ವಿಜಯೇಂದ್ರರನ್ನು ಕೆಳಗಿಳಿಸಲು ಅದೆಷ್ಟೇ ಪ್ಲಾನ್ ಮಾಡಿದ್ರು, ಅದು ಸಕ್ಸಸ್ ಆಗ್ಲಿಲ್ಲ, ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ಮುಂದುವರೆಯುವುದು ಬಹುತೇಕ ಖಚಿತ ಅಂತ ಹೇಳಲಾಗುತ್ತಿದೆ. ಹೀಗಿರುವಾಗ ಯತ್ನಾಳ್ ನೇತೃತ್ವದ ರೆಬೆಲ್ ಟೀಂಗೆ ಮತ್ತೆ ಮತ್ತೆ ವಿಜಯೇಂದ್ರ ವಿರುದ್ಧ ದಾಳ ಉರುಳಿಸುತ್ತಿದ್ದಾರೆ. ಈಗ ವಿಜಯೇಂದ್ರಗೆ ಯಾವ ಸಮಾಜದ ಬೆಂಬಲ ಇದೆಯೋ ಅವರನ್ನೇ ಎತ್ತಿಕಟ್ಟುವ ಕೆಲಸವನ್ನು ಮಾಡಲು ಅಣಿಯಾಗಿದ್ದಾರೆ. ಲಿಂಗಾಯತ ಮಹಾ ಸಮಾವೇಶಕ್ಕೆ ಮುಂದಾಗಿದ್ದಾರೆ. ಇದೆಲ್ಲದರ ಮಧ್ಯೆ ಯತ್ನಾಳ್ ಹೊಸ ಪಕ್ಷವನ್ನೇ ಕಟ್ಟಿದರೆ ಹೇಗೆ ಅನ್ನೋದರ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡ್ತಿದ್ದಾರಂತೆ. ಅದಕ್ಕೆ ಕಾರಣ ಮತ್ತು ಸ್ಪೂರ್ತಿ ಯಡಿಯೂರಪ್ಪ ಅನ್ನೋದು ವಿಶೇಷ.
ಸದ್ದಿಲ್ಲದೆ ಬಸನಗೌಡ ಪಾಟೀಲ್ ಯತ್ನಾಳ್, ಜಿ ಎಂ ಸಿದ್ದೇಶ್ವರ್, ಶಾಸಕ ಬಿ ಪಿ ಹರೀಶ್ ಸಭೆಗಳನ್ನು ಮಾಡುತ್ತಿದ್ದಾರೆ. ಅತ್ತ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ್ ಲಿಂಬಾವಳಿ, ಪ್ರತಾಪ್ ಸಿಂಹ ಸೇರಿ ಹಲವರಿಂದ ತಮ್ಮ ಸಮುದಾಯವಳ ಜೊತೆ ಮೂಲಕ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಎಲ್ಲರೂ ಕೂಡಾ ಲಿಂಗಾಯತ ಸಮಾಜದ ಮೂಲಕ ವಿಜಯೇಂದ್ರರನ್ನು ಕಟ್ಟಿಹಾಕುವ ಪ್ರಯತ್ನ ಮಾಡುವುದು ಒಂದೆಡೆಯಾದರೆ, ಮತ್ತೊಂದೆಡೆ ಪಕ್ಷದಲ್ಲಿರುವ ವಿಜಯೇಂದ್ರ ಪರ ತಂಡಕ್ಕೂ ಸಿಗ್ನಲ್ ಕೊಡುವುದು.
ದೆಹಲಿಯಲ್ಲಿ ಲಿಂಗಾಯತ ನಿಯೋಗವನ್ನು ಸಂಘಟಿಸಲು ಯತ್ನಾಳ್ ಯೋಜನೆ ರೂಪಿಸುವುದು.. ಆ ಮೂಲಕ ದೆಹಲಿಯಲ್ಲಿ ಲಿಂಗಾಯತ ಸಮುದಾಯದ ರಾಜಕೀಯ ಬಲವನ್ನು ಪ್ರದರ್ಶಿಸುವ ಗುರಿ ಇದೆ ಎನ್ನಲಾಗುತ್ತಿದ್ದು, ಯತ್ನಾಳ್ ರವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಚಾಲನೆ ನೀಡಿರುವುದು ಮತ್ತು ಪಕ್ಷದೊಳಗಿನ ವಿರೋಧಿಗಳಿಗೆ, ಲಿಂಗಾಯತ ಅಸ್ತ್ರವನ್ನು ಬಳಸುವ ಪ್ರಯತ್ನಗಳು ಪಕ್ಷದಲ್ಲಿ ಒತ್ತಡವನ್ನು ಹೆಚ್ಚಿಸಿವೆ.
