ಬಿಜೆಪಿಯಲ್ಲಿ ತಿಕ್ಕಾಟಗಳು ಜೋರಾಗಿರುವಾಗಲೇ ಕೇಂದ್ರ ಸಚಿವ ಕುಮಾರಸ್ವಾಮಿ, ಬಸನಗೌಡ ಪಾಟೀಲ ಯತ್ನಾಳ್ ನಡುವೆ ಸುಮಾರು 20 ನಿಮಿಷ ಕಾಲ ಸುದೀರ್ಘ ಮಾತುಕತೆ ಆಗಿದೆ. ಇದು ಪ್ಲಾನ್ ಆಗಿ ನಡೆದ ಮೀಟಿಂಗ್ ಅಲ್ಲ. ಆದರೆ.. ಬಿಜೆಪಿಯ ಸಭೆಗೆ ಆಬ್ಸೆಂಟ್ ಆಗಿರುವವರ ಹಿಂದೆ ಯತ್ನಾಳ್ ಇರುವುದು ಗೊತ್ತಿರುವಾಗಲೇ, ಯತ್ನಾಳ್-ಕುಮಾರಸ್ವಾಮಿ ಕುತೂಹಲ ಹುಟ್ಟುಹಾಕಿದೆ. ಇದರ ನಡುವೆ ವಿಜಯೇಂದ್ರಗೆ ಯಾವುದೋ ಸಂದೇಶ ಇದೆ ಎನ್ನಲಾಗುತ್ತಿದೆ. ಹಾಗೆಂದು ಯತ್ನಾಳ್-ಕುಮಾರಸ್ವಾಮಿ ದೂರ ದೂರವೇ ಇದ್ದವರೇನಲ್ಲ. ಯತ್ನಾಳ್ ಈ ಹಿಂದೆ ಬಿಜೆಪಿ ಬಿಟ್ಟಿದ್ದಾಗ, ಕುಮಾರಸ್ವಾಮಿಯವರೇ ಆಶ್ರಯ ಕೊಟ್ಟಿದ್ದರು.
ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಯತ್ನಾಳ್ ಮತ್ತು ಕುಮಾರಸ್ವಾಮಿ ಪರಸ್ಪರ ಭೇಟಿಯಾಗಿದ್ದಾರೆ. ಆ ಭೇಟಿ ಕೇವಲ ಹಲೋ.. ಹಲೋ.. ಹೇಗಿದ್ದೀರಾ.. ಎಂಬ ಮಾತುಕತೆಗಷ್ಟೇ ಮುಗಿದಿಲ್ಲ. ಇಬ್ಬರೂ ಅಕ್ಕ ಪಕ್ಕ ಇದ್ದವರನ್ನು ದೂರ ನಿಲ್ಲಿಸಿ, ಸುಮಾರು 20 ನಿಮಿಷ ಮಾತುಕತೆ ನಡೆಸಿದ್ದಾರೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಈ ಚರ್ಚೆಯ ಹಿಂದೆ ಯಾವುದೊ ರಾಜಕೀಯ ವಿಷಯಗಳಿವೆಯೇ? ಅಥವಾ ಕೇವಲ ಕುಶಲ ಮಾತುಕತೆಯೇ? ಎಂಬುದರ ಬಗ್ಗೆ ಮಾಹಿತಿ ದೊರೆತಿಲ್ಲ, ಇಬ್ಬರು ನಾಯಕರ ಮಧ್ಯೆ ನಡೆದ ಈ ಸಂಭಾಷಣೆ ಮುಂದಿನ ದಿನಗಳಲ್ಲಿ ಹೊಸ ರಾಜಕೀಯ ಬೆಳವಣಿಗೆ ಆಗಲಿದೆಯೇ ? ಎಂಬ ಗೊಂದಲ ರಾಜಕೀಯದಲ್ಲಿ ಉಂಟಾಗಿದೆ.
ಯತ್ನಾಳ್ ಅವರು ಬಿಜೆಪಿಯ ಕೆಲ ನಾಯಕರ ವಿರುದ್ಧ ಅಸಮಾಧಾನ ಹೊಂದಿರುವ ಈ ಸಮಯದಲ್ಲಿ, ಈ ಭೇಟಿಯು ರಾಜಕೀಯ ವಲಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ.
