ರಾಜ್ಯದಲ್ಲೀಗ ಹೊಸದೊಂದು ಸಂಘಟನೆ ಶುರುವಾಗುತ್ತಿದೆ. ಈ ಹಿಂದೆ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ, ಯಡಿಯೂರಪ್ಪ ವಿರುದ್ಧ ತೊಡೆ ತಟ್ಟಿದ್ದ ಈಶ್ವರಪ್ಪ, ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಬೆಂಕಿ ಉಗುಳುತ್ತಲೇ ಇರುವ ಬಸನಗೌಡ ಪಾಟೀಲ ಯತ್ನಾಳ್ ಜಂಟಿಯಾಗಿ ಸ್ಥಾಪಿಸಲು ಹೊರಟಿರುವ ಸಂಘಟನೆ ಇದು. ಆರ್.ಸಿ.ಬಿ. ಎಂದರೆ ರಾಯಣ್ಣ-ಚೆನ್ನಮ್ಮ ಬ್ರಿಗೇಡ್ ಎಂದರ್ಥ.
ರಾಜ್ಯದ ಬಲಿಷ್ಠ ಸಮುದಾಯ ಎನಿಸಿಕೊಂಡ ಪಂಚಮಸಾಲಿ ಸಮಾಜದ ಜೊತೆಗೆ ಸೇರಿ ಆರ್‌ಸಿಬಿ (ರಾಯಣ್ಣ ಚೆನ್ನಮ್ಮ ಬ್ರಿಗೇಡ್) ಸಂಘಟನೆಯ ಪ್ಲಾನ್ ಮಾಡಿದ್ದಾರೆ. ಹೆಚ್ಚಿನ ಜನಸಂಖ್ಯೆ ಹೊಂದಿರುವ ಎರಡು ಬಹುಸಂಖ್ಯಾತ ಸಮಾಜಗಳು ಒಟ್ಟುಗೂಡುತ್ತಿರುವ ಕಾರಣ ಸಹಜವಾಗಿಯೇ ರಾಜಕೀಯ ವಲಯದಲ್ಲಿ ಕಿಚ್ಚು ದೊಡ್ಡದಾಗಿಯೇ ಇರಲಿದೆ.
ಆರ್.ಸಿ.ಬಿ. ರಚನೆಯ ಪ್ರಯತ್ನಗಳು ಶುರುವಾಗಿರುವುದು ಯತ್ನಾಳ್ ಅವರ ಕಾರ್ಯಕ್ಷೇತ್ರ ವಿಜಯಪುರದಲ್ಲಿ ಎನ್ನುವುದು ವಿಶೇಷ. ಹೊರಗೆ ಕಾಣಿಸುತ್ತಿರುವ ಮುಖ ಈಶ್ವರಪ್ಪ ಅವರದ್ದು. ಈಶ್ವರಪ್ಪ ಅವರೀಗ ಬಿಜೆಪಿಯಲ್ಲಿ ಇಲ್ಲ. ಉಚ್ಚಾಟನೆಯಾಗಿದೆ. ಈ ಹಿಂದೆ ರಾಯಣ್ಣ ಬ್ರಿಗೇಡ್ ಮಾಡಿದ್ದಾಗ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದ ಈಶ್ವರಪ್ಪ ಮತ್ತೆ ಬಿಜೆಪಿ ನಾಯಕರಿಗೆ ಹಿಂದುತ್ವದ ಹೆಸರಿನಲ್ಲಿ ಸಂಘಟನೆ ನಿರ್ಮಿಸಿ ತಾಕತ್ತು ತೋರಲು ಮುಂದಾಗಿದ್ದಾರೆ.
