ನನಗೆ ನೋಟಿಸ್ ಕೊಡ ಮಗಾ ಯಾರಿದ್ದಾನೆ..
ಯಾವ್ ನೋಟಿಸ್ ಕೊಟ್ರೂ ಅಷ್ಟೇ.. ನಾನ್ ಹೆದರೋ ಮಗ ಅಲ್ಲ..
ನೋಟಿಸ್ ಕೊಟ್ರೂ ಉತ್ತರ ಕೊಡಲ್ಲ..
ಹೀಗೆಲ್ಲ ಹೇಳುತ್ತಿದ್ದ ಬಸನಗೌಡ ಪಾಟೀಲ ಯತ್ನಾಳ್ ಕೊನೆಗೂ ತಗ್ಗಿದ್ದಾರೆ. ಬಗ್ಗಿದ್ದಾರೆ. ತಮಗೆ ನೋಟಿಸ್ ಬಂದಿಲ್ಲ, ಬಂದರೂ ಉತ್ತರಿಸುವುದಿಲ್ಲ ಎನ್ನುತ್ತಿದ್ದ ಯತ್ನಾಳ ಅವರು ಈಗಲೂ ಉತ್ತರ ನೀಡಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ, ಅವರ ಆಪ್ತರು ಮಾತ್ರ ನೋಟಿಸ್‌ಗೆ ಇ-ಮೇಲ್ ಮೂಲಕ ಉತ್ತರ ನೀಡಿದ್ದಾರೆ. ಇದು ಮಾಹಿತಿ. ಪತ್ರ ಲಭ್ಯವಾಗಿಲ್ಲ.
ಯತ್ನಾಳ್ ಉತ್ತರದಲ್ಲಿ ಏನಿದೆ..?
ತಾವು ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಅಸಮರ್ಥತೆ, ವೈಫಲ್ಯ ಕುರಿತು ಹೇಳಿಕೆ ನೀಡಿದ್ದೇನೆ. ಇದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ. ಹೊಂದಾಣಿಕೆ ರಾಜಕಾರಣವನ್ನೇ ರೂಢಿಸಿಕೊಂಡಿರುವ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಿದರೆ ಪಕ್ಷಕ್ಕೆ ನಷ್ಟ ಕಟ್ಟಿಟ್ಟ ಬುತ್ತಿ ಎಂದು ಉತ್ತರ ಕೊಟ್ಟಿದ್ದಾರಂತೆ ಯತ್ನಾಳ್.
ಅವರನ್ನು ಬಿಟ್ಟಿಲ್ಲ ಯತ್ನಾಳ್ ಸಾಹೇಬರು..!
ತಮ್ಮ ಉತ್ತರದ ಜತೆಗೆ ವಿಜಯೇಂದ್ರ ಮತ್ತವರ ಬೆಂಬಲಿಗರಾದ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯನಾಯ್ಡು ಮತ್ತಿತರ ಹೇಳಿಕೆಗಳು, ಜತೆಗೆ ವಿಜಯೇಂದ್ರ ವಿರುದ್ಧ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಹೇಳಿಕೆಗಳನ್ನು ಒಳಗೊಂಡ ಪತ್ರಿಕಾ ತುಣಕುಗಳನ್ನು ಲಗತ್ತಿಸಿ ರವಾನಿಸಿದ್ದಾರೆ. ಅಂದರೆ ವಿಜಯೇಂದ್ರ ಅವರನ್ನು ಸಮರ್ಥಿಸುವ ಭರದಲ್ಲಿ ತಮ್ಮ ವಿರುದ್ಧ ಗುರ್ ಎಂದ ಯಾರೊಬ್ಬರನ್ನೂ ಬಿಟ್ಟಿಲ್ಲ. ಜೊತೆಗೆ ವಿಜಯೇಂದ್ರ ವಿರುದ್ಧ ಟೀಕೆ ಮಾಡಿದ ಬೇರೆ ನಾಯಕರನ್ನೂ ಬಿಟ್ಟಿಲ್ಲ. ಆದರೆ, ತಮ್ಮ ಜೊತೆಯಲ್ಲಿದ್ದ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಲಿಂಬಾವಳಿ, ಸಿದ್ದೇಶ್ವರ ಮೊದಲಾದವರನ್ನು ಆ ಪತ್ರದಲ್ಲಿ ಉಲ್ಲೇಖವನ್ನೇ ಮಾಡಿಲ್ಲ.
ನೀವು ಪಕ್ಷದ ಇತರ ನಾಯಕರ ಹೇಳಿಕೆಗಳನ್ನು ಪರಿಗಣಿಸದೆ ನನ್ನ ಹೇಳಿಕೆಯನ್ನು ಮಾತ್ರ ಗಮನಿಸಿದ್ದೀರಿ. ನಾನೊಬ್ಬನೇ ಮಾತನಾಡಿಲ್ಲ. ಹಲವರು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವಂಥ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದನ್ನೂ ಯತ್ನಾಳ ಅವರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ವಿಜಯೇಂದ್ರ ವಿರುದ್ಧ ಕಂಪ್ಲೇಂಟ್
ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಮಾಡಿದ್ದೇವೆ. ನಮ್ಮ ಸಂಖ್ಯಾಬಲ ಕ್ಷೀಣಿಸಿದೆ. ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇವೆ. ಪಕ್ಷದ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಂಡಿಲ್ಲ. ಕೇವಲ ಹೆಸರಿಗಷ್ಟೇ ರಾಜ್ಯ ಪ್ರವಾಸ ಮಾಡಿದ್ದಾರೆಯೇ ಹೊರತು ಯಾವುದೇ ಜಿಲ್ಲೆಯಲ್ಲೂ ಅಲ್ಲಿನ ಸಂಘಟನೆಯ ಸ್ಥಳೀಯ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿಲ್ಲ. ಸದಾ ಕಾಲ ಹೊಂದಾಣಿಕೆ ರಾಜಕಾರಣವನ್ನೇ ಮಾಡಿಕೊಂಡು ಬಂದಿದ್ದಾರೆ. ಕೇವಲ ನೆಪಮಾತ್ರಕ್ಕೆ ಎಂಬಂತೆ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡುತ್ತಾರೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ಪಕ್ಷದ ಪ್ರಮುಖ ನಿರ್ಣಯಗಳನ್ನು ಏಕಪಕ್ಷೀಯವಾಗಿ ಕೈಗೊಳ್ಳುತ್ತಾರೆ. ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೇ ತೆಗೆದುಕೊಳ್ಳುವುದಿಲ್ಲ. ಹೀಗೆ ದೂರುಗಳ ಸುರಿಮಳೆಯನ್ನೇ ಸುರಿಸಿದ್ದಾರೆ ಯತ್ನಾಳ್.
ಒಟ್ಟಿನಲ್ಲಿ ಯತ್ನಾಳ್ ಹೋರಾಟ ಮೊದಲ ಬಾರಿಗೆ ಒಂದು ತಾರ್ಕಿಕ ಅಂತ್ಯಕ್ಕೆ ಬಂದಂತಾಗಿದೆ. ಆದರೆ ಈ ಹೋರಾಟಕ್ಕೆ ಫುಲ್ ಸ್ಟಾಪ್ ಬೀಳುತ್ತದೆಯೋ.. ಅಥವಾ ಇದು ಅಲ್ಪವಿರಾಮವೋ ಎಂಬುದು ಗೊತ್ತಿಲ್ಲ. ಅಷ್ಟೇ.



