ಬಿಜೆಪಿ ರೆಬೆಲ್ ತಂಡ ಮತ್ತಷ್ಟು ಸಕ್ರಿಯವಾಗಿದೆ. ಶಾಸಕ ಬಸನಗೌಡ ಪಾಟೀಲ್ ನೇತೃತ್ವದಲ್ಲಿ ವಕ್ಫ್ ಜನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು, ಬೀದರ್‌ನಿಂದ ಚಾಮರಾಜನಗರದ ವರೆಗೆ ಇದು ನಡೆಯಲಿದೆ. ಇನ್ನೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ವಕ್ಫ್ ವಿವಾದಕ್ಕೆ ಸಂಬಂಧಪಟ್ಟಂತೆ ’ನಮ್ಮ ಭೂಮಿ – ನಮ್ಮ ಹಕ್ಕು’ ಎಂಬ ಘೋಷವಾಕ್ಯದಡಿ ಮೂರು ತಂಡಗಳನ್ನು ರಚಿಸಲಾಗಿದ್ದು, ಮೂರು ತಂಡಗಳಲ್ಲಿ ಯತ್ನಾಳ್ ಬಣದ ನಾಯಕರೂ ಇದ್ದಾರೆ.
ರಮೇಶ್ ಜಾರಕಿಹೊಳಿ ಇರುವ ತಂಡಕ್ಕೆ ವಿಜಯೇಂದ್ರರದ್ದೇ ನೇತೃತ್ವ : ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಎಂದು ನಾನು ಒಪ್ಪುವುದೇ ಇಲ್ಲ ಎಂದಿದ್ದ ರಮೇಶ್ ಜಾರಕಿಹೊಳಿ ಅವರ ಹೆಸರು ತಂಡ – 1ರಲ್ಲಿದೆ. ಈ ತಂಡವನ್ನು ಮುನ್ನಡೆಸುವವರು ಖುದ್ದು ವಿಜಯೇಂದ್ರ ಅವರೇ.
ಆರ್.ಅಶೋಕ್ ನೇತೃತ್ವದ ತಂಡದಲ್ಲಿ ಯತ್ನಾಳ್ :
ವಿಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದ ತಂಡ – 2ರಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರಿದೆ. ಯತ್ನಾಳ್ ಕಣ್ಣಿಟ್ಟಿರುವುದು ಆರ್.ಅಶೋಕ್ ಅವರಿಗೆ ನೀಡಲಾಗಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನದ ಮೇಲೆ.
ಛಲವಾದಿ ನಾರಾಯಣ ಸ್ವಾಮಿ ತಂಡದಲ್ಲಿ ಲಿಂಬಾವಳಿ :
ಪರಿಷತ್ತಿನಲ್ಲಿ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿನ ತಂಡ – 3ರಲ್ಲಿ ಅರವಿಂದ ಲಿಂಬಾವಳಿಯವರ ಹೆಸರು ಕೂಡಾ ಇದೆ. ಲಿಂಬಾವಳಿ ಅವರು ಛಲವಾದಿ ನಾರಾಯಣ ಸ್ವಾಮಿ ಅವರ ವಿರುದ್ಧ ಇದ್ದಾರೆ. ಏಕೆಂದರೆ ಪಕ್ಷದಲ್ಲಿ ತಮ್ಮ ಪಟ್ಟಕ್ಕೆ ಅವರು ಬಂದಿದ್ದಾರೆ ಎನ್ನುವುದು ಅವರ ಅಸಮಾಧಾನ.
ಮೊದಲ ತಂಡಕ್ಕೆ ಪಿ.ರಾಜೀವ್, ಎರಡನೇ ತಂಡಕ್ಕೆ ಪ್ರೀತಂ ಗೌಡ ಮತ್ತು ಮೂರನೇ ತಂಡಕ್ಕೆ ವಿ.ಸುನೀಲ್ ಕುಮಾರ್ ಸಂಚಾಲಕರಾಗಿದ್ದಾರೆ. “ರಾಜ್ಯದಾದ್ಯಂತ ರೈತರು ಹಾಗೂ ಮಠ-ಮಂದಿರಗಳ ಪಹಣಿಗಳಲ್ಲಿ ಸರ್ಕಾರದಿಂದ ವಕ್ಫ್ ಆಸ್ತಿ ಎಂದು ನಮೂದಿಸಿರುವುದರ ನೈಜ ವರದಿ ಸಂಗ್ರಹಿಸಲು “ನಮ್ಮ ಭೂಮಿ-ನಮ್ಮ ಹಕ್ಕು” ಎಂಬ ಘೋಷವಾಕ್ಯದಡಿ 3 ತಂಡಗಳನ್ನು ರಚಿಸಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ” ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಆದರೆ ಇದಕ್ಕೂ ಮೊದಲೇ ಯತ್ನಾಳ್ ಟೀಂ , ಬೀದರ್‌ನಿಂದ ಚಾಮರಾಜನಗರದ ವರೆಗೆ ವಕ್ಫ್ ಜನ ಜಾಗೃತಿ ಜಾಥಾ ನಡೆಸಲಿದೆ. ವಕ್ಫ್ ಜಾಥಾದ ಮೂಲಕ ರೆಬೆಲ್ ತಂಡ ತಮ್ಮ ಶಕ್ತಿ ಪ್ರದರ್ಶನವನ್ನು ಮಾಡಲಿದೆ.