ಯತ್ನಾಳ್ V/S ವಿಜಯೇಂದ್ರ ಹೋರಾಟ ದಿನದಿನಕ್ಕೂ ರೋಚಕ ತಿರುವು ಪಡೆಯುತ್ತಿದೆ. ಆರ್ ಎಸ್ ಎಸ್ ಮಧ್ಯಪ್ರವೇಶದ ನಂತರ ಭಿನ್ಮಮತೀಯರ ಸಭೆಗಳೂ ನಿಂತಿಲ್ಲ. ಬದಲಿಗೆ ಈಗ ಬಹಿರಂಗವಾಗಿ ನಡೆಯುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ತಿರುಗಿಬಿದ್ದಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಬಿಜೆಪಿ ಅತೃಪ್ತರ ಬಣ ಬೆಂಗಳೂರು, ಬೆಳಗಾವಿ ಬಳಿಕ ಇದೀಗ ದಾವಣಗೆರೆಯಲ್ಲಿ ಗೌಪ್ಯ ಸಭೆ ನಡೆಸಿದೆ. ಇದು ಅತೃಪ್ತರ 3ನೇ ಸಭೆ.
ದಾವಣಗೆರೆಯ ಜಿಎಂಐಟಿ ಅತಿಥಿ ಗೃಹದಲ್ಲಿ ಬೆಳಗ್ಗೆ ಸುಮಾರು 9.30ರಿಂದ 1.30ರವರೆಗೆ ನಡೆದ ಈ ಸಭೆಗೆ ಎಂದಿನಂತೆ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವವಿತ್ತು. ಸಂಸದರಾದ ಪ್ರತಾಪ ಸಿಂಹ, ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ, ದಾವಣಗೆರೆ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಕೆಲ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು. ಉಳಿದ ನಾಯಕರು ದೂರ ಇದ್ದದ್ದಕ್ಕೆ ಕಾರಣ ದಿಢೀರ್ ಎಂದು ನಡೆದ ಸಭೆಯೋ.. ಅಥವಾ ಬೇರೇನಾದರೂ ಇತ್ತೋ.. ಎಂಬ ಬಗ್ಗೆ ಮಾಹಿತಿ ಇಲ್ಲ. ಹಿಂದೆ ನಡೆದ ಅತೃಪ್ತರ ಸಭೆಯಲ್ಲಿ ಮುಂಚೂಣಿಯಲ್ಲಿದ್ದ ಮತ್ತು ಇತ್ತೀಚೆಗೆ ವಿಜಯೇಂದ್ರ ಅವರ ನಾಯಕತ್ವ ಒಪ್ಪುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹ ಸಭೆಯಲ್ಲಿ ಭಾಗವಹಿಸುತ್ತಾರೆಂದು ಹೇಳಲಾಗಿತ್ತಾದರೂ ಅವರು ಸಭೆಗೆ ಗೈರಾಗಿದ್ದರು.
