ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾದ ದಿನದಿಂದಲೂ ಅವರ ವಿರುದ್ಧ ಒಂದು ಬಣ ಕೆಲಸ ಮಾಡುತ್ತಲೇ ಇದೆ. ನೇತೃತ್ವ ವಹಿಸಿರುವುದು ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ. ಇನ್ನು ಅವರ ಜೊತೆ ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ ಮೊದಲಾದವರಿದ್ದಾರೆ. ಇನ್ನು ಸಿಟಿ ರವಿ ಯತ್ನಾಳ್ ಗುಂಪಿನ ಜೊತೆ ಇದ್ದರೂ, ಬಹಿರಂಗವಾಗಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಇದೆಲ್ಲವೂ ಡಿಸೆಂಬರ್ ಹೊತ್ತಿಗೆ ಸ್ಫೋಟವಾಗುವ ನಿರೀಕ್ಷೆ ಇದೆ.
ನವೆಂಬರ್15ಕ್ಕೆ ರಾಜ್ಯಾಧ್ಯಕ್ಷ ರಾಗಿ ವಿಜಯೇಂದ್ರ ಒಂದು ವರ್ಷ ಪೂರೈಸುತ್ತಿದ್ದು, ಅದಾದ ನಂತರ ನಾಯಕತ್ವ ಬದಲಾವಣೆ ಧ್ವನಿ ಭುಗಿಲೇಳಬಹುದು. ಡಿಸೆಂಬರ್‌ನಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷರ ಬದಲಾವಣೆಯೂ ಇದೆ. ಇದೇ ಸಂದರ್ಭ ಬಳಸಿ ಭಿನ್ನಮತದ ಹಿನ್ನೆಲೆಯಲ್ಲಿ ಡಿಸೆಂಬರ್‌ನಲ್ಲೇ ವಿಜಯೇಂದ್ರ ಅವರನ್ನು ಬದಲಿಸುತ್ತಾರೆ ಎಂಬ ಮಾತು ಬಿಜೆಪಿಯಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮಧ್ಯಸ್ಥಿಕೆ ವಹಿಸಿ, ಸಭೆ ನಡೆಸಿತಾದರೂ.. ಆ ಸಭೆಯಿಂದ ಯಾವ ಲಾಭವೂ ಆಗಿಲ್ಲ. ಬದಲಿಗೆ ವಿಜಯೇಂದ್ರ ವಿರೋಧಿ ಗುಂಪನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದೆ ಅಷ್ಟೆ, ಹೌದು, ಆರ್ ಎಸ್ ಎಸ್ ಸಭೆಯಲ್ಲಿ ವಿಜಯೇಂದ್ರ ವಿರುದ್ಧ ಗುಡುಗಿದ್ದವರೆಲ್ಲ ಈಗ ಯಾವ ಹಿಂಜರಿಕೆಯೂ ಇಲ್ಲದೆ ಬಹಿರಂಗವಾಗಿ ಕಾಣಿಸಿಕೊಳ್ಳುವಂತಾಗಿದೆ.
ಒಂದು ಕಡೆ ಪಕ್ಷದಿಂದ ಹೊರಗಿರುವ ಕೆ.ಎಸ್ ಈಶ್ವರಪ್ಪ ಅವರು, ಬಿಜೆಪಿಯಲ್ಲಿಯೇ ಇರುವ ಯತ್ನಾಳ್ ಜೊತೆ ಸೇರಿ, ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಕಟ್ಟಲು ಸಭೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ತಂಡ ನಿರಂತರವಾಗಿ ಸಭೆ ನಡೆಸುತ್ತಿದೆ. ಇನ್ನು ಗುರುವಾರ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ಭಾಗವಹಿಸಿಲ್ಲ. ಮಾಧ್ಯಮಕ್ಕೆ ಮುಟ್ಟಿಸಿರುವ ‘ಅನಾರೋಗ್ಯ ಕಾರಣ’ ಎಂಬ ಮಾಹಿತಿ ಕೇವಲ ನೆಪ ಎನ್ನಲಾಗುತ್ತಿದೆ. ಈ ಮಧ್ಯೆ ಭಿನ್ನಮತ ಶಮನಕ್ಕೆ ಖುದ್ದು ಯಡಿಯೂರಪ್ಪ ಮಧ್ಯ ಪ್ರವೇಶಿಸಿದ್ದು, ಎಲ್ಲ ನಾಯಕರ ಜೊತೆ ದೂರವಾಣಿ ಮಾತುಕತೆ ನಡೆಸುತ್ತಿದ್ದಾರಂತೆ.