ಬಿಜೆಪಿ ನೇತೃತ್ವದಲ್ಲೇ ಜಾಥಾ ನಡೆಯಲಿದೆ ಎಂದು ಯತ್ನಾಳ್ ಹಾಗೂ ತಂಡ ಹೇಳಿಕೊಳ್ಳುತ್ತಿದೆ. ಆದರೆ ಇದರಲ್ಲಿ ಭಾಗಿಯಾಗುತ್ತಿರುವ ನಾಯಕರ ಪೈಕಿ ವಿಜಯೇಂದ್ರ ವಿರೋಧಿ ಬಣದ ಹೆಸರುಗಳೇ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಯತ್ನಾಳ್ ಜಾಥಾ ರಾಜಕೀಯ ವಲಯದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
ವಿಜಯೇಂದ್ರ ಜಾಣ ನಡೆ : ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಭಿನ್ನಮತೀಯ ಕ್ಯಾಂಪ್ ನಲ್ಲಿ ಗುರುತಿಸಿಕೊಂಡಿರುವ ನಾಯಕರು ಮಾಜಿ ಶಾಸಕ ಕುಮಾರ್ ಬಂಗಾರಪ್ಪನವರ ನಿವಾಸದಲ್ಲಿ ಸಭೆ ಸೇರಿದ್ದರು. ಸಭೆಯ ಉದ್ದೇಶ, ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ಜನ ಜಾಗೃತಿ ಮೂಡಿಸುವುದು. “ವಕ್ಫ್ ಜನ ಜಾಗೃತಿ ಅಭಿಯಾನ ನಡೆಸುತ್ತೇವೆ. ರಾಜ್ಯಾಧ್ಯಕ್ಷರು ಆದಿಯಾಗಿ ಯಾರಿಗೆಲ್ಲಾ ಇದರ ಬಗ್ಗೆ ಕಳಕಳಿ ಇದ್ದರೆ ಬರಲಿ, ಇಲ್ಲಾಂದರೆ ಬಿಡಲಿ, ಬಿಜೆಪಿ ಪಕ್ಷದಿಂದಲೇ ಈ ಹೋರಾಟ ನಡೆಯಲಿದೆ” ಎಂದು ಹೇಳಿಕೆ ಕೊಟ್ಟಿದ್ದರು ಯತ್ನಾಳ್.
ಆದರೆ ವಿಜಯೇಂದ್ರ ಜಾಣ ನಡೆ ಇಟ್ಟಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ತಾವೇ ಒಂದು ಕಮಿಟಿ ರಚನೆ ಮಾಡಿ, ರೂಪುರೇಷೆ ರೂಪಿಸಿದ್ದಾರೆ. ವಿಜಯೇಂದ್ರ ಅವರನ್ನು ಟಾರ್ಗೆಟ್ ಮಾಡಲೆಂದೇ ಆಯೋಜಿಸಲಾಗಿದ್ದಂತಹ ಈ ಸಭೆ ನಡೆದ ದಿನವೇ, ಬಿಜೆಪಿ ರಾಜ್ಯಾಧ್ಯಕ್ಷರು ಕೌಂಟರ್ ಅನ್ನು ಕೊಟ್ಟಿದ್ದಾರೆ. ರಾಜ್ಯಾಧ್ಯಕ್ಷರಾಗಿ, ತಮಗಿರುವ ಹಕ್ಕನ್ನು ಚಲಾಯಿಸಿದ್ದಾರೆ.
ಈತ ಸಂದಿಗ್ಧ ಸ್ಥಿತಿಯಲ್ಲಿರುವುದು ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ. ಪಕ್ಷದ ರಾಜ್ಯಾಧ್ಯಕ್ಷರು ಘೋಷಿಸಿರುವ ತಂಡವನ್ನು ಬಿಟ್ಟು ಪ್ರತ್ಯೇಕವಾಗಿ ಹೋಗಬೇಕೋ.. ಅಥವಾ ಪಕ್ಷದ ಸೂಚನೆಯಂತೆ ನಡೆಯಬೇಕೋ ಎನ್ನುವುದು. ಪ್ರತ್ಯೇಕವಾಗಿ ಹೋದರೆ ಹೈಕಮಾಂಡ್ ಎದುರು ಮಾತನಾಡುವುದಕ್ಕೆ ಆಗದ ಸ್ಥಿತಿ. ಅಕಸ್ಮಾತ್ ಹೋದರೆ, ವಿಜಯೇಂದ್ರ ನಾಯಕತ್ವವನ್ನು ಒಪ್ಪಿಕೊಂಡಂತೆ. ಏನು ಮಾಡಿದರೂ ಕಷ್ಟ ಎನ್ನುವ ಪರಿಸ್ಥಿತಿ ಇದೆ.



