಿಶ್ರೀ ಹಾಡುವಂತೆ ಸಂಘ ಪ್ರಮುಖರಿಗೆ ಮನವಿ ಮಾಡಲಾಗಿದೆ. ಈ ನಡುವೆ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ಪ್ರತಾಪ್ ಸಿಂಹ, ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದಾರೆ.
ಸಂಘ ಪ್ರಮುಖರ ಹಿಂದೇಟಿಗೆ ಕಾರಣ ಏನು..?
ವಿಜಯೇಂದ್ರ ಮತ್ತು ಯತ್ನಾಳ್ ಅವರ ನಡುವೆ ಸಂಧಾನ ನಡೆಸಿ ಎಂಬ ಬಿಜೆಪಿ ವರಿಷ್ಠರ ಬೇಡಿಕೆಗೆ ಆರ್ ಎಸ್ ಎಸ್ ಪ್ರಮುಖರು ಒಪ್ಪುತ್ತಿಲ್ಲ. ಈ ಹಿಂದೆ ಯತ್ನಾಳ್ ಅವರಿಂದ ಆಗಿರುವ ಮುಜುಗರ ಸನ್ನಿವೇಶಗಳ ಅರಿವು ಇದೆ. ವಿಜಯೇಂದ್ರ ಅವರನ್ನೇನೋ ಒಪ್ಪಿಸಬಹುದು, ಆದರೆ ಯತ್ನಾಳ್ ವಿಷಯದಲ್ಲಿ ಭರವಸೆ ಕೊಡುವುದು ಕಷ್ಟ ಎಂದಿದ್ದಾರಂತೆ ಆರ್‌ಎಸ್‌ಎಸ್ ಪ್ರಮುಖರು. ಈ ಹಿಂದೆ ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ಮಧ್ಯೆಯೂ ಹೀಗೆಯೇ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಆದರೆ ಸಂಘದ ಪ್ರಮುಖರು ಹೇಳಿದ ತಕ್ಷಣ, ಇಬ್ಬರೂ ಸೈಲೆಂಟ್ ಆಗುತ್ತಿದ್ದರು. ಸಂಘದ ಮಾತು ಮೀರುತ್ತಿರಲಿಲ್ಲ. ಆದರೆ ವಿಜಯೇಂದ್ರ ಮತ್ತು ಯತ್ನಾಳ್ ವಿಚಾರ ಹಾಗಲ್ಲ ಎನ್ನುತ್ತಿದ್ದಾರಂತೆ. ಆದರೂ ಪ್ರಯತ್ನಿಸಿ ಎಂದು ಹೈಕಮಾಂಡ್ ನಾಯಕರು ಹೇಳಿರುವ ಹಿನ್ನೆಲೆಯಲ್ಲಿ ನೋಡೋಣ ಎಂದಿದ್ದಾರಂತೆ ಆರ್ ಎಸ್ ಎಸ್ ಪ್ರಮುಖರು.
ಯತ್ನಾಳ್ ಟೀಂನವರಿಂದಲೇ ಯತ್ನಾಳ್ʻಗೆ ಬುದ್ದಿವಾದ :
