ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ನಿಂತಿದ್ದ ಜಯಮೃತ್ಯುಂಜಯ ಸ್ವಾಮೀಜಿ ಅವರ ಪೀಠತ್ಯಾಗಕ್ಕೆ ಕೌಂಟ್ ಡೌನ್ ಶುರುವಾದ ಹಾಗಿದೆ. ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಸಭೆ ನಡೆಸಿರುವ ಪಂಚಮಸಾಲಿ ಟ್ರಸ್ಟ್ ಮುಖಂಡರು ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಗುಡುಗಿದ್ದಾರೆ. ಅಂದಹಾಗೆ ಕಾಶಪ್ಪನವರ್ ಕಾಂಗ್ರೆಸ್ ಮುಖಂಡ. ಆದರೆ ಲಿಂಗಾಯತ ನಾಯಕ. ಜಯಮೃತ್ಯುಂಜಯ ಸ್ವಾಮೀಜಿ ಪೀಠಾಧಿಪತಿಯಾಗಿರುವ ಕೂಡಲ ಸಂಗಮ ಮಠದ ಧರ್ಮದರ್ಶಿಗಳಲ್ಲಿ ಒಬ್ಬರು. ಅಲ್ಲದೆ ಪಂಚಮಸಾಲಿ ರಾಷ್ಟ್ರೀಯ ಘಟಕದ ಅಧ್ಯಕ್ಷರೂ ಹೌದು.
ಇದೀಗ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ನ ಸದಸ್ಯರು ʻʻ ಯಾವುದೇ ರಾಜಕೀಯ ಪಕ್ಷದ ಪರವಾಗಿ, ವ್ಯಕ್ತಿ ಪರವಾಗಿ ಮಾತನಾಡದಂತೆ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಮನವಿ ಮಾಡಿದ್ದೇವೆ. ಒಂದು ವೇಳೆ ಮಾತನಾಡಿದರೆ, ಪೀಠದಿಂದ ಸ್ವಾಮೀಜಿ ಉಚ್ಛಾಟನೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಅಂತ ಹೇಳಿದ್ದೆವು. ಮುಂದಿನ ವಾರದಲ್ಲಿ ಮತ್ತೆ ಸಭೆ ನಡೆಸುತ್ತೇವೆ. ಅಷ್ಟರಲ್ಲಿ ಸ್ವಾಮೀಜಿಯವರ ವರ್ತನೆ ಬದಲಾವಣೆಯಾಗದಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಟ್ರಸ್ಟ್ನ ನಿಯಮಗಳ ವಿರುದ್ಧ ನಡೆದುಕೊಂಡರೆ ಅವರನ್ನು ಪೀಠದಿಂದ ಕೆಳಗೆ ಇಳಿಸುವ ಅಧಿಕಾರ ಟ್ರಸ್ಟ್ಗೆ ಇದೆʼʼ ಎಂದು ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಪ್ರಧಾನವಾಗಿ ಮಾತನಾಡಿದ ವಿಜಯಾನಂದ ಕಾಶಪ್ಪನವರ್ ಯತ್ನಾಳ್ ಜೊತೆ ಚುನಾವಣೆಗೆ ನಿಲ್ಲುವ ಪ್ಲಾನ್‌ನಲ್ಲಿ ಸ್ವಾಮೀಜಿ ಇದ್ದು ಆ ಕಾರಣಕ್ಕೆ ಫ್ರೀಡಂ ಪಾರ್ಕ್‌ನಲ್ಲಿ 2ಡಿ, 2ಸಿ ಡೀಲ್‌ಗಳು ನಡೆದಿವೆ ಎಂಬ ಆರೋಪವಿದೆ. ಯತ್ನಾಳ್ ಹಾಗೂ ಸ್ವಾಮೀಜಿಯವರು ಸಂಸ್ಥಾಪಕ ಅಧ್ಯಕ್ಷರ ಬಗ್ಗೆ ಕೀಳುಮಟ್ಟದ ಪದ ಬಳಕೆ ಮಾಡುತ್ತಿದ್ದಾರೆ. ಹಂದಿ, ನಾಯಿ, ನರಿ ಎಂಬ ಮಾತನ್ನು ಆಡಿದ್ದು, ಅವರ ಸಂಸ್ಕೃತಿ ತೋರಿಸುತ್ತದೆ. ಅಂತವರ ಬೆಂಬಲಕ್ಕೆ ತಮ್ಮ ವೈಯಕ್ತಿಕ ಹಿತಕ್ಕಾಗಿ ಸ್ವಾಮೀಜಿ ಬೆಂಬಲ ನೀಡುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾವಿ ಬಿಚ್ಚಿಟ್ಟು ಖಾದಿ ತೊಟ್ಟು ಸ್ಪರ್ಧಿಸಲು ಸ್ವಾಮೀಜಿ ಮುಂದಾಗಿದ್ದಾರೆ ಎಂದು ಟೀಕೆ ಮಾಡಿದ್ದಾರೆ.
