ವಿಜಯೇಂದ್ರ ಮತ್ತು ಯತ್ನಾಳ್ ಬಣದ ನಡುವೆ ಮುಸುಕಿನ ಗುದ್ದಾಟ ಎನ್ನುತ್ತಲೇ ಬಹಿರಂಗ ಸಮರ ನಡೆಯುತ್ತಿದೆ. ಆರ್‌ಎಸ್ ಎಸ್ ಸಭೆ ನಡೆಸಿದ್ದರೂ, ಬುದ್ದಿಮಾತು ಹೇಳಿದ್ದರೂ.. ಯಾವುದೂ ಸೈಲೆಂಟ್ ಆಗಿಲ್ಲ. ಏಕೆಂದರೆ ಆರ್‌ಎಸ್‌ಎಸ್ ಸಭೆಯಲ್ಲಿ ಯತ್ನಾಳ್, ಜಾರಕಿಹೊಳಿ, ಪ್ರತಾಪ್ ಸಿಂಹ, ಸಿಟಿ ರವಿ ಮೊದಲಾದವರ ಹೇಳಿಕೆಗಳನ್ನು ಆಲಿಸಿದ ಅರ್‌ಎಸ್‌ಎಸ್ ನಾಯಕರು, ಎರಡೂ ಕಡೆಯ ಒಳ್ಳೆಯ ಮತ್ತು ಕೆಟ್ಟ ನಡವಳಿಕೆಗಳನ್ನೂ ಪಟ್ಟಿ ಮಾಡಿದ್ದರು. ಇದು ಯತ್ನಾಳ್, ಜಾರಕಿಹೊಳಿ ಬಣವನ್ನು ಅಚ್ಚರಿಗೆ ದೂಡಿರುವುದು ನಿಜ. ಏಕೆಂದರೆ ಆರ್‌ಎಸ್‌ಎಸ್ ತಮ್ಮ ಪರವಾಗಿದೆ ಎಂದುಕೊಂಡಿದ್ದವರಿಗೆ, ತಾವು ಹೇಳಿದ್ದಕ್ಕೆಲ್ಲ ಯೆಸ್ ಎನ್ನುತ್ತದೆ ಎಂದುಕೊಂಡಿದ್ದವರಿಗೆ ಇದು.. ಇದು ಶಾಕ್ ಕೊಟ್ಟಿದೆ. ಹಾಗಂತ ವಿಜಯೇಂದ್ರ ಪರ ಗಟ್ಟಿಯಾಗಿ ನಿಂತುಕೊಂಡೂ ಇಲ್ಲ. ವಿಜಯೇಂದ್ರ ಅವರಿಗೂ ಬುದ್ದಿಮಾತು ಹೇಳಿದೆ.
ವಿಜಯೇಂದ್ರ ಪರ ಆರ್.ಎಸ್.ಎಸ್ ವಾದವೇನು..?
ವಿಜಯೇಂದ್ರ ಅವರಿಗೆ ಯಡಿಯೂರಪ್ಪ ಮಗ ಎಂಬ ಕಾರಣಕ್ಕೆ ಅಧ್ಯಕ್ಷ ಪಟ್ಟ ಸಿಕ್ಕಿಲ್ಲ. ಯಾರನ್ನು ಅಧ್ಯಕ್ಷರನ್ನಾಗಿ ಮಾಡಬಹುದು ಅಂತ ಹಲವು ನಾಯಕರ ಜೊತೆ ಮಾತುಕತೆ ನಡೆಸಿದಾಗ, ವಿಜಯೇಂದ್ರ ಅವರಿಗೆ 90% ಮಾರ್ಕು ಬಿದ್ದ ಕಾರಣಕ್ಕೇ ಅವರು ಅಧ್ಯಕ್ಷರಾಗಿದ್ದಾರೆ. ಬೇರೆಯವರು ಆ ಸಾಮರ್ಥ್ಯ ತೋರಿಸಿದ್ದರೆ, ಅವರೇ ಅಧ್ಯಕ್ಷರಾಗುತ್ತಿದ್ದರು. ಇಷ್ಟಕ್ಕೂ ಯಡಿಯೂರಪ್ಪ ಇಲ್ಲದೇ ಹೋದಾಗ.. ಬಿಜೆಪಿ ಯಾವ ಸ್ಥಿತಿಗೆ ಬಂದಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದು ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬಂದ ಮೇಲೆ. ಹೀಗಾಗಿ ಈ ವಿಷಯದಲ್ಲಿ ಹೆಚ್ಚು ಚರ್ಚಿಸುವ ಬದಲು ಪಕ್ಷವು ಮರಳಿ ಅಧಿಕಾರಕ್ಕೆ ಬರುವುದು ಹೇಗೆ ಅಂತ ಯೋಚಿಸಬೇಕು. ಆದ್ದರಿಂದ ಎಲ್ಲರೂ ನಿಮ್ಮ ನಿಮ್ಮ ಭಿನ್ನಾಭಿಪ್ರಾಯ ಮರೆತು ಒಮ್ಮತದಿಂದ ಹೋಗಿ..
