ಯತೀಂದ್ರ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಗಳನ್ನು ನೋಡಿದರೆ.. ಯತೀಂದ್ರ ಅವರು ಸಿದ್ದರಾಮಯ್ಯ ವರ್ಸಸ್ ಡಿಕೆ ಶಿವಕುಮಾರ್ ಗೇಂನಲ್ಲಿ ದಾಳವೋ.. ದಳಪತಿಯೋ.. ಹರಕೆಯ ಕುರಿಯೋ ಎಂಬ ಅನುಮಾನ ಮೂಡುವುದು ಸಹಜ. ಆದರೆ.. ರಾಜಕೀಯ ಪಂಡಿತರ ಪ್ರಕಾರ.. ಡಿಕೆ ಶಿವಕುಮಾರ್ ಅವರೂ ದಂಗಾಗುವಂತೆ ಚದುರಂಗದ ಆಟ ನಡೆಸುತ್ತಿದ್ದಾರಂತೆ ಯತೀಂದ್ರ.
ʻಸಿದ್ದರಾಮಯ್ಯ ಅವರೇ 5 ವರ್ಷ ಸಿಎಂʼ ಎಂದು ಬಹಿರಂಗವಾಗಿ ಖಡಾಖಂಡಿತವಾಗಿ ಹೇಳಿದ ಮೊದಲಿಗನೇ ಯತೀಂದ್ರ. ಬೆಳಗಾವಿ ಸೆಷನ್ ವೇಳೆ ಹೇಳಿದ್ದು ಅವರೇ. ಬೆಂಗಳೂರು ಸೆಷನ್ ಮುಗಿದ ಮೇಲೆ ಹೇಳಿದ್ದೂ ಅವರೇ. ಮತ್ತೆ ಮತ್ತೆ ಹೇಳುತ್ತಿದ್ದಾರೆ. ಯತೀಂದ್ರ ಅವರೇ ನಮ್ಮ ಹೈಕಮಾಂಡ್ ಎನ್ನುವ ಮೂಲಕ ಡಿಕೆ ಸೇಫ್ ಗೇಮ್ ಆಡುತ್ತಿದ್ದಾರೆ. ಅವರ ಬೆಂಬಲಿಗರಾದ ಇಕ್ಬಾಲ್ ಹುಸೇನ್, ಶಿವಗಂಗಾ ಬಸವರಾಜ್, ರವಿ ಗಣಿಗ ಅವರು ಮಾತ್ರವೇ ಯತೀಂದ್ರರ ವಿರುದ್ಧ ಗುರ್ ಗುರ್ ಎನ್ನುತ್ತಿರುವುದು. ಮಿಕ್ಕಂತೆ ಯಾರೂ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಯತೀಂದ್ರ ಅವರಿಗೆ ಇದು ಚೆನ್ನಾಗಿ ಗೊತ್ತು.
ಸಿದ್ದರಾಮಯ್ಯ ಅವರ ಮಗನ ಮೇಲೆ ಡಿಕೆ ರಾಹುಲ್ ಗಾಂಧಿಗೆ ದೂರು ಕೊಡೋಕೆ ಆಗಲ್ಲ. ಇತ್ತ ತಾವೂ ಆಕ್ಷನ್ ತಗೊಳ್ಳೋಕೆ ಆಗಲ್ಲ. ಕ್ರಮ ಕೈಗೊಂಡರೆ.. ನೋಟಿಸ್ ಕೊಟ್ಟರೆ ಸಿದ್ದರಾಮಯ್ಯ ವಿರುದ್ಧ ಬಹಿರಂಗ ಸಮರ ಸಾರಿದಂತೆ. ಅದು ಎಲ್ಲಿಗೆ ಹೋಗಿ ಮುಟ್ಟಬಹುದು ಎಂಬ ಅರಿವು ಡಿಕೆಗೆ ಇದೆ. ಹೀಗಾಗಿ ಅವರು ಬ್ಯಾಕ್ ಫುಟ್‌ನಲ್ಲಿದ್ದುಕೊಂಡೇ ಆಡ್ತಾರೆ. ಆಡ್ತಿದ್ದಾರೆ.
