ಚಕ್ರವರ್ತಿ ಸೂಲಿಬೆಲೆ. ಪ್ರಖರ ವಾಗ್ಮಿ. ಹಿಂದುತ್ವವಾದಿ. ಚಿಂತಕ. ಮೋದಿ ಪರ (ಬಿಜೆಪಿ ಪರ ಅಲ್ಲ) ಪ್ರಚಾರ ಮಾಡುವ ಸೂಲಿಬೆಲೆ ಅವರ ವಿರುದ್ಧ ಅಲ್ಪಸಂಖ್ಯಾತ ಆಯೋಗ ಸೀರಿಯಸ್ ಆಗಿದೆ. ಎಲ್ಲ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿ ಅಲ್ಪ ಸಂಖ್ಯಾತ ಆಯೋಗ ಪತ್ರ ಬರೆದಿದ್ದು, ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿ ಎಂದು ಸೂಚಿಸಿದೆ. ಎಫ್‌ಐಆರ್, ಸೂಲಿಬೆಲೆ ವಿರುದ್ಧ ತೆಗೆದುಕೊಂಡ ಕ್ರಮ, ಪ್ರಕರಣಗಳ ಬಗ್ಗೆ ಪ್ರಸ್ತುತ ಇರುವ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ. ಪತ್ರದಲ್ಲಿ ಸೂಚಿಸಿರುವಂತೆ ದಿನಾಂಕ 10ರಂದು ಬೆಳಗ್ಗೆ 10 ಗಂಟೆಯ ಒಳಗೆ ಎಲ್ಲ ಕೇಸುಗಳ ದಾಖಲೆ ಅಲ್ಪ ಸಂಖ್ಯಾತ ಆಯೋಗದ ಕೈಗೆ ಸಿಕ್ಕಿದ್ದರೂ ಸಿಕ್ಕಿರಬಹುದು.
ಚಕ್ರವರ್ತಿ ಸೂಲಿಬೆಲೆ ರಾಜಕೀಯ ನಾಯಕರಲ್ಲ. ಹಲವು ಬಾರಿ ಸೂಲಿಬೆಲೆ ಅವರಿಗೆ ಬಿಜೆಪಿ ಟಿಕೆಟ್ ಎಂದು ಸುದ್ದಿಯಾಗುತ್ತದೆ. ಸೂಲಿಬೆಲೆ ಅವರು ನಾನು ಚುನಾವಣಾ ರಾಜಕೀಯಕ್ಕೆ ಬರಲ್ಲ. ನಾನು ಕೇವಲ ಮೋದಿ ಪರ ಎಂದು ಹೇಳುತ್ತಾರೆ. ಅಂತಹ ಸೂಲಿಬೆಲೆ ಅವರ ಪರ ಬಸನಗೌಡ ಪಾಟೀಲ ಯತ್ನಾಳ್ ನಿಂತಿದ್ದಾರೆ. ಸೂಲಿಬೆಲೆ ಅವರ ಪರ ಟ್ವೀಟ್ ಮಾಡಿರುವ ಯತ್ನಾಳ್ ಅವರ ಮಾತಿನ ಒಟ್ಟಾರೆ ಸಾರಾಂಶ ಇಲ್ಲಿದೆ.
ವಾಗ್ಮಿ, ಯುವ ಬ್ರಿಗೇಡ್ ಸಂಸ್ಥಾಪಕರು, ರಾಷ್ಟ್ರೀಯವಾದಿ ಚಿಂತಕರು, ಅಂಕಣಕಾರರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರ ಮೇಲೆ ರಾಜ್ಯದಲ್ಲಿ ಹಾಕಿರುವ ಎಲ್ಲ FIR ಗಳನ್ನು ಕ್ರೂಢೀಕರಿಸಿ ಕಳುಹಿಸಬೇಕೆಂದು ರಾಜ್ಯದ ಎಲ್ಲ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸರ್ಕಾರ ಹೊರಡಿಸಿರುವ ಆದೇಶ ದ್ವೇಷಪೂರಿತ ಹಾಗೂ ಮೂರ್ಖತನದ ನಿರ್ಧಾರ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ರಾಷ್ಟ್ರ್ಯವ್ಯಾಪಿ ಚರ್ಚೆಯಾಗಿ ಇದಕ್ಕೆ ನೇರ ಮುಖ್ಯ ಮಂತ್ರಿಗಳು ಹಾಗೂ ಉಪ ಮುಖ್ಯ ಮಂತ್ರಿಗಳೇ ಕಾರಣ ಎಂಬುದಕ್ಕೆ ಮಾಧ್ಯಮಗಳ ನಿರಂತರ ವರದಿ, ಸರ್ಕಾರದ ಹಲವು ಇಲಾಖೆಗಳಲ್ಲಿ ನಡೆದ ಪತ್ರ ವ್ಯವಹಾರ ಬಹಿರಂಗ ಗೊಳಿಸಿದೆ. ಕಾಲ್ತುಳಿತ ಪ್ರಕರಣದಲ್ಲಿ ನೈತಿಕ ಜವಾಬ್ದಾರಿಯನ್ನು ಹೊತ್ತು ರಾಜೀನಾಮೆ ಸಲ್ಲಿಸಬೇಕಾಗಿದ್ದ ಬೆಂಗಳೂರು ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಜನರ ಮನಸ್ಸಿನಿಂದ ಈ ಪ್ರಕರಣವನ್ನು ಮರೆಸಲು ಚಕ್ರವರ್ತಿ ಅವರ ಮೇಲೆ ಹಾಕಿರುವ FIR ಕ್ರೂಢೀಕರಿಸಿ ಮಾಹಿತಿ ನೀಡುವಂತೆ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡದಲ್ಲಿ ನಡು ರಾತ್ರಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು, ಹಿಂದೂ ಮುಖಂಡರು, ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡುವುದು, ನೋಟೀಸು ನೀಡುವುದು, ಸುಳ್ಳು ಪ್ರಕರಣ ದಾಖಲಿಸುವುದು ನಡೆದ ಬೆನ್ನಲ್ಲೇ ಈಗ ಚಕ್ರವರ್ತಿಗಳ ಮೇಲೆ ಸರ್ಕಾರದ ವಕ್ರ ದೃಷ್ಟಿ ಬೀರಿದೆ. ಚಕ್ರವರ್ತಿಗಳ ಮೇಲೆ ಬಲವಂತದ ಕ್ರಮ ಜರುಗಿಸಿದರೆ ಹಿಂದೂ ಕಾರ್ಯಕರ್ತರು, ರಾಷ್ಟ್ರೀಯವಾದಿಗಳು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂಬುದಾಗಿ ಸಮಸ್ತ ಹಿಂದೂ ಕಾರ್ಯಕರ್ತರು, ರಾಷ್ಟ್ರೀಯವಾದಿಗಳು ಪರವಾಗಿ ಉಚ್ಚರಿಸುತ್ತೇನೆ.
ಅಂದರೆ ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಆಕ್ಷನ್ ತಗೊಂಡು ರಾಜೀನಾಮೆ ಕೊಡಿ. ಸಿದ್ದರಾಮಯ್ಯ ರಾಜಕೀಯ ಸಲಹೆಗಾರನಾಗಿದ್ದ ಗೋವಿಂದರಾಜುನನ್ನು ಬಂಧಿಸಿ. ಅದನ್ನು ಬಿಟ್ಟು ರಾಷ್ಟ್ರೀಯವಾದಿಗಳ ಮೇಲೆ ಕಣ್ಣು ಹಾಕಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಯತ್ನಾಳ್.