ಹಳೆಯ ಸಂಘರ್ಷಗಳು: ಹಿಂದೆ ಯತ್ನಾಳ್ ಅವರು ಕುಮಾರಸ್ವಾಮಿ ಅವರಿಗೆ “ಬ್ಲ್ಯಾಕ್‌ಮೇಲ್ ಮಾಡುವುದು ಚಟ” ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಅವರು “ಯತ್ನಾಳ್ ಅವರು ಜೆಡಿಎಸ್ ಅಸ್ತಿತ್ವದ ಬಗ್ಗೆ ಮಾತನಾಡುವ ಬದಲು ತಮ್ಮ ಪಕ್ಷದ ಬಗ್ಗೆ ಗಮನ ಹರಿಸಲಿ” ಎಂದು ತಿರುಗೇಟು ನೀಡಿದ್ದರು.
ಪ್ರಸ್ತುತ ರಾಜಕೀಯ ಸ್ಥಿತಿ: ಯತ್ನಾಳ್ ಅವರು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರೊಂದಿಗಿನ ಇತ್ತೀಚಿನ ಮೃದು ಧೋರಣೆ ಮತ್ತು ಭೇಟಿ ಮಹತ್ವ ಪಡೆದುಕೊಂಡಿದೆ.
ಇತ್ತೀಚೆಗೆ ನಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪಕ್ಷದ ಪ್ರಮುಖ ಸಭೆಗಳಿಂದ ರೆಬೆಲ್ (ಅತೃಪ್ತ) ನಾಯಕರು ದೂರ ಉಳಿದಿದ್ದರು.ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿಯ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ 1250ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಆದರೆ, ವಿಜಯೇಂದ್ರ ನಾಯಕತ್ವವನ್ನು ವಿರೋಧಿಸುತ್ತಿರುವ ನಾಯಕರು ಗೈರಾಗಿದ್ದರು. ಈ ಬಾರಿ ರೆಬಲ್ ಗುಂಪಿನ ಲೀಡರ್ ಆಗಿರುರುವುದು ರಮೇಶ್ ಜಾರಕಿಹೊಳಿ.
ಇನ್ನು ಯತ್ನಾಳ್ ಮತ್ತು ಕುಮಾರಸ್ವಾಮಿ ಭೇಟಿಯ ನಂತರ ಯತ್ನಾಳ್ ಯತೀಂದ್ರ ಕೂಡ ವಸೂಲಿ ಕಂಪನಿಯಾಗಿದ್ದಾನೆ. ವಿಜಯೇಂದ್ರ ಹೇಗೆ ಯಡ್ಡಿಯೂರಪ್ಪ ಸಿಎಂ ಇದ್ದಾಗ ವಸೂಲಿ ಮಾಡಿದ್ದ. ಹಾಗೆ ಸಿದ್ದರಾಮಯ್ಯ ಮಗ ಕೂಡ ವಿಜಯೇಂದ್ರ ಹಾಗೆ ವಸೂಲಿಗೆ ನಿಂತಿದ್ದಾನೆ. ವಿಜಯೇಂದ್ರ ಕಡೆ ರಾತ್ರಿ ಟ್ರೇನಿಂಗ್ ತೆಗೆದುಕೊಳ್ಳುತ್ತಾನಂತೆ. ಹೇಗೆ ನಕಲಿ ಸಹಿ ಮಾಡಬೇಕು ಅಂತ ತಿಳಿಸಿಕೊಳ್ಳುತ್ತಿದ್ದಾನೆ ಟ್ರೇನಿಂಗ್ ಕೊಡುವ ಮಾಸ್ಟರ್ ನಮ್ಮವನೇ. ಹೀಗಾಗಿ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡುವುದಿಲ್ಲ, ಡಿಕೆಶಿ ಸಿಎಂ ಆಗುವುದಿಲ್ಲ. ವಿಧಾನಸಭೆ ವಿಸರ್ಜನೆ ನಿಶ್ಚಿತ ಎಂದಿದ್ದಾರೆ. ಇದು ಬೇರೆಯದೇ ಸಂದೇಶ ಕೊಟ್ಟಿದೆ.