ಇತ್ತ ಯತೀಂದ್ರ ಅವರಿಗೆ ಪಾಲಿಟಿಕ್ಸ್ ಬ್ರೆಡ್ & ಬಟರ್ ಅಲ್ಲ. ಅಣ್ಣ ಸತ್ತಮೇಲೆ ಅನಿವಾರ್ಯವಾಗಿ ರಾಜಕೀಯಕ್ಕೆ ಬಂದು, ತಂದೆಯ ಜೊತೆಗೆ ಇರುವವರು. ಹೀಗಾಗಿ ಅವರಿಗೆ ಕಳೆದುಕೊಳ್ಳೋದು ಏನೂ ಇಲ್ಲ. ಸರಳವಾಗಿ ಹೇಳಬೇಕೆಂದರೆ.. ಕ್ರಿಕೆಟ್‌ನಲ್ಲಿ ಪಿಂಚ್ ಹಿಟ್ಟರ್ ಅಥವಾ ನೈಟ್ ವಾಚ್‌ಮನ್ ಸ್ಟೈಲಿನಲ್ಲಿ ಬಂದಿರುವವರು. ಇನ್ನುಳಿದಂತೆ ಸಿದ್ದರಾಮಯ್ಯ ಬಣದ ಸತೀಶ್ ಜಾರಕಿಹೊಳಿ, ಮಹದೇವಪ್ಪ, ಜಮೀರ್ ಅಹ್ಮದ್, ಎಂಬಿ ಪಾಟೀಲ್.. ಇತ್ಯಾದಿ ಇತ್ಯಾದಿ ನಾಯಕರೆಲ್ಲ ಜಸ್ಟ್ ಉಘೇ ಉಘೇ ಅಂತಿದ್ದಾರೆ. ಹೈಕಮಾಂಡ್ ಫೈನಲ್ ಎಂಬ ಗುರಾಣಿಯಂತೂ ಇದ್ದೇ ಇದೆ. ವಿಶೇಷ ಅಂದ್ರೆ.. ʻಹೈಕಮಾಂಡ್ ಫೈನಲ್ʼ ಎಂಬ ಗುರಾಣಿಯನ್ನು ಸ್ವತಃ ಯತೀಂದ್ರ ಅವರೂ ಬಳಸ್ತಿದ್ದಾರೆ.
ಯತೀಂದ್ರ ನಮ್ಮ ಹೈಕಮಾಂಡ್ ಅಂತಾ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ. ಹೀಗಾಗಿ ನಾನೂ ಅದನ್ನೇ ಹೇಳುತ್ತೇನೆ, ಯತೀಂದ್ರ ನಮ್ಮ ಹೈಕಮಾಂಡ್ ಅನ್ನೋದನ್ನ ನೂರಕ್ಕೆ ನೂರರಷ್ಟು ಒಪ್ಪಿಕೊಳ್ತೇವೆ. ಯಾರೂ ಸ್ಟೇಟ್ಮೆಂಟ್ ಕೊಡಬೇಡಿ ಅಂತ ನಾಲ್ಕು ಬಾರಿ ಹೇಳಿದ್ರು. ಆದ್ರೂ ಸ್ಟೇಟ್ಮೆಂಟ್ ಕೊಡ್ತಿದ್ದಾರೆ ಅಂದ್ರೆ ಅವರೇ ಸುಪ್ರೀಂ. ಖರ್ಗೆಗಿಂತ ಜಾಸ್ತಿನಾ, ಡಿಕೆಗಿಂತ ಕಡಿಮೆನಾ ಅಂತಾ ಹೇಳಲು ಆಗಲ್ಲ. ಬೇಡ ಅಂದ್ರೂ ಮಾತನಾಡುತ್ತಿದ್ದಾರೆ ಅಂದ್ರೆ ಪವರ್ಫುಲ್ ಮ್ಯಾನ್ ಎಂದು ಹೇಳುವ ಮೂಲಕ ಡಿಕೆ ಬಣದ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಆದರೆ..ಅದು ಅಸಹಾಯಕತೆಯ ಆಕ್ರಂದನದಂತೆ ಕೇಳಿಸುತ್ತಿದೆ.