ಇನ್ನು ಕುಮಾರ್ ಬಂಗಾರಪ್ಪ ಮನೆಯಲ್ಲಿ ಜನವರಿ 20ರಂದೇ ಸಭೆ ನಡೆಸಿದ್ದ ಯತ್ನಾಳ್ ಪಡೆಯಲ್ಲಿ ಈಗ ಒಂದಿಷ್ಟು ಅಸಮಾಧಾನಗಳೂ ಕಾಣಿಸಿಕೊಂಡಿವೆ. ಹಾಗೆ ನೋಡಿದರೆ ಯತ್ನಾಳ್ ಬಣದಲ್ಲಿರುವುದೇ 10 ರಿಂದ 13 ನಾಯಕರು. ಎಲ್ಲರೂ ಯತ್ನಾಳ್ ನೇತೃತ್ವವನ್ನು ಒಪ್ಪಿಕೊಂಡಾಗಿದೆ. ಇನ್ನು ಯತ್ನಾಳ್ ಬಣದಲ್ಲಿ ರಮೇಶ್ ಜಾರಕಿಹೊಳಿ ಬಿಟ್ಟರೆ, ಗಟ್ಟಿ ಕಾಳು ಎಂಬ ನಾಯಕರು ಕಾಣುತ್ತಿಲ್ಲ. ಹೀಗಿರುವಾಗ ಯತ್ನಾಳ್ ಹೋದಲ್ಲಿ.. ಬಂದಲ್ಲಿ.. ಮೀಡಿಯಾಗಳ ಮೈಕ್ ಕಂಡಾಗಲೆಲ್ಲ ಅತ್ತ ವಿಜಯೇಂದ್ರ, ಇತ್ತ ಯಡಿಯೂರಪ್ಪ, ಮತ್ತೊಂದು ಕಡೆ ಲಿಂಗಾಯತ ಸ್ವಾಮಿಗಳು, ಮಗದೊಂದು ಕಡೆ ಹೈಕಮಾಂಡ್ ನಾಯಕರು.. ಇನ್ನೊಂದೆಡೆ ಸಂಘದ ಪ್ರಮುಖರು.. ಹೀಗೆ ಎಲ್ಲರನ್ನೂ ಬೈದುಕೊಂಡು ಓಡಾಡುತ್ತಿದ್ದರೆ ಹೇಗೆ.. ಬಾಯಿಯನ್ನು ಹತೋಟಿಯಲ್ಲಿಟ್ಟುಕೊಳ್ಳಿ ಎಂದು ಬುದ್ದಿವಾದ ಹೇಳಿದ್ದಾರಂತೆ. ಅಲ್ಲದೆ ಮೀಡಿಯಾಗಳ ಜೊತೆಯಲ್ಲಿ ಸ್ವಲ್ಪ ತಾಳ್ಮೆಯಿಂದ ವ್ಯವಹರಿಸಿ. ಮಾಧ್ಯಮದವರನ್ನೂ ನೀವು ವಿಜಯೇಂದ್ರ ಅವರನ್ನು ನೋಡಿದಂತೆಯೇ ನೋಡ್ತೀರಿ. ಬಾಯಿಗೆ ಬಂದಂತೆ ಬೈತೀರಿ. ಇದು ಒಳ್ಳೆಯದಲ್ಲ ಎಂದಿದ್ದಾರಂತೆ. ಸದ್ಯಕ್ಕೆ ಯತ್ನಾಳ್ ಸೈಲೆಂಟ್ ಆಗಿದ್ಧಾರೆ.
ಆದರೆ ಯತ್ನಾಳ್ ತುಂಬಾ ದಿನ ಸೈಲೆಂಟ್ ಆಗಿರೋದಿಲ್ಲ.
ಪ್ರತಾಪ್ ಸಿಂಹ-ವಿಜಯೇಂದ್ರ ಭೇಟಿ ಏಕೆ..?
ಇನ್ನು ಪ್ರತಾಪ್ ಸಿಂಹ ಅವರು ವಿಜಯೇಂದ್ರ ಮತ್ತು ಆರ್ ಅಶೋಕ್ ಅವರ ಜೊತೆ ಭೇಟಿ ಮಾಡಿದ್ದಾರೆ. ಈ ವೇಳೆ ಯತ್ನಾಳ್ ಬಣದ ವಿಷಯವೂ ಚರ್ಚೆಗೆ ಬಂದಿದೆ ಎನ್ನಲಾಗಿದೆ. ಆದರೆ ಆರ್ ಅಶೋಕ್ ಈ ವಿಚಾರ ಎತ್ತಿದಾಗ, ಆಮೇಲೆ ನೋಡೋಣ, ಮೊದಲು ಮೈಸೂರು ಪ್ರತಿಭಟನೆ ವಿಷಯದ ಮಾಹಿತಿ ನೋಡೋಣ ಎಂದು ವಿಜಯೇಂದ್ರ ಅವರೇ ವಿಷಯ ತಿರುಗಿಸಿದರಂತೆ. ಆದರೆ ಅದಾದ ಮೇಲೆ ಭೇಟಿ ನಡೆದಿದೆ ಎನ್ನಲಾಗಿದೆ. ಏನು ಚರ್ಚೆಯಾಗಿದೆ ಅನ್ನೋದು ನಿಗೂಢವಾಗಿಯೇ ಇದೆ.



