ದೆಹಲಿಯಿಂದ ವಾಪಸ್ ಬಂದ ಮೇಲೆಯೂ ಯತ್ನಾಳ್ ವರಸೆ ಬದಲಾಗಿಲ್ಲ, ಬಿವೈ ವಿಜಯೇಂದ್ರ ವಿರುದ್ಧ ಹೋರಾಟ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ, ಯತ್ನಾಳ್ ಪಟ್ಟು ಸಡಿಲಿಸಿಲ್ಲ, ಹೊಸ ಅಜೆಂಡಾದೊಂದಿಗೆ ಬಿವೈ ವಿಜಯೇಂದ್ರ ವಿರುದ್ಧ ಮತ್ತೊಂದು ಸಮರಕ್ಕೆ ಸಜ್ಜಾಗಿದ್ದಾರೆ.. ಯಡಿಯೂರಪ್ಪ ಪುತ್ರನ ವಿರುದ್ಧ ಲಿಂಗಾಯತ ಅಸ್ತ್ರವನ್ನು ಹೂಡಿದ್ದಾರೆ. ಅದು ಲಿಂಗಾಯತ ಅಸ್ತ್ರ.
ಯತ್ನಾಳ್ ಪ್ಲಾನ್ ಪ್ರಕಾರ ಲಿಂಗಾಯತ ಸಮುದಾಯದ ವಿಜಯೇಂದ್ರಗೆ ಪಟ್ಟ ಕಟ್ಟುವುದಾದ್ರೆ, ಅದೇ ಲಿಂಗಾಯತ ಸಮುದಾಯದ ಬೇರೆ ನಾಯಕರು ಇದ್ದಾರೆ. ಅವರಿಗೆ ಯಾಕೆ ಅಧ್ಯಕ್ಷ ಸ್ಥಾನ ಕೊಡಬಾರದು ಅನ್ನೋದು ಯತ್ನಾಳ್ ವಾದ. ಸಭೆಯಲ್ಲೂ ಕೂಡ ಅದೇ ಚರ್ಚೆಯಾಗಿರುವುದು, ರಾಜ್ಯಾಧ್ಯಕ್ಷ ಸ್ಥಾನವನ್ನು ಅದೇ ಸಮುದಾಯದ ನಾಯಕರಾದ ವಿ ಸೋಮಣ್ಣ ಅಥವಾ ಬಸವರಾಜ ಬೊಮ್ಮಾಯಿ ಅವರಿಗೆ ನಾಯಕತ್ವ ನೀಡಿ ಎಂಬ ಸಂದೇಶವನ್ನು ರೆಬೆಲ್ ಟೀಂ ನೀಡುತ್ತಿದೆ.
ಹೌದು. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಸ್ಪರ್ಧೆ ಮಾಡಲು ನಮ್ಮ ಬಣವೂ ರೆಡಿ ಇದೆ ಎಂದು ಈ ಹಿಂದೆಯೇ ಸಾರಿ ಸಾರಿ ಹೇಳಿದ್ದ ಯತ್ನಾಳ್, ಲಿಂಗಾಯತ ಕೋಟಾ ಅಂತಾ ಬಂದ್ರೆ ಐ ಆ್ಯಮ್ ರೆಡಿ ಅಂತಾನೂ ಮೆಸೇಜ್ ಪಾಸ್ ಮಾಡಿದ್ದರು.
ವಿ ಸೋಮಣ್ಣ ಸಂದೇಶ ಏನು..?
ವಿ ಸೋಮಣ್ಣ ಅವರು ಸದ್ಯಕ್ಕೆ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ರಾಜ್ಯ ರಾಜಕೀಯದಲ್ಲಿ ಅವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಹಿನ್ನಡೆ ಆಗಿತ್ತು. ಕ್ಷೇತ್ರ ತ್ಯಾಗ ಮಾಡಿ ಎರಡು ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಸೋಲನ್ನು ಕಂಡಿದ್ದರು. ಬಳಿಕ ತುಮಕೂರಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಇದೀಗ ಕೇಂದ್ರ ಸಚಿವರಾಗಿದ್ದಾರೆ. ಹೀಗಿರುವಾಗ ಅವರು ರಾಜ್ಯ ರಾಜಕಾರಣಕ್ಕೆ ಮರಳಿ ಬರಲು ಇಚ್ಚಿಸುತ್ತಾರಾ? ಇದು ಈಗಿನ ಪ್ರಶ್ನೆ. ಅಲ್ಲದೆ ಸೋಮಣ್ಣ, ರಾಜಕೀಯ ಜೀವನದ ಕೊನೆಯಲ್ಲಿದ್ದಾರೆ. ಸೋಮಣ್ಣ ಅವರಿಗೆ ತಮ್ಮ ಶಕ್ತಿ, ಸಾಮರ್ಥ್ಯ ಏನು.. ಎಷ್ಟು ಎನ್ನುವುದು ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ ಅವರು ತಾವು ನೇತೃತ್ವ ವಹಿಸುವುದಕ್ಕೆ ಸಿದ್ಧರಾಗಿಲ್ಲ.