ಹಿಂದೆ ಈಶ್ವರಪ್ಪನವರು ರಾಯಣ್ಣ ಬ್ರಿಗೇಡ್ ಸಂಘಟನೆ ಮಾಡಿದ್ದ ವೇಳೆ ಲಕ್ಷ ಲಕ್ಷ ಜನರು ಬಂದಿದ್ದರು. ಬಳಿಕ, ಬಿಜೆಪಿ ಹೈಕಮಾಂಡ್ ಕರೆದು ರಾಯಣ್ಣ ಬ್ರಿಗೇಡ್ ನಿಲ್ಲಿಸಿದ್ದರು. ದರೆ ಆಗ ರಚಿಸಿದ್ದ ರಾಯಣ್ಣ ಬ್ರಿಗೇಡ್ ಬಿಡಬಾರದಿತ್ತು ಎಂದು ನನಗೆ ಈಗ ಅನಿಸುತ್ತಿದೆ ಎಂದು ಸ್ವತಃ ಈಶ್ವರಪ್ಪನವರೇ ಹೇಳುತ್ತಿದ್ದಾರೆ. ರಾಯಣ್ಣ ಬ್ರಿಗೇಡ್ ರೀತಿ ಒಂದು ಸಂಘಟನೆ ಆಗಬೇಕು ಎಂದು ಎಲ್ಲರೂ ಕೇಳುತ್ತಿದ್ದಾರೆ. ಬಡವರಿಗೆ, ಹಿಂದುಳಿದವರಿಗೆ ಅನ್ಯಾಯ ಆಗದಂತೆ ಏನಾದರೂ ಮಾಡಬೇಕಿದೆ. ಇದೀಗ ಸಭೆ ನಡೆಸಿ ಮುಂದೆ ಏನು ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಮಸಾಲಿ ಸ್ವಾಮಿಜಿಯೇ ಹೆಸರು ಸೂಚಿಸಿರುವಂತೆ ಆರ್‌ಸಿಬಿ ಎಂದು ಹೆಸರಿಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದಿದ್ದಾರೆ ಈಶ್ವರಪ್ಪ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಹಿಂದೂ ಹುಲಿ ಎನಿಸಿಕೊಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಕೆ.ಎಸ್.ಈಶ್ವರಪ್ಪನವರಿಗೆ ರಾಯಣ್ಣ ಪ್ರಶಸ್ತಿ ನೀಡಿ ಗೌರವಿಸಿದ ವೇಳೆ ಕೂಡಲಸಂಗಮ ಪೀಠದ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ನೀವು ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಹೆಸರಿನಲ್ಲಿ ಸಂಘಟನೆ ಮಾಡಬೇಕು, ನೊಂದವರಿಗೆ, ಬಡವರಿಗೆ, ದಲಿತರಿಗೆ, ಹಿಂದುಳಿದವರಿಗೆ ಶಕ್ತಿ ತುಂಬಬೇಕು ಎಂದು ಸಲಹೆ ನೀಡಿದ್ದರು. ಅದರ ಅಂಗವಾಗಿ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಹೆಸರಿನಲ್ಲಿ ಸಂಘಟನೆ ನಿರ್ಮಾಣಕ್ಕೆ ಮುಂದಾಗಿರುವ ನಾಯಕರು ವಿಜಯಪುರದ ಮಹಾಲ-ಐನಾಪುರದ ಹುಲಜಂತಿ ಮಠದಲ್ಲಿ ಸಭೆ ನಡೆಸಿದ್ದಾರೆ.
ಪಂಚಮಸಾಲಿ-ಕುರುಬರ ಒಗ್ಗಟ್ಟೋ.. ವಿಜಯೇಂದ್ರ ವಿರುದ್ಧ ಹೋರಾಟವೋ..?
ಇದು ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯೂ ಹೌದು. ತಮ್ಮ ಪುತ್ರನಿಗೆ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆ ಇರುವಷ್ಟೂ ಕಾಲ, ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರನ್ನು ಹಾಡಿ ಹೊಗಳುತ್ತಿದ್ದ ಈಶ್ವರಪ್ಪ, ಟಿಕೆಟ್ ಇಲ್ಲ ಎಂದ ಕೂಡಲೇ ತಿರುಗಿಬಿದ್ದಿದ್ದನ್ನು ರಾಜ್ಯ ರಾಜಕೀಯ ನೋಡಿದೆ. ಇನ್ನು ಈಶ್ವರಪ್ಪ ಅವರ ಬಿಜೆಪಿ ಮತ್ತು ಸಂಘದ ನಿಷ್ಠೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಈಶ್ವರಪ್ಪ ಯಾವತ್ತೂ ಯಡಿಯೂರಪ್ಪ ಅವರಿಗೆ ನಿಷ್ಠರಾಗಿ ಇರಲಿಲ್ಲ. ಇನ್ನು ಯತ್ನಾಳ್ ಅವರೂ ಅಷ್ಟೆ, ಚುನಾವಣೆ ವೇಳೆ ಯಡಿಯೂರಪ್ಪ ಅವರಿಂದಲೇ ಪ್ರಚಾರ ನಡೆಸಿ, ಚುನಾವಣೆ ಮುಗಿದ ಮೇಲೆ ಯಡಿಯೂರಪ್ಪ ವಿರುದ್ಧವೇ ಗುಡುಗುವ ಛಾತಿ ಇರುವ ನಾಯಕ. ಈ ಇಬ್ಬರೂ ಒಟ್ಟಾಗಿ ಸಂಘಟನೆ ನಡೆಸುತ್ತಿರುವುದರ ಸಂದೇಶ ವಿಜಯೇಂದ್ರ ಅವರ ಪ್ರಾಬಲ್ಯವನ್ನು ತಡೆಯುವುದೇ ಹೊರತು, ಸಮಾಜಗಳ ಒಟ್ಟುಗೂಡಿಸುವುದಂತೂ ಅಲ್ಲ ಎನ್ನುವುದು ರಾಜಕೀಯ ಪಂಡಿತರ ಮಾತು.