ವಿಜಯೇಂದ್ರ ಪರ ಬಣ ಆಕ್ಟಿವ್ : ಈ ನಡುವೆ ರೇಣುಕಾಚಾರ್ಯ ನೇತೃತ್ವದಲ್ಲಿ ವಿಜಯೇಂದ್ರ ಅವರ ಬಣವೂ ಸಭೆ ನಡೆಸುತ್ತಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರೇಣುಕಾಚಾರ್ಯ ಮೊದಲಾದವರು ಸಭೆ ನಡೆಸಿ ವಿಜಯೇಂದ್ರ ಅವರಿಗೆ ಬೆಂಬಲ ಘೋಷಿಸಿದ್ದಾರೆ. ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಬಿಜೆಪಿಯ ವರಿಷ್ಠರೇ ಹೊರತು, ಬೇರೆ ಯಾರೂ ಅಲ್ಲ. ಭಿನ್ನಮತೀಯರು ವರಿಷ್ಠರ ವಿರುದ್ಧ ಹೋರಾಡುತ್ತಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ವಿಜಯೇಂದ್ರ ಅವರನ್ನು ಯಾವುದೇ ಕಾರಣಕ್ಕೂ ಅಧಿಕಾರದಿಂದ ಇಳಿಸಲು ಸಾಧ್ಯವಿಲ್ಲ ಅನ್ನೋದು ರೇಣುಕಾಚಾರ್ಯ ಅವರ ನೇರಾನೇರ ಮಾತು.
ವಿಜಯೇಂದ್ರ ಅವರೇನು ರೆಡಿಮೇಡ್ ಫುಡ್ ಅಲ್ಲ. ಅವರು ಅಧ್ಯಕ್ಷರಾದ ಮೇಲೆ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸಂಘಟನೆ ಮಾಡ್ತಿದ್ದೇವೆ. ಅವರು ಅಧ್ಯಕ್ಷರಾದ ಮೆಲೆಯೇ ಪಕ್ಷಕ್ಕೆ ಒಂದು ರೀತಿಯಲ್ಲಿ ಬೂಸ್ಟ್ ಸಿಕ್ಕಂತಾಗಿದೆ. ಈಗ ಯಾರಾದರೂ ಅವರ ಬಗ್ಗೆ ಮಾತನಾಡಿದರೆ, ಇಷ್ಟು ದಿನ ಮಾತನಾಡಬಾರದು ಎಂದು ಸುಮ್ಮನೆ ಇದ್ದೆವು. ಆದರೆ, ಇನ್ಮುಂದೆ ಇರುವ ಮಾತೇ ಇಲ್ಲ’ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ವಿಜಯೇಂದ್ರ ಅಥವಾ ಯಡಿಯೂರಪ್ಪನವರ ಅವರ ಗ್ರೀನ್ ಸಿಗ್ನಲ್ ಇಲ್ಲದೆ ಈ ರೀತಿ ಸಭೆ ನಡೆಯಲು ಸಾಧ್ಯವಿಲ್ಲ ಅನ್ನೋದು ಬಿಜೆಪಿಯಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತು. ಇನ್ನು ಯತ್ನಾಳ್, ಜಾರಕಿಹೊಳಿ ನೇತೃತ್ವದ ಬಣಕ್ಕೂ ಹಿರಿಯರ ಆಶೀರ್ವಾದ ಇಲ್ಲದೆ ಇಲ್ಲ. ಯಾವ ಬಣ ಬಲಿಷ್ಠವಾಗಿರುತ್ತದೆಯೋ.. ಆ ಬಣ ಗೆಲ್ಲುತ್ತದೆ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ.
ಏನೇ ಎದುರಾದರೂ ವಿಜಯೇಂದ್ರ ಸುಮ್ಮನೆ ಸೋಲೊಪ್ಪಿ ಕೂರುವ ಜಾಯಮಾನದವರಲ್ಲ. ಈ ಹಿನ್ನೆಲೆಯಲ್ಲಿ ಈ ವರ್ಷಾಂತ್ಯದ ಡಿಸೆಂಬರ್ ಹೊತ್ತಿಗೆ ರಾಜ್ಯ ಬಿಜೆಪಿ ಬಣ ಜಗಳ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯಂತೂ ಇದೆ.