ಇನ್ನು ಸಭೆಯ ನಂತರ ಮಾತನಾಡಿದ ಯತ್ನಾಳ್ ಇದು ಅತೃಪ್ತರ ಅಥವಾ ಭಿನ್ನಮತೀಯರ ಸಭೆ ಅಲ್ಲ. ಅಸಮಾಧಾನಿತರ ಸಭೆ ಅಲ್ಲ. ರಾಜ್ಯಾಧ್ಯಕ್ಷರ ಬದಲಾವಣೆಗೆ ನಾವಂತೂ ಪಟ್ಟು ಹಿಡಿದಿಲ್ಲ. ಅದರ ಬಗ್ಗೆ ದಾವಣಗೆರೆಯಲ್ಲಿ ನಾವು ಚರ್ಚಿಸಿಯೂ ಇಲ್ಲ ಎಂದರಲ್ಲದೆ ಹೇಳಬೇಕಾದ್ದನ್ನು ನಾವು 38 ಜನ ಒಟ್ಟಾಗಿ ಹೇಳಬೇಕಾದ ಸ್ಥಳದಲ್ಲಿ ಹೇಳಿದ್ದೇವೆ. ಮುಂದಿನದ್ದು ಹೈಕಮಾಂಡಿಗೆ ಬಿಟ್ಟಿದ್ದು ಎಂದರು. ವಿಜಯೇಂದ್ರ ಅವರಿಗೆ ಚಿತ್ರದುರ್ಗದಲ್ಲಿ ಒಮ್ಮೆ, ಅವರ ಮನೆಯಲ್ಲೇ ಮತ್ತೊಮ್ಮೆ ಸಂಸ್ಕಾರ ಆಗಿದೆ ಎಂದ ಯತ್ನಾಳ್, ಟೀಕೆಯ ಮತ್ತೊಂದು ಮುಖವನ್ನೂ ತೆರೆದಿಟ್ಟರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ಥಾನ ಬದಲಾವಣೆಗೆ ವಿಚಾರದ ಬಗ್ಗೆ ನಮ್ಮದೇ ಒಂದು ತಂಡವಿದೆ ಅವರು ಪ್ರತಿಕ್ರಿಯೆ ನೀಡುತ್ತಾರೆ. ವಿಜಯೇಂದ್ರ ಗ್ರೇಟ್ ಲೀಡರ್ ಇದ್ದಾರೆ, ಸ್ವಲ್ಪ ದಿನ ಕಾಯಿರಿ ಎಲ್ಲವೂ ಸರಿಯಾಗುತ್ತದೆ ಎಂದ ಅವರು, ಪರೋಕ್ಷವಾಗಿ ವಿಜಯೇಂದ್ರ ಬದಲಾವಣೆಯ ಸೂಚನೆಯನ್ನೂ ಕೊಟ್ಟರು.
ಇನ್ನು ಇದಾದ ಬಳಿಕ ವಿಜಯಪುರದಲ್ಲಿ ಮಾತನಾಡಿರುವ ಯತ್ನಾಳ್ ರಾಜಕಾರಣದಲ್ಲಿ ಪ್ರಾಮಾಣಿಕರಿಗೆ ಭವಿಷ್ಯವಿಲ್ಲ. ಕಳೆದ ಬಾರಿ ನನ್ನನ್ನು ಮಂತ್ರಿ ಮಾಡಲಿಲ್ಲ. ಮಂತ್ರಿಯಾದರೆ ಮುಂದೆ ಮುಖ್ಯಮಂತ್ರಿ ಆಗುತ್ತೇನೆಂದು ಮಾಡಲಿಲ್ಲ. ಯಾವುದಕ್ಕೂ ನಾನು ಹೆದರುವವನಲ್ಲ. ಹೊಸ ಅಧ್ಯಾಯ ಪ್ರಾರಂಭಿಸಲು ಕಾಲ ಕೂಡಿ ಬಂದಿದೆ. ತಾವೆಲ್ಲ ಆಶೀರ್ವಾದ ಮಾಡಬೇಕು. ಮುಂದಿನ ದಿನಗಳಲ್ಲಿ ತಾನು ಬಿಜೆಪಿಯಿಂದ ಸಿಎಂ ಆಗುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.
ಆದರೆ ಇದಕ್ಕೆಲ್ಲ ವಿಜಯೇಂದ್ರ ಕೊಟ್ಟಿರುವ ಉತ್ತರವೇ ಬೇರೆ. ಇಂತಹವೆಲ್ಲ ನನಗೆ ಹೊಸದಲ್ಲ. ಸಮಸ್ಯೆಗೆ ಹೆದರಿ ಓಡಿ ಹೋಗಲ್ಲ. ಧೈರ್ಯವಾಗಿ ಎದುರಿಸುತ್ತೇನೆ ಎಂದಿದ್ದಾರೆ. ತಾನು ತನ್ನ ತಂದೆ ಯಡಿಯೂರಪ್ಪ ಎದುರಿಸಿದ ಸಮಸ್ಯೆಗಳನ್ನೆಲ್ಲ ನೋಡಿಕೊಂಡೇ ಬೆಳೆದವನು. ಸಮಸ್ಯೆ ಹೆಚ್ಚಾದಷ್ಟೂ ನನಗೆ ನನ್ನ ಮೇಲೆ ವಿಶ್ವಾಸ ಹೆಚ್ಚುತ್ತಾ ಹೋಗುತ್ತದೆ ಎಂದಿದ್ದಾರೆ ವಿಜಯೇಂದ್ರ.