ಬೊಮ್ಮಾಯಿ ನಡೆ ಏನು..?
ಇನ್ನು ಬಸವರಾಜ ಬೊಮ್ಮಾಯಿಯವರೂ ಅಷ್ಟೇ, ಈ ಹಿಂದೆ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸುವ ಮಾತು ಬಿಡಿ, ಲಿಂಗಾಯತ ಸಮುದಾಯವೂ ದೂರವಾಗುವಂತೆ ಆಗಿದೆ. ಚುನಾವಣೆಯಲ್ಲಿ ಶಿಗ್ಗಾಂವಿ ಬಿಟ್ಟು ಕದಲದೆ, ಹರಸಾಹಸ ಪಟ್ಟು ಗೆದ್ದಿದ್ದ ಬೊಮ್ಮಾಯಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಂಸದರೂ ಆಗಿದ್ದಾರೆ. ಆದರೆ ತಮ್ಮ ಮಗನಿಗೇ ಟಿಕೆಟ್ ಕೊಡಿಸಿ, ಅವರನ್ನು ಗೆಲ್ಲಿಸಿಕೊಳ್ಳಲಾಗದೆ ಸೋತಿದ್ದಾರೆ. ಅಧಿಕಾರ ಸಿಕ್ಕಾಗಲೇ ಫೇಲ್ ಆದ ಬೊಮ್ಮಾಯಿ ಅವರಿಗೆ, ನಾಯಕತ್ವ ವಹಿಸಿಕೊಂಡು ಮತ್ತೊಮ್ಮೆ ಸೋತರೆ ರಾಜಕೀಯ ಜೀವನವೇ ಅಂತ್ಯ ಎಂಬ ಭಯವಿದೆ. ಅವರೂ ನಾಯಕತ್ವಕ್ಕೆ ಸಿದ್ಧರಾಗಿಲ್ಲ.
100 ನಾಯಕರು ದೆಹಲಿಗೆ : ಯತ್ನಾಳ್ ಪ್ಲಾನ್..!
ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲಿಂಗಾಯತ ಮುಖಂಡರನ್ನು ಒಳಗೊಂಡು 100 ಮಂದಿಯ ನಿಯೋಗವನ್ನು ದೆಹಲಿಗೆ ಕರೆದೊಯ್ಯಲು ಪ್ಲ್ಯಾನ್ ಮಾಡುತ್ತಿದ್ದಾರೆ. ಪ್ರತಿ ಜಿಲ್ಲೆಯಿಂದ ಇಬ್ಬರಿಂದ ಮೂವರು ಲಿಂಗಾಯತ ನಾಯಕರನ್ನು ಒಗ್ಗೂಡಿಸಿದ ಸುಮಾರು 100 ಮಂದಿಯ ನಿಯೋಗವನ್ನು ದೆಹಲಿಗೆ ಕರೆದೊಯ್ಯಲಿದ್ದಾರೆ. ಬಳಿಕ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ವಿಜಯೇಂದ್ರ ವಿರುದ್ಧ ದೂರು ನೀಡುವುದು ಯತ್ನಾಳ್ ಯೋಜನೆ ಆಗಿದೆ. ಆದರೆ 100 ನಾಯಕರನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಯಶಸ್ಸು ಕಾಣುತ್ತಿಲ್ಲ. ಯತ್ನಾಳ್ ಬಣದ ನಾಯಕರು ಮೊದಲು ಎಷ್ಟಿತ್ತೋ.. ಅಷ್ಟೆಯೇ ಇದೆ. ಕೆಲವು ನಾಯಕರಂತೂ ಯತ್ನಾಳ್ ಬಣದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಆದರೆ ಯತ್ನಾಳ್ ಬಗ್ಗುತ್ತಿಲ್ಲ.