ಯತ್ನಾಳ್ ಉಚ್ಚಾಟನೆಯನ್ನು ರದ್ದು ಮಾಡಬೇಕು ಎಂದು ಸ್ವಾಮೀಜಿ ಒಂದು ಪಕ್ಷಕ್ಕೆ ಡೆಡ್‌ಲೈನ್ ನೀಡಿದ್ದು, ಇದು ಯತ್ನಾಳ್ ಮತ್ತು ಸ್ವಾಮೀಜಿ ನಡುವಿನ ಹೊಂದಾಣಿಕೆ ರಾಜಕೀಯ ತೋರಿಸುತ್ತದೆ. ಇನ್ನು ದಾವಣಗೆರೆಯಲ್ಲಿ ಸ್ವಾಮೀಜಿ ವೈಯಕ್ತಿಕ ಮತ್ತು ಪ್ರತ್ಯೇಕ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಆ ಮೂಲಕ ಕೋಟ್ಯಂತರ ರೂಪಾಯಿ ಆಸ್ತಿ ಗಣಿಸಿದ್ದಾರೆ ಎಂಬ ಆರೋಪವನ್ನೂ ಕಾಶಪ್ಪನವರ್ ಮಾಡಿದ್ದಾರೆ. ಯತ್ನಾಳ್ ಜೊತೆ ಡೀಲ್ ಮಾಡಿಕೊಂಡಿದ್ದರಾ ಜಯಮೃತ್ಯುಂಜಯ ಸ್ವಾಮೀಜಿ ಎಂಬ ಅನುಮಾನವೂ ಉದ್ಭವವಾಗಿದೆ.
ಟ್ರಸ್ಟ್ ಸುದ್ದಿಗೋಷ್ಠಿಯಲ್ಲಿ ವಿಜಯಾನಂದ ಕಾಶಪ್ಪನವರ ಜೊತೆ ಪ್ರಭಣ್ಣ ಹುಣಸಿಕಟ್ಟಿ, ಮೋಹನ ಲಿಂಬಿಕಾಯಿ, ನೀಲಕಂಠ ಅಸೂಟಿ ಕೂಡಾ ಇದ್ದರು. ಇನ್ನು ಯತ್ನಾಳ್ ಅವರ ಬಗ್ಗೆಯೂ ಕಿಡಿಕಾರಿದ ಕಾಶಪ್ಪನವರ್ ಯತ್ನಾಳ ಅವರು ಟ್ರಸ್ಟ್ ಬಗ್ಗೆ ಬೇಜವಬ್ದಾರಿತನದಿಂದ ಮಾತನಾಡಿದ್ದಾರೆ. ಇದು ಟ್ರಸ್ಟ್ ಮತ್ತು ಸಮಾಜದವರಿಗೆ ನೋವು ತರಿಸಿದೆ. ಯಾವುದೇ ಪದಾಧಿಕಾರಿಗಳು ಸಮಾಜದ ಆಸ್ತಿ ಕಬಳಿಕೆ ಮಾಡಿಲ್ಲ. ಸಾರ್ವಜನಿಕವಾಗಿ ಟ್ರಸ್ಟ್ ಪದಾಧಿಕಾರಿಗಳ ವಿರುದ್ಧ ಮಾತನಾಡಿದ್ದಾರೆ. ಇದಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯತ್ನಾಳ್ ಎಂಥವನೂ ಅಲ್ಲ, ಸ್ವಯಂಘೋಷಿತ ನಾಯಕ ಅಷ್ಟೇ, ಹಂದಿ ನಾಯಿ ಅಂತೆಲ್ಲ ಮಾತನಾಡೋವ್ರನ್ನು ಅವರ ಸಂಸ್ಕಾರ ನೋಡಿಯೇ ಅವರ ಪಕ್ಷ ಉಚ್ಛಾಟನೆ ಮಾಡಿದೆ ಎಂದಿದ್ದಾರೆ.