ಯತ್ನಾಳ್ ಹೊಸ ಪಕ್ಷಕ್ಕೆ ಯಡಿಯೂರಪ್ಪನವರೇ ಸ್ಫೂರ್ತಿ..!
ಯತ್ನಾಳ್ ಹೊಸ ಪಕ್ಷ ಸ್ಥಾಪಿಸುವ ಸಾಧ್ಯತೆ ಕುರಿತು ರಾಜಕೀಯ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ. ಯಡಿಯೂರಪ್ಪ ಅವರು ಅಂದಿನ ದಿನಗಳಲ್ಲಿ ಹೇಗೆ ಬಿಜೆಪಿ ತೊರೆದು ಹೊಸ ಪಕ್ಷ ಆರಂಭಿಸಿ ನಂತರ ಮತ್ತೆ ಬಿಜೆಪಿಗೆ ಸೇರಿಕೊಂಡರೋ, ಅದೇ ಹಾದಿಯಲ್ಲಿ ಯತ್ನಾಳ್ ಕೂಡಾ ಹೋಗುವ ಸಾಧ್ಯತೆ ಇದೆ. ಹೈಕಮಾಂಡ್ ಅವರ ವಿರುದ್ಧ ಕ್ರಮ ಕೈಗೊಂಡರೆ, ಯತ್ನಾಳ್ ಹೊಸ ಹಿಂದೂ ಪಕ್ಷವನ್ನು ಸ್ಥಾಪಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಏಕೆಂದರೆ ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ ಎನಿಸಿದ್ದು ಕೆಜೆಪಿ ಸ್ಥಾಪಿಸಿ, ಶೇ.10ರಷ್ಟು ವೋಟ್ ಪಡೆದ ನಂತರವೇ. ಅದಾದ ಮೇಲೆ ಹೈಕಮಾಂಡ್ ಯಡಿಯೂರಪ್ಪ ಅವರ ಪ್ರಾಬಲ್ಯ ಅರಿತು ಮಣೆ ಹಾಕುತ್ತಿದೆ.
ಯತ್ನಾಳ್ ಹಿಂದುತ್ವ ಅಜೆಂಡಾ..!
ಯತ್ನಾಳ್ ಅವರ ಹೊಸ ಪಕ್ಷ ಹಿಂದೂತ್ವ ನಿಲುವಿನೊಂದಿಗೆ ಬರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಪಕ್ಷ 70ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂಬ ಮಾತುಗಳು ಕೇಳಿ ಬಂದಿದೆ. ಇದರಿಂದ ಕರ್ನಾಟಕದ ಬಿಜೆಪಿಯಲ್ಲಿ ಮತಬ್ಯಾಂಕಾದ ಲಿಂಗಾಯತ ಸಮುದಾಯದಲ್ಲಿ ವಿಭಜನೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಯತ್ನಾಳ್ ಅವರ ಈ ನಡೆ ಬಿಜೆಪಿಗೆ ಹೊಸ ತಲೆನೋವು ತಂದಿದೆ. ಹೈಕಮಾಂಡ್ ಕೂಡಾ ಈ ಬಗ್ಗೆ ತಲೆಕೆಡಿಸಿಕೊಂಡಿದೆ.
ಸಂಧಾನಕ್ಕೆ ಮುಂದಾದರಾ ವಿಜಯೇಂದ್ರ..?
ಹಾಗೆ ನೋಡಿದರೆ ಯತ್ನಾಳ್ ಆರ್ಭಟಿಸಿ, ಅಬ್ಬರಿಸಿ ಬೊಬ್ಬಿರಿದರೂ.. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಒಂದು ಹಂತದವರೆಗೆ ತಾಳ್ಮೆಯಿಂದಲೇ ಇದ್ದಾರೆ. ಯತ್ನಾಳ್ ಅವರಂತೆ ಎಡ್ಡಂದಿಡ್ಡಂ ಮಾತನಾಡ್ತಿಲ್ಲ. ನಾಲಗೆಯನ್ನು ಹತೋಟಿಯಲ್ಲೇ ಇಟ್ಟಿದ್ದಾರೆ. ಹೀಗಿರುವಾಗಲೇ ವಿಜಯೇಂದ್ರ ಅವರು ಸಂಧಾನಕ್ಕೆ ಪ್ರಯತ್ನ ಮಾಡ್ತಿದ್ದಾರಂತೆ. ಮಾತುಕತೆಗೆ ಒಲವು ತೋರಿಸುತ್ತಿದ್ಧಾರಂತೆ. ಆದರೆ.. ಯಾರ ಮೂಲಕ ಎನ್ನುವುದು ರಹಸ್ಯ.