ಯುವಕರಾದರೂ ರಾಜಕಾರಣದಲ್ಲಿ ವಿಜಯೇಂದ್ರ ಅವರಿಗೆ ಹೆಚ್ಚು ಅನುಭವವಿದೆ. ಇವತ್ತು ಪಕ್ಷವನ್ನು ನಡೆಸಲು ಹಲವು ಕ್ವಾಲಿಟಿಗಳಿರಬೇಕು. ಶಕ್ತಿ ಇರಬೇಕು. ಅದು ತಮಗಿದೆ ಅನ್ನೋದನ್ನ ವಿಜಯೇಂದ್ರ ತೋರಿಸಿದ್ದಾರೆ.
ಅಂದ ಹಾಗೆ, ಕಳೆದ ವರ್ಷ ವಿಧಾನಸಭೆ ಚುನಾವಣೆ ನಡೆದಾಗ ಎಲ್ಲ ಪ್ರಮುಖ ನಾಯಕರಿಗೆ ಐದಾರು ಕ್ಷೇತ್ರಗಳನ್ನು ಗೆಲ್ಲಿಸುವ ಜವಾಬ್ದಾರಿ ಕೊಡಲಾಗಿತ್ತಲ್ಲ, ಎಷ್ಟು ಜನ ಈ ಜವಾಬ್ದಾರಿ ನಿಭಾಯಿಸಿದಿರಿ.. ಹೋಗಲಿ, ಲೋಕಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನಮಗೆ ಹೀನಾಯ ಸೋಲಾಗಿದ್ದಕ್ಕೆ ಕಾರಣ ಏನು..? ಯತ್ನಾಳ್ ಅವರ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ನಮ್ಮವರು ಗೆದ್ದರು. ಆದರೆ, ವಿಜಯಪುರ ವಿಧಾನ ಸಭಾ ಕ್ಷೇತ್ರದಲ್ಲಿ ಹಿನ್ನಡೆ ಏಕಾಯ್ತು..? ಹೀಗೆ ಎಲ್ಲರಿಂದಲೂ ತಪ್ಪುಗಳಾಗಿವೆ.
ವಿಜಯೇಂದ್ರಗೆ ಕೊಟ್ಟ ಎಚ್ಚರಿಕೆ ಏನು..?
ಅಧ್ಯಕ್ಷರು ಅಂದಾಕ್ಷಣ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಾರದು ಅಂತಲ್ಲ. ಇನ್ ಫ್ಯಾಕ್ಟ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ನಾಯಕರ ಗುಣ. ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ತಪ್ಪು. ಅವರ ನಡೆಯನ್ನು ನಾವು ಒಪ್ಪುವು ದಿಲ್ಲ. ಇನ್ನು ಮುಂದೆ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು. ಅದೇ ರೀತಿ, ಉಳಿದ ವರು ವೈಮನಸ್ಯ ಮರೆತು ಉಳಿದವರೂ ಅವರಿಗೆ ಕೋ-ಆಪರೇಟ್ ಮಾಡಬೇಕು.
ಹೀಗೊಂದು ಸಂದೇಶ ಕೊಟ್ಟ ಆರ್‌ಎಸ್‌ಎಸ್ ನಾಯಕರು, ಸಂದೇಶವನ್ನೇನೋ ಕೊಟ್ಟಿದ್ದಾರೆ. ಆದರೆ, ರಾಜ್ಯ ಬಿಜೆಪಿಯಲ್ಲಿ ಆರ್‌ಎಸ್ಎಸ್ ಹಿಡಿತ ತಪ್ಪುತ್ತಿರುವುದು ಕೂಡಾ ಸಾಬೀತಾಗಿದೆ. ಏಕೆಂದರೆ ಸಭೆ ಮುಗಿದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಬಹಿರಂಗವಾಗಿ ನಾವು ವಿಜಯೇಂದ್ರ ಅವರನ್ನು ಅಧ್ಯಕ್ಷ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಜಾರಕಿಹೊಳಿ ಮೂಲತಃ ಸಂಘದಿಂದ ಬಂದವರಲ್ಲ. ಹೀಗಾಗಿ ಇಂತಹ ಹೇಳಿಕೆ ಕೊಟ್ಟು ಇರಬಹುದು. ಆದರೆ, ಸಂಘದಿಂದ ಬಂದಿರುವ ಸಿಟಿ ರವಿ, ಪ್ರತಾಪ್ ಸಿಂಹ, ಯತ್ನಾಳ್ ಅವರಂತಹ ನಾಯಕರು ಅತ್ತ ಸಂಘದ ವಿರುದ್ಧ ಮಾತನಾಡಲು ಸಾಧ್ಯವಿಲ್ಲದೆ, ವಿಜಯೇಂದ್ರ ಅವರನ್ನು ಒಪ್ಪಿಕೊಳ್ಳೋಕೂ ಆಗದೆ ಒದ್ದಾಡುತ್ತಿದ್ದಾರೆ. ಆದರೆ, ಗೆದ್ದಿರುವ ಕುದುರೆಗೆ ಬಲ ಹೆಚ್ಚು.



